ಸೌತ್ ಆಫ್ರಿಕಾದಲ್ಲಿ ಸೂರ್ಯಕುಮಾರ್ ಸುನಾಮಿ; ಶತಕದೊಂದಿಗೆ ರಾಶಿ ರಾಶಿ ವಿಶ್ವದಾಖಲೆ ನಿರ್ಮಿಸಿದ ಸ್ಕೈ
ಕನ್ನಡ ಸುದ್ದಿ  /  ಕ್ರಿಕೆಟ್  /  ಸೌತ್ ಆಫ್ರಿಕಾದಲ್ಲಿ ಸೂರ್ಯಕುಮಾರ್ ಸುನಾಮಿ; ಶತಕದೊಂದಿಗೆ ರಾಶಿ ರಾಶಿ ವಿಶ್ವದಾಖಲೆ ನಿರ್ಮಿಸಿದ ಸ್ಕೈ

ಸೌತ್ ಆಫ್ರಿಕಾದಲ್ಲಿ ಸೂರ್ಯಕುಮಾರ್ ಸುನಾಮಿ; ಶತಕದೊಂದಿಗೆ ರಾಶಿ ರಾಶಿ ವಿಶ್ವದಾಖಲೆ ನಿರ್ಮಿಸಿದ ಸ್ಕೈ

Suryakumar Yadav: ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ಸಿಡಿಸಿದ್ದಾರೆ. ಆ ಮೂಲಕ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವದಾಖಲೆ ಪಟ್ಟಿ ಸೇರಿಕೊಂಡಿದ್ದಾರೆ.

ಸೂರ್ಯಕುಮಾರ್‌ ಯಾದವ್
ಸೂರ್ಯಕುಮಾರ್‌ ಯಾದವ್ (AP)

ದಕ್ಷಿಣ ಆಫ್ರಿಕಾ ವಿರುದ್ಧದ (South Africa vs India) 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅಬ್ಬರಿಸಿದ್ದಾರೆ. ಹರಿಣಗಳ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ ಚುಟುಕು ಸ್ವರೂಪದ ನಂಬರ್‌ ವನ್‌ ಬ್ಯಾಟರ್‌ ದಾಖಲೆ ನಿರ್ಮಿಸಿದ್ದಾರೆ.

ಡಿಸೆಂಬರ್ 14ರ ಗುರುವಾರವಾರವಾದ ಇಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯ ಸೆಂಚುರಿ ಬಾರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 4ನೇ ಶತಕ ಸಿಡಿಸಿದ ಅವರು, ನಾಯಕನಾಗಿ ಮೊದಲ ಶತಕ ಬಾರಿಸಿದರು.

ಕೇವಲ 55 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು. ಭಾರತದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಮೂರಂಕಿ ತಲುಪಿದರು. ಆ ಮೂಲಕ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಸರಿಗಟ್ಟಿದರು. ಸೂರ್ಯಕುಮಾರ್ ಕೇವಲ 57 ಟಿ20 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕ ಗಳಿಸಿದ ವಿಶೇಷ ಸಾಧನೆ ಮಾಡಿದ್ದಾರೆ. ಅನುಭವಿ ಆರಂಭಿಕ ಆಟಗಾರ ರೋಹಿತ್ 79 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಅತ್ತ ಮ್ಯಾಕ್ಸ್‌ವೆಲ್ 92ನೇ ಪಂದ್ಯದಲ್ಲಿ ನಾಲ್ಕನೇ ಶತಕ ಗಳಿಸಿದ್ದರು.

ಇದನ್ನೂ ಓದಿ | ಇಂಡೋ-ಆಫ್ರಿಕಾ ಮೂರನೇ ಟಿ20; ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ

ಈವರೆಗೆ ರೋಹಿತ್ ಮತ್ತು ಮ್ಯಾಕ್ಸ್‌ವೆಲ್ ಅವರ ಹೆಸರಲ್ಲಿದ್ದ ವಿಶ್ವದಾಖಲೆಯ ಪಟ್ಟಿಗೆ ಈಗ ಸೂರ್ಯ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ 2 ಶತಕಗಳನ್ನು ಬಾರಿಸಿದ್ದ ಸ್ಕೈ, ಈ ವರ್ಷ ಮತ್ತೆ 2 ಶತಕ ಸಿಡಿಸಿದರು. ಆ ಮೂಲಕ ಚುಟುಕು ಕ್ರಿಕೆಟ್‌ಗೆ ನಾನೇ ಕಿಂಗ್‌ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಭಾರತದ ಕಾಯಂ ನಾಯಕ ರೋಹಿತ್, 2015ರಿಂದ 2018ರವರೆಗೆ 4 ವರ್ಷಗಳಲ್ಲಿ 4 ಟಿ20 ಶತಕ ಬಾರಿಸಿದ್ದಾರೆ. 8 ವರ್ಷಗಳ ಅವಧಿಯಲ್ಲಿ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್ 4 ಸೆಂಚುರಿ ಬಾರಿಸಿದ್ದಾರೆ.‌ ಆದರೆ, ಸೂರ್ಯಕುಮಾರ್ ಮಾತ್ರ ಕೇವಲ ಎರಡು ವರ್ಷಗಳಲ್ಲಿ ಈ ನಾಲ್ಕು ಶತಕ ಗಳಿಸಿದ್ದಾರೆ. ಇದು ಇವರ ಶರವೇಗಕ್ಕೆ ಸಾಕ್ಷಿ.

ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ

  • ಗ್ಲೆನ್ ಮ್ಯಾಕ್ಸ್‌ವೆಲ್ -4 (2016ರಿಂದ 2023) -57 ಪಂದ್ಯ
  • ರೋಹಿತ್ ಶರ್ಮಾ -4 (2015ರಿಂದ 2018) -79 ಪಂದ್ಯ
  • ಸೂರ್ಯಕುಮಾರ್ ಯಾದವ್ -4 (2022ರಿಂದ 2023) -92 ಪಂದ್ಯ
  • ಬಾಬರ್ ಅಜಾಮ್ -3 (2021 ರಿಂದ 2023)
  • ಕಾಲಿನ್‌ ಮನ್ರೋ -3

ಮತ್ತೊಂದೆಡೆ ದಕ್ಷಿಣ ಆಫ್ರಿಕಾದಲ್ಲಿ ಟಿ20 ಶತಕ ಬಾರಿಸಿದ 5ನೇ ಬ್ಯಾಟರ್ ಸೂರ್ಯಕುಮಾರ್. ಈ ಹಿಂದೆ ಕ್ರಿಸ್ ಗೇಲ್, ಬಾಬರ್ ಅಜಾಮ್, ಮಾರ್ಟಿನ್ ಗಪ್ಟಿಲ್ ಮತ್ತು ಜಾನ್ಸನ್ ಚಾರ್ಲ್ಸ್ ಹರಿಣಗಳ ನಾಡಿನಲ್ಲಿ ಶತಕ ಸಿಡಿಸಿದ್ದಾರೆ.

ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯ

  • ರೋಹಿತ್ ಶರ್ಮಾ (140 ಇನ್ನಿಂಗ್ಸ್) -182
  • ಸೂರ್ಯಕುಮಾರ್ ಯಾದವ್ (57 ಇನ್ನಿಂಗ್ಸ್) -123
  • ವಿರಾಟ್ ಕೊಹ್ಲಿ (107 ಇನ್ನಿಂಗ್ಸ್) -117
  • ಕೆಎಲ್ ರಾಹುಲ್ (68 ಇನ್ನಿಂಗ್ಸ್) -99
  • ಯುವರಾಜ್ ಸಿಂಗ್ (51 ಇನ್ನಿಂಗ್ಸ್) -74

ಟಿ20 ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯರು

  • 10 - ರೋಹಿತ್ ಶರ್ಮಾ (ಶ್ರೀಲಂಕಾ ವಿರುದ್ಧ) 2017
  • 9 - ಸೂರ್ಯಕುಮಾರ್ ಯಾದವ್ (ಶ್ರೀಲಂಕಾ ವಿರುದ್ಧ) 2023
  • 8 - ಕೆಎಲ್ ರಾಹುಲ್ (ಶ್ರೀಲಂಕಾ ವಿರುದ್ಧ) 2017
  • 8 - ಸೂರ್ಯಕುಮಾರ್ ಯಾದವ್ (ದಕ್ಷಿಣ ಆಫ್ರಿಕಾ ವಿರುದ್ಧ) 2023*

Whats_app_banner