ಬದಲಾಗುತ್ತಾ ಹಾರ್ದಿಕ್ ಪಾತ್ರ, ಯಾವ ಆಟಗಾರ ಎಕ್ಸ್​ಫ್ಯಾಕ್ಟರ್? ಮೊದಲ ಟಿ20ಗೂ ಮುನ್ನ ಸೂರ್ಯಕುಮಾರ್ ಮಹತ್ವದ ಹೇಳಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಬದಲಾಗುತ್ತಾ ಹಾರ್ದಿಕ್ ಪಾತ್ರ, ಯಾವ ಆಟಗಾರ ಎಕ್ಸ್​ಫ್ಯಾಕ್ಟರ್? ಮೊದಲ ಟಿ20ಗೂ ಮುನ್ನ ಸೂರ್ಯಕುಮಾರ್ ಮಹತ್ವದ ಹೇಳಿಕೆ

ಬದಲಾಗುತ್ತಾ ಹಾರ್ದಿಕ್ ಪಾತ್ರ, ಯಾವ ಆಟಗಾರ ಎಕ್ಸ್​ಫ್ಯಾಕ್ಟರ್? ಮೊದಲ ಟಿ20ಗೂ ಮುನ್ನ ಸೂರ್ಯಕುಮಾರ್ ಮಹತ್ವದ ಹೇಳಿಕೆ

India vs Sri Lanka: ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸಕ್ಕೆ ಇಂದು ಚಾಲನೆ ಸಿಗಲಿದೆ. ಇಂದು ರಾತ್ರಿ ಪಲ್ಲೆಕೆಲೆಯಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಏನು ಹೇಳಿದ್ದಾರೆ ನೋಡಿ.

ಬದಲಾಗುತ್ತಾ ಹಾರ್ದಿಕ್ ಪಾತ್ರ, ಯಾವ ಆಟಗಾರ ಎಕ್ಸ್​ಫ್ಯಾಕ್ಟರ್? ಮೊದಲ ಟಿ20ಗೂ ಮುನ್ನ ಸೂರ್ಯಕುಮಾರ್ ಮಹತ್ವದ ಹೇಳಿಕೆ
ಬದಲಾಗುತ್ತಾ ಹಾರ್ದಿಕ್ ಪಾತ್ರ, ಯಾವ ಆಟಗಾರ ಎಕ್ಸ್​ಫ್ಯಾಕ್ಟರ್? ಮೊದಲ ಟಿ20ಗೂ ಮುನ್ನ ಸೂರ್ಯಕುಮಾರ್ ಮಹತ್ವದ ಹೇಳಿಕೆ

ಐಸಿಸಿ ಟಿ20 ವಿಶ್ವಕಪ್ ಮತ್ತು ಜಿಂಬಾಬ್ವೆ ಸರಣಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ, ಇದೀಗ ಮತ್ತೊಂದು ಮಹತ್ವದ ಸರಣಿಗೆ ಸಜ್ಜಾಗಿದೆ. ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಟಿ20 ಕಾಯಂ ನಾಯಕ ಸೂರ್ಯಕುಮಾರ್​ ಯಾದವ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಹೊಸ ಅಧ್ಯಾಯ ಆರಂಭಿಸಲು ಸಿದ್ಧವಾಗಿದೆ. ಸಿಂಹಳೀಯರ ನಾಡಿಗೆ ಪ್ರವಾಸ ಬೆಳೆಸಿರುವ ಮೆನ್ ಇನ್ ಬ್ಲ್ಯೂ, ಟಿ20 ಮತ್ತು ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಅದರಂತೆ ಇವತ್ತಿನಿಂದ (ಜುಲೈ 27) 3 ಪಂದ್ಯಗಳ ಟಿ20ಐ ಸರಣಿ ಆರಂಭವಾಗಲಿದೆ.

ಇಂದು (ಜುಲೈ 27) ಪಲ್ಲೆಕೆಲೆಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಭಾರತ ಶುಭಾರಂಭದ ನಿರೀಕ್ಷೆಯಲ್ಲಿದೆ. ಟಿ20 ತಂಡ ಮುನ್ನಡೆಸಲಿರುವ ಸೂರ್ಯಕುಮಾರ್, ಪ್ರಥಮ ಟಿ20ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಕೆಲ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.​ ವಿಶ್ವಕಪ್ ನಂತರ ಟಿ20ಐ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ರೋಹಿತ್​ಗೆ ಉತ್ತರಾಧಿಕಾರಿಯಾಗಿ ಹಾರ್ದಿಕ್​ ಪಾಂಡ್ಯ ನೇಮಕವಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಬಿಸಿಸಿಐ, ಸೂರ್ಯಕುಮಾರ್​ಗೆ ಪಟ್ಟ ಕಟ್ಟುವ ಮೂಲಕ ದೊಡ್ಡ ಬದಲಾವಣೆಯೊಂದಿಗೆ ಅಚ್ಚರಿ ಮೂಡಿಸಿತ್ತು.

ನೂತನ ನಾಯಕ ಸೂರ್ಯ ಮತ್ತು ನೂತನ ಕೋಚ್ ಗಂಭೀರ್​ಗೆ ದೊಡ್ಡ ಅಗ್ನಿಪರೀಕ್ಷೆ ಎದುರಾಗಿದ್ದು, ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್, ರವೀಂದ್ರ ಜಡೇಜಾ ಅಲಭ್ಯತೆಯಲ್ಲಿ 2026ರ ಟಿ20 ವಿಶ್ವಕಪ್​ಗೆ ಬಲಿಷ್ಠ ತಂಡ ಸಿದ್ಧಗೊಳಿಸುವುದೇ ಅವರಿಗೆ ದೊಡ್ಡ ಸವಾಲಾಗಿದೆ. ಪೂರ್ಣಾವಧಿ ನಾಯಕನಾಗಿ ಸೂರ್ಯಕುಮಾರ್​ಗೆ ಮೊದಲ ಸರಣಿ ಇದಾಗಿದ್ದು, ತುಂಬಾ ನಿರೀಕ್ಷೆಯ ಭಾರ ಹೆಚ್ಚಾಗಿದೆ. ಏಕದಿನ ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗೆ ನಾಯಕನಾಗಿದ್ದ ಅನುಭವ ಹೊಂದಿರುವ ಸೂರ್ಯ, ಲಂಕಾ ದಹನಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ್ದು, ಸೂರ್ಯ, ಪಾಂಡ್ಯ, ರಿಯಾನ್ ಪರಾಗ್ ಪಾತ್ರದ ಬಗ್ಗೆ ದೊಡ್ಡ ಹೇಳಿಕೆಗಳನ್ನು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೂರ್ಯಕುಮಾರ್ ಹೇಳಿದ ಪ್ರಮುಖ ವಿಚಾರಗಳು

ಸೂರ್ಯಕುಮಾರ್ ನಾಯಕನಾಗಿ ತನ್ನ ಬ್ಯಾಟಿಂಗ್ ಕುರಿತು ಹೇಳಿದ್ದು, ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಹಾಗಂತ ಬ್ಯಾಟಿಂಗ್​ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮೊದಲಿನಂತೆಯೇ ಬ್ಯಾಟ್​ ಬೀಸಲಿದ್ದೇನೆ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭವಿಷ್ಯದ ಪ್ಲೇಯರ್ ರಿಯಾನ್ ಪರಾಗ್ ಅವರು ಟೀಮ್ ಇಂಡಿಯಾದ ವಿಶೇಷ ಆಟಗಾರ ಎಂದು ಸೂರ್ಯ ಹೇಳಿದ್ದಾರೆ. ಪರಾಗ್​ ಎಕ್ಸ್ ಫ್ಯಾಕ್ಟರ್ ಆಟಗಾರ. ಆಟದ ದಿಕ್ಕನ್ನೇ ಬದಲಿಸುವ ಶಕ್ತಿ ಅವರಿಗಿದೆ ಎಂದು ಕೊಂಡಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಪಾತ್ರದ ಕುರಿತು ತಿಳಿಸಿದ ನೂತನ ನಾಯಕ, ಪಾಂಡ್ಯ ಅವರ ಪಾತ್ರ ಯಾವುದೇ ಕಾರಣಕ್ಕೆ ಬದಲಾಗುವುದಿಲ್ಲ ಎಂದಿದ್ದಾರೆ. ಹಾರ್ದಿಕ್ ಪಾತ್ರ ಮೊದಲಿನಂತೆ ಮುಂದುವರೆಯಲಿದೆ. ಅವರು ತಂಡದ ಪ್ರಮುಖ ಆಟಗಾರ ಎಂದಿದ್ದಾರೆ.

ನನ್ನ ನಾಯಕತ್ವವು ರೋಹಿತ್ ಶರ್ಮಾ ಶೈಲಿಯಂತೆಯೇ ಇರುತ್ತದೆ ಎಂದ ಸೂರ್ಯ, ರೋಹಿತ್ ಅವರಿಂದ ನಾಯಕತ್ವದ ಸಾಮರ್ಥ್ಯವನ್ನು ನಾನು ಕಲಿತಿದ್ದೇನೆ, ಅದೇ ರೀತಿಯಲ್ಲಿ ತಂಡವನ್ನು ಮುನ್ನಡೆಸುತ್ತೇನೆ ಎಂದು ಹೇಳಿದ್ದಾರೆ.

ಗೌತಮ್ ಗಂಭೀರ್ ಜೊತೆಗಿನ ಸಂಬಂಧ ತುಂಬಾ ಚೆನ್ನಾಗಿದೆ. ನಾನು 2014ರ ಐಪಿಎಲ್​ನಲ್ಲಿ ಕೆಕೆಆರ್ ಪರ ಅವರ ನಾಯಕತ್ವದ ಅಡಿಯಲ್ಲಿ ಆಡಿದ್ದೇನೆ. ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹವಿದೆ ಎಂಬುದು ಸೂರ್ಯ ಅವರ ಮಾತಾಗಿತ್ತು.

ಬ್ಯಾಟಿಂಗ್ ಅಭ್ಯಾಸದಿಂದ ಹಿಂದೆ ಸರಿದ ಸೂರ್ಯ

ನಾಯಕನಾದ ನಂತರ ಸೂರ್ಯಕುಮಾರ್ ಕೊಂಚ ಬದಲಾದಂತೆ ಕಾಣುತ್ತಿದ್ದಾರೆ. ಅವರು ತಂಡದ ಪ್ರತಿಯೊಬ್ಬ ಆಟಗಾರರೊಂದಿಗೆ ಮಾತನಾಡಿ ಟಿಪ್ಸ್ ನೀಡುತ್ತಿದ್ದಾರೆ ಮತ್ತು ಅಭಿಪ್ರಾಯ ಕೇಳುತ್ತಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ, ಶ್ರೀಲಂಕಾದಲ್ಲಿ ಸೂರ್ಯ ಹೆಚ್ಚು ಬ್ಯಾಟಿಂಗ್ ಅಭ್ಯಾಸ ನಡೆಸಿಲ್ಲ. ವರದಿಗಳ ಪ್ರಕಾರ, ಕಳೆದ 2 ದಿನಗಳಲ್ಲಿ ಅವರು ಫಿಟ್‌ನೆಸ್ ಡ್ರಿಲ್ ಮತ್ತು ಫೀಲ್ಡಿಂಗ್ ಅಭ್ಯಾಸವನ್ನು ಮಾತ್ರ ಮಾಡಿದ್ದು, ಲಂಕಾ ಮಣಿಸಲು ಗೇಮ್​ಪ್ಲಾನ್ ಮತ್ತು ತಂತ್ರಗಳನ್ನು ರೂಪಿಸುವಲ್ಲಿ ನಿರತರಾದ ಕಾರಣ ಟಿ20 ಕ್ರಿಕೆಟ್​ನ ನಂಬರ್ 2 ಬ್ಯಾಟರ್ ಬ್ಯಾಟಿಂಗ್ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಲು ಸಾಧ್ಯವಾಗಿಲ್ಲವಂತೆ.

(ವರದಿ: ವಿನಯ್ ಭಟ್)

ಇನ್ನಷ್ಟು ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ಯಾರಿಸ್ ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner