ಐದು ಪಂದ್ಯಗಳಲ್ಲಿ 28 ರನ್, ಕಳೆದ ನಾಲ್ಕು ಸರಣಿಗಳಿಂದ ನಡೆಯುತ್ತಿಲ್ಲ ಸೂರ್ಯನ ಪ್ರತಾಪ; ಕ್ಯಾಪ್ಟನ್ಸಿಗೆ ಕುತ್ತು ಸಾಧ್ಯತೆ?
Suryakumar Yadav: ಸೂರ್ಯಕುಮಾರ್ ಯಾದವ್ ನಾಯಕನಾಗಿ ಯಶಸ್ಸು ಕಾಣುತ್ತಿದ್ದರೂ ಬ್ಯಾಟಿಂಗ್ನಲ್ಲಿ ಅವರ ಕೆಟ್ಟ ಪ್ರದರ್ಶನ ಮುಂದುವರೆದಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಕಳೆದ ನಾಲ್ಕು ಟಿ20ಐ ಸಿರೀಸ್ಗಳಲ್ಲಿ ಸೂರ್ಯ ಬ್ಯಾಟ್ ಸದ್ದೇ ಮಾಡಿಲ್ಲ. ಇನ್ನಷ್ಟು ವಿವರ ಈ ಮುಂದಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಅಬ್ಬರಿಸಿದ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್, ಇದೀಗ ತಾನೇ ನಾಯಕನಾಗಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದರೂ ಅವರಿಂದ ರನ್ ಬರುತ್ತಿಲ್ಲವಲ್ಲ ಎಂಬುದು ವಿಪರ್ಯಾಸದ ಸಂಗತಿ. ಅವರ ಕಳಪೆ ಫಾರ್ಮ್ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಈ ಹಿಂದೆ ಸಾಮಾನ್ಯ ಆಟಗಾರನಾಗಿದ್ದಾಗ ಮೈದಾನದ ಮೂಲೆಮೂಲೆಗೂ ಚೆಂಡಿನ ದರ್ಶನ ಮಾಡಿಸುತ್ತಿದ್ದ ಸೂರ್ಯ, ಜವಾಬ್ದಾರಿಯ ಹೊತ್ತ ಬಳಿಕ ತಂಡಕ್ಕೆ ಯಶಸ್ಸು ತಂದುಕೊಡುತ್ತಿದ್ದರೂ ತಾನು ಮಾತ್ರ ಪದೆಪದೇ ವೈಫಲ್ಯದ ಸುಳಿಗೆ ಸಿಲುಕಿ ಲಯಕ್ಕೆ ಮರಳಲು ನೀರಿನಲ್ಲಿರದ ಮೀನಿನಂತೆ ಒದ್ದಾಡುತ್ತಿದ್ದಾರೆ.
ಫೆಬ್ರವರಿ 2ರ ಭಾನುವಾರ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿ ಜೊತೆಗೆ ಅದಕ್ಕೂ ಹಿಂದಿನ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಸೌತ್ ಆಫ್ರಿಕಾ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬುದಕ್ಕೆ ಸೂರ್ಯ ನೀಡಿರುವ ಕಳಪೆ ಪ್ರದರ್ಶನದ ಅಂಕಿ-ಅಂಶಗಳೇ ಸಾಕ್ಷಿ (ಟಿ20 ವಿಶ್ವಕಪ್ ಬಳಿಕ). ಸತತ ವೈಫಲ್ಯಗಳ ನಡುವೆ ಹೊಸ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪ್ರಮುಖವಾಗಿ ನಾಯತಕತ್ವ ಅವರಿಗೆ ಭಾರವಾಗುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುವಂತೆ ಮಾಡಿದೆ. ಇದು ನಾಯಕತ್ವಕ್ಕೆ ಕುತ್ತು ತಂದಿದೆ ಎಂದೂ ಚರ್ಚೆಗಳು ಆರಂಭವಾಗಿವೆ. ಹಾರ್ದಿಕ್ಗೆ ಸಾರಥ್ಯ ವಹಿಸಿ ಸೂರ್ಯನನ್ನು ಆಟಗಾರನಾಗಿ ಕಣಕ್ಕಿಳಿಸಬೇಕು ಎಂಬುದು ಹಲವರ ವಾದವೂ ಹೌದು. ಈ ಚರ್ಚೆ ಬಿಸಿಸಿಐ ತನಕವೂ ಹೋಗಿದೆ ಎನ್ನಲಾಗಿದೆ.
ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಸ್ಥಿತಿ ಕೆಟ್ಟದಾಗಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯನ್ನು ನಾಯಕನಾಗಿ 4-1 ರಿಂದ ಗೆದ್ದ ಸೂರ್ಯ, ಬ್ಯಾಟರ್ ಆಗಿ ಸಂಪೂರ್ಣವಾಗಿ ವಿಫಲರಾದರು. ಐದು ಪಂದ್ಯಗಳಲ್ಲಿ 28 ರನ್ ಗಳಿಸಲಷ್ಟೇ ಶಕ್ತರಾದರು. ಇದು ಮುಜುಗರದ ದಾಖಲೆಯೂ ಹೌದು. 2024ರ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 3 ಇನ್ನಿಂಗ್ಸ್ಗಳಲ್ಲಿ ಕೇವಲ 26 ರನ್ ತಮ್ಮ ಖಾತೆಗೆ ಸೇರಿಸಿದ್ದರು. ಈ ಬಾರಿ 5 ಇನ್ನಿಂಗ್ಸ್ಗಳಲ್ಲಿ ಕೇವಲ 28 ರನ್ ಗಳಿಸಿರುವ ಸ್ಕೈ, ಸರಾಸರಿ ಈ 5.60 ಆಗಿದೆ. ನಾಯಕನಾಗಿ ತನ್ನ ದಾಖಲೆಯನ್ನು ತಾನೇ ಮುರಿದಿದ್ದಾರೆ. ಸೌತ್ ಆಫ್ರಿಕಾ ಸರಣಿಯಲ್ಲಿ ಕ್ಯಾಪ್ಟನ್ ಆಗಿ 8.66 ಸರಾಸರಿ ಹೊಂದಿದ್ದರು. 3ನೇ ಸ್ಥಾನದಲ್ಲಿ ರೋಹಿತ್ ಶರ್ಮಾ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 14.33 ಸರಾಸರಿಯಲ್ಲಿ 43 ರನ್ ಗಳಿಸಿದ್ದರು.
ಕಳೆದ 4 ಸರಣಿಗಳಲ್ಲಿ ಸೂರ್ಯ ಪ್ರದರ್ಶನ (ಟಿ20ಐ)
ಪಂದ್ಯ - 15
ರನ್ - 258
50/100 - 02/00
4/6s - 30/13
ಸ್ಟ್ರೈಕ್ರೇಟ್ - 161.25
ಸರಾಸರಿ - 18.42
ಗರಿಷ್ಠ ಸ್ಕೋರ್ - 75
ಐಪಿಎಲ್ನಲ್ಲಿ ಸೂರ್ಯ ಲಯಕ್ಕೆ ಮರಳುವುದು ಅನಿವಾರ್ಯ
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದಿರುವ ಭಾರತಕ್ಕೆ ಮುಂದಿನ ಅಂತಾರಾಷ್ಟ್ರೀಯ ಟಿ20 ಪಂದ್ಯ ಇರುವುದು ಆಗಸ್ಟ್ನಲ್ಲಿ. ಅಲ್ಲಿಯ ತನಕ ರೆಸ್ಟ್ ಸಿಗಲಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ತಂಡದ ಬ್ಯಾಟಿಂಗ್ ಪಿಲ್ಲರ್ ಆಗಿರುವ ಸೂರ್ಯ ಲಯಕ್ಕೆ ಮರಳುವುದು ಅನಿವಾರ್ಯ. ಆತನ ಫಾರ್ಮ್ ಪ್ರಮುಖ ಪಾತ್ರವಹಿಸಲಿದೆ. ಹೀಗಾಗಿ 18ನೇ ಆವೃತ್ತಿಯ ಐಪಿಎಲ್ನಲ್ಲಿ ಬ್ಯಾಟಿಂಗ್ನಲ್ಲಿ ಸದ್ದು ಮಾಡಬೇಕು. ಅಲ್ಲದೆ, ನಾಯಕನಾಗಿಯೂ ಐಸಿಸಿ ಟೂರ್ನಿಯಲ್ಲಿ ತಂಡ ಮುನ್ನಡೆಸಲು ಇನ್ನಷ್ಟು ಪಟ್ಟು ಕಲಿಯಬೇಕು. ತನ್ನ ಟೀಕಿಸಿದವರಿಗೆ ತನ್ನ ಬ್ಯಾಟ್ನಿಂದಲೇ ಉತ್ತರ ನೀಡಬೇಕು. ಮತ್ತೊಂದೆಡೆ ಸೂರ್ಯ ಫ್ಲಾಪ್ ಶೋ ಐಪಿಎಲ್ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೂ ತಲೆನೋವು ಆರಂಭವಾಗಿದೆ. ಒಂದು ಇಲ್ಲೂ ಸ್ಥಿರ ಪ್ರದರ್ಶನ ನೀಡದೆ ಇದ್ದರೆ ಟಿ20ಐ ತಂಡದ ನಾಯಕತ್ವ ಯುವ ಆಟಗಾರರ ಪಾಲಾದರೂ ಅಚ್ಚರಿ ಇಲ್ಲ.
