ನಡೆಯಲು ಆಗ್ತಿದೆ; ಪಾದದ ಗಾಯದ ಕುರಿತು ಅಪ್ಡೇಟ್ ನೀಡಿದ ಸೂರ್ಯಕುಮಾರ್ ಯಾದವ್
Suryakumar Yadav: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಗಾಯಗೊಂಡರು. ಪಂದ್ಯದ ಬಳಿಕ ತಮ್ಮ ಗಾಯದ ಅಪ್ಡೇಟ್ ಅನ್ನು ಸೂರ್ಯ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 (South Africa vs India) ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav), ಆ ಬಳಿಕ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಪಾದವು ತಿರುಚಿಕೊಂಡಂತಾದ ಕಾರಣದಿಂದಾಗಿ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಸಮಯದಲ್ಲಿ ಮೈದಾನದಿಂದ ಹೊರಗುಳಿದರು.
ಜೊಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಡಿಸೆಂಬರ್ 14ರ ಗುರುವಾರ ನಡೆದ ಪಂದ್ಯದಲ್ಲಿ, ಭಾರತವು ಹರಿಣಗಳಿಗೆ 202 ರನ್ ಗುರಿ ನೀಡಿತು. ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯ ಪಾದದ ನೋವು ಅನುಭವಿಸಿದರು. ವೇಗಿ ಮೊಹಮ್ಮದ್ ಸಿರಾಜ್ ಎಸೆದ ಮೂರನೇ ಓವರ್‌ನಲ್ಲಿ ರೀಜಾ ಹೆಂಡ್ರಿಕ್ಸ್ ಹೊಡೆದ ಹೊಡೆತವನ್ನು ತಡೆದ ಸೂರ್ಯ, ಚೆಂಡನ್ನು ಎಸೆಯುವ ಸಂದರ್ಭದಲ್ಲಿ ಸಮತೋಲನ ಕಳೆದುಕೊಂಡರು. ಆಗ ಪಾದ ತಿರುಚಿಕೊಂಡಂತಾಯ್ತು.
ಇದನ್ನೂ ಒದಿ | ಸೌತ್ ಆಫ್ರಿಕಾದಲ್ಲಿ ಸೂರ್ಯಕುಮಾರ್ ಸುನಾಮಿ; ಶತಕದೊಂದಿಗೆ ರಾಶಿ ರಾಶಿ ವಿಶ್ವದಾಖಲೆ ನಿರ್ಮಿಸಿದ ಸ್ಕೈ
ಆ ಬಳಿಕ ಭಾರತ ತಂಡದ ಸಹಾಯಕ ಸಿಬ್ಬಂದಿ ಮತ್ತು ಫಿಸಿಯೋ ಬಂದು ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಆ ಬಳಿಕ ಸ್ಕೈ ಫೀಲ್ಡಿಂಗ್ ಮಾಡಲಿಲ್ಲ. ಹೀಗಾಗಿ ನಾಯಕನ ಅನುಪಸ್ಥಿತಿಯಲ್ಲಿ ಉಪನಾಯಕ ರವೀಂದ್ರ ಜಡೇಜಾ ತಂಡದ ಮುಂದಾಳತ್ವ ವಹಿಸಿ ಪಂದ್ಯವನ್ನು ಮುನ್ನಡೆಸಿದರು.
ಪಂದ್ಯದಲ್ಲಿ 106 ರನ್‌ಗಳ ಅಂತರದಿಂದ ಭಾರತ ಜಯ ಸಾಧಿಸಿತು. ಪಂದ್ಯದ ನಂತರ ನಡೆದ ಪ್ರೆಸೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೂರ್ಯಕುಮಾರ್, ತಮ್ಮ ಕಾಲಿನ ಗಾಯದ ಕುರಿತು ಮಾತನಾಡಿದರು. “ನಾನು ಚೆನ್ನಾಗಿದ್ದೇನೆ. ನಡೆಯುತ್ತಿದ್ದೇನೆ. ಸದ್ಯ ಒಂದೊಳ್ಳೆಯ ಭಾವನೆ ಇದೆ. ಪಂದ್ಯವನ್ನು ಗೆದ್ದರೆ ಅದು ನನಗೆ ಹೆಚ್ಚು ಸಂತೋಷ ನೀಡುತ್ತದೆ,” ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ | ಸೂರ್ಯ ಶತಕ, ಕುಲ್ದೀಪ್ಗೆ 5 ವಿಕೆಟ್; ದ.ಆಫ್ರಿಕಾ ವಿರುದ್ಧ ಭಾರತಕ್ಕೆ 106 ರನ್‌ಗಳ ಗೆಲುವು, ಸರಣಿ ಸಮಬಲ
ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಸೂರ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಟಿ20 ಕ್ರಿಕೆಟ್‌ನಲ್ಲಿ 4ನೇ ಶತಕ ಸಿಡಿಸಿದ ಅವರು, ನಾಯಕನಾಗಿ ಮೊದಲ ಶತಕ ಬಾರಿಸಿದರು.
ಕೇವಲ 55 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಭಾರತದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಮೂರಂಕಿ ತಲುಪಿದರು. ಆ ಮೂಲಕ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಸೂರ್ಯಕುಮಾರ್ ಕೇವಲ 57 ಟಿ20 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕ ಗಳಿಸಿದ ವಿಶೇಷ ಸಾಧನೆ ಮಾಡಿದರು ಈ ಹಿಂದೆ. ಅನುಭವಿ ಆರಂಭಿಕ ಆಟಗಾರ ರೋಹಿತ್ 79 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಅತ್ತ ಮ್ಯಾಕ್ಸ್‌ವೆಲ್ 92ನೇ ಪಂದ್ಯದಲ್ಲಿ ನಾಲ್ಕನೇ ಶತಕ ಗಳಿಸಿದ್ದರು.
ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 201 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಯಶಸ್ವಿ ಜೈಸ್ವಾಲ್ 60 ರನ್ ಸಿಡಿಸಿದರು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 13.5 ಓವರ್ಗಳಲ್ಲಿ 95 ರನ್ಗಳಿಸಿ ಆಲೌಟ್ ಆಯ್ತು. ಸ್ಪಿನ್ನರ್ ಕುಲ್ದೀಪ್ ಯಾದವ್ 2.5 ಓವರ್ಗಳಲ್ಲಿ 17 ರನ್ ನೀಡಿ 5 ವಿಕೆಟ್ ಪಡೆದರು. ಉಭಯ ತಂಡಗಳು ಸರಣಿಯನ್ನು 1-1 ಅಂತರದೊಂದಿಗೆ ಸಮಬಲ ಸಾಧಿಸಿದವು.