ಐಪಿಎಲ್ 2025: ಹಾರ್ದಿಕ್ ಪಾಂಡ್ಯ ಬ್ಯಾನ್; ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ನೂತನ ನಾಯಕ
ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿದೆ, ಹೀಗಾಗಿ ಐಪಿಎಲ್ 2025ರ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.

ಮಾರ್ಚ್ 22ರಂದು ಐಪಿಎಲ್ 18ನೇ ಆವೃತ್ತಿ ಆರಂಭವಾಗುತ್ತದೆ. ಮಾರ್ಚ್ 23ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗಲಿವೆ. ಮೊದಲ ಪಂದ್ಯದಲ್ಲಿ ಎಂಐ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ಪುನರಾವರ್ತಿತ ನಿಧಾನಗತಿಯ ಓವರ್ ರೇಟ್ ತಪ್ಪಿನಿಂದಾಗಿ ತಂಡದ ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿದೆ. ಹೀಗಾಗಿ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಋತುವಿನ ಆರಂಭಿಕ ಪಂದ್ಯದಿಂದಲೇ ಹಾರ್ದಿಕ್ ಬ್ಯಾನ್ ಆಗಿದ್ದಾರೆ. ಹೀಗಾಗಿ ಸೂರ್ಯ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಕಳೆದ ವರ್ಷ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024ರ ಕೊನೆಯ ಪಂದ್ಯದಲ್ಲಿ ಎಂಐ ತಂಡವು ನಿಗದಿತ ಸಮಯಕ್ಕೆ ಅಗತ್ಯ ಓವರ್ ರೇಟ್‌ನಿಂದ ಹಿಂದಿತ್ತು. ಕಳೆದ ವರ್ಷ ತಂಡದಿಂದ ಅದು ಮೂರನೇ ಬಾರಿ ನಡೆದ ಪುನರಾವರ್ತಿತ ತಪ್ಪು ಆಗಿರುವುದರಿಂದ ನಾಯಕ ಹಾರ್ದಿಕ್ ಪಾಂಡ್ಯಗೆ ಪಂದ್ಯದ ಶುಲ್ಕದ ಮೇಲೆ 30 ಶೇ. ದಂಡ ವಿಧಿಸಲಾಗಿತ್ತು. ಅಲ್ಲದೆ ಒಂದು ಪಂದ್ಯದಿಂದ ನಿಷೇಧಿಸಲಾಗಿದೆ.
ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಎರಡನೇ ಪಂದ್ಯದಿಂದ ಹಾರ್ದಿಕ್ ಮತ್ತೆ ನಾಯಕನಾಗಿ ಮರಳಲಿದ್ದಾರೆ. ಮಾರ್ಚ್ 29ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ತಂಡದ ಎರಡನೇ ಪಂದ್ಯಕ್ಕೆ ಹಾರ್ದಿಕ್ ಲಭ್ಯವಿರುತ್ತಾರೆ.
“ಸೂರ್ಯ ಭಾರತ ತಂಡವನ್ನು ಮುನ್ನಡೆಸುತ್ತಾರೆ. ನಾನು ಇಲ್ಲದಿದ್ದಾಗ, ಅವರು ಈ ಸ್ವರೂಪಕ್ಕೆ ಸೂಕ್ತ ಆಯ್ಕೆ ಮತ್ತು ರೋಮಾಂಚನಕಾರಿ ವ್ಯಕ್ತಿ” ಎಂದು ಹಾರ್ದಿಕ್ ಪಾಂಡ್ಯ ಬುಧವಾರ (ಮಾ.19) ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಓವರ್ ರೇಟ್ ನಮ್ಮ ನಿಯಂತ್ರಣದಲ್ಲಿ ಇಲ್ಲ
ಒಂದು ಪಂದ್ಯದಿಂದ ಅಮಾನತು ಕುರಿತು ಕೇಳಿದಾಗ ಪ್ರತಿಕ್ರಿಯೆ ನೀಡಿದ ಪಾಂಡ್ಯ, ಅದು ತಮ್ಮ ನಿಯಂತ್ರಣಕ್ಕೆ ಮೀರಿದ್ದು ಎಂದರು. “ಅದು ನನ್ನ ನಿಯಂತ್ರಣದಲ್ಲಿಲ್ಲ. ಕಳೆದ ವರ್ಷ ಏನಾಯಿತು ಎಂಬುದು ಕ್ರೀಡೆಯ ಒಂದು ಭಾಗ ಅಷ್ಟೇ. ಏನಾಯಿತು ಎಂದರೆ ನಾವು ಕೊನೆಯ ಓವರ್ ಅನ್ನು 2ರಿಂದ ಎರಡೂವರೆ ನಿಮಿಷ ತಡವಾಗಿ ಎಸೆದಿದ್ದೇವೆ. ಆ ಸಮಯದಲ್ಲಿ, ಆಗುವ ಪರಿಣಾಮಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಇದು ದುರದೃಷ್ಟಕರ. ಆದರೆ ನಿಯಮಗಳು ಏನು ಹೇಳುತ್ತವೋ ಅದನ್ನು ನಾವು ಅನುಸರಿಸಬೇಕಾಗುತ್ತದೆ” ಎಂದರು.
ಕಳಪೆ ಫಾರ್ಮ್‌ನಲ್ಲಿ ಸೂರ್ಯಕುಮಾರ್ ಯಾದವ್
ಭಾರತ ರಾಷ್ಟ್ರೀಯ ಟಿ20 ಕ್ರಿಕೆಟ್ ತಂಡದ ನಾಯಕರಾಗಿರುವ ಸೂರ್ಯಕುಮಾರ್, ನಾಯಕತ್ವದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಚುಟುಕು ಸರಣಿಯಲ್ಲಿ 4-1 ಅಂತರದ ಗೆಲುವು ಸಾಧಿಸಲು ತಂಡವನ್ನು ಮುನ್ನಡೆಸಿದ್ದರು. ಆದರೆ ಅವರ ಬ್ಯಾಟಿಂಗ್ ಫಾರ್ಮ್ ಕಳಪೆಯಾಗಿತ್ತು. ಸರಣಿಯ ಐದು ಪಂದ್ಯಗಳಲ್ಲಿ ಅವರು ಕೇವಲ 38 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತು. ಹೀಗಾಗಿ ಈ ಬಾರಿ ಮುಂಬೈ ಪರ ಆಡುವಾಗ ಫಾರ್ಮ್‌ಗೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ ತಂಡವು 2024ರ ಆವೃತ್ತಿಯಲ್ಲಿ ಮಿಂಚಲು ಸಾಧ್ಯವಾಗಿರಲಿಲ್ಲ. 10 ಪಂದ್ಯಗಳಲ್ಲಿ ಸೋತ ತಂಡ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತು.


