ಆಸೀಸ್ ಸರಣಿಗೆ ಸೂರ್ಯ ನಾಯಕ; ವಿಶ್ವಕಪ್ ಸೋಲಿಸಿದವನಿಗೆ ಪಟ್ಟ ಕಟ್ಟಿದ ಬಿಸಿಸಿಐಗೆ ಬುದ್ದಿ ಇಲ್ವಾ ಎಂದ ನೆಟಿಜನ್ಸ್
India vs Australia T20 Series: ಆಸ್ಟ್ರೇಲಿಯಾ ಎದುರಿನ ಐದು ಪಂದ್ಯಗಳ ಟಿ20 ಸಿರೀಸ್ಗೆ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ನೀಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಶ್ವಕಪ್ ಸೋತಿದ್ದೇ ಅವರಿಂದ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ (ICC ODI World Cup 2023) ಸೋಲಿನ ಬೆನ್ನಲ್ಲೇ ಈಗ ಆಸ್ಟ್ರೇಲಿಯಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಗಾಯಗೊಂಡ ಕಾರಣ ತಂಡವನ್ನು ಸೂರ್ಯಕುಮಾರ್ ಯಾದವ್ (Suryakumar Yada) ಮುನ್ನಡೆಸಲಿದ್ದಾರೆ. ವಿಶ್ವಕಪ್ ಆಡಿದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವಕರಿಗೆ ಮಣೆ ಹಾಕಲಾಗಿದೆ. ನವೆಂಬರ್ 23ರಿಂದ ಸರಣಿ ಆರಂಭವಾಗಲಿದೆ.
ಆದರೆ, ವಿಶ್ವಕಪ್ ಆಡಿದ ಸೂರ್ಯಕುಮಾರ್ಗೆ ಮಣೆ ಹಾಕಿರುವುದರ ಜೊತೆಗೆ ನಾಯಕತ್ವ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಬಿಸಿಸಿಐ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ವಿಶ್ವಕಪ್ ಸೋಲಿಗೆ ಕಾರಣರಾದ ಸೂರ್ಯಗೆ ಅವಕಾಶ ನೀಡಿದ್ದೇಕೆ? ನಿಮಗೆ ಬುದ್ದಿ ಇದೆಯೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಫೈನಲ್ನಲ್ಲಿ ಕಳಪೆ ಪ್ರದರ್ಶನ
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡ ಸೂರ್ಯಕುಮಾರ್ ಮಿಂಚಿನ ಪ್ರದರ್ಶನ ನೀಡಲಿಲ್ಲ. ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಸಿಕ್ಕ ಸುವರ್ಣಾವಕಾಶವನ್ನು ಎರಡೂ ಕೈಗೊಳ್ಳುವಲ್ಲಿ ವಿಫಲವಾದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ 10 ಓವರ್ಗಳಿಗೂ ಹೆಚ್ಚು ಕಾಲ ಕ್ರೀಸ್ನಲ್ಲಿದ್ದರೂ ತಂಡದ ಮೊತ್ತವನ್ನು ಏರಿಸುವಲ್ಲಿ ವಿಫಲರಾದರು.
ಫೈನಲ್ನಲ್ಲಿ ಜಡೇಜಾ ಔಟಾದ ಬಳಿಕ 35.5ನೇ ಓವರ್ನಲ್ಲಿ ಕ್ರೀಸ್ಗೆ ಬಂದ ಸೂರ್ಯ, 47.3 ಓವರ್ಗಳವರೆಗೂ ಬ್ಯಾಟ್ ಬೀಸಿದರು. ಆದರೆ ಗಳಿಸಿದ್ದು ಮಾತ್ರ 28 ಎಸೆತಗಳಲ್ಲಿ 18 ರನ್. ಸಿಡಿಸಿದ್ದು, ಒಂದೇ ಒಂದು ಬೌಂಡರಿಯಷ್ಟೆ. ಒಂದು ವೇಳೆ ಸೂರ್ಯ ಅದ್ಭುತ ಪ್ರದರ್ಶನ ನೀಡಿ ಕನಿಷ್ಠ 50 ರನ್ ಸಿಡಿಸಿದ್ದರೆ, ಭಾರತದ ಗೆಲ್ಲುವ ಸಾಧ್ಯತೆ ಹೆಚ್ಚಿಸುತ್ತಿತ್ತು.
ಟೂರ್ನಿಯುದ್ದಕ್ಕೂ ವೈಫಲ್ಯ
ಒಟ್ಟಾರೆ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ ಕೇವಲ 17.66ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿರುವುದು 106 ಮಾತ್ರ. ಇಷ್ಟರ ಮಟ್ಟಿಗೆ ವೈಫಲ್ಯ ಅನುಭವಿಸಿರುವ ಆತನಿಗೆ ಪಟ್ಟ ಕಟ್ಟಿರುವುದು ಸರಿಯೇ ಎಂದು ಬಿಸಿಸಿಐ ಕೇಳಿದ್ದಾರೆ. ಭಾರತೀಯ ಕ್ರಿಕೆಟ್ನಲ್ಲಿ ಅವರೊಬ್ಬ ದೊಡ್ಡ ಅಪರಾಧಿ ಎಂದು ಸೂರ್ಯಗೆ ಜಾಡಿಸಿದ್ದಾರೆ. ಈ ವ್ಯಕ್ತಿಯನ್ನು ಮತ್ತೊಮ್ಮೆ ಭಾರತೀಯ ಜೆರ್ಸಿಯಲ್ಲಿ ಕಂಡರೆ ಅದು ಕ್ರಿಕೆಟ್‌ಗೆ ಮಾಡಿದ ಅವಮಾನ ಎಂದೆಲ್ಲಾ ಟೀಕಿಸಿದ್ದಾರೆ. ಆದರೆ ಕೆಲವರು ಸೂರ್ಯನನ್ನು ಸಮರ್ಥಿಸಿಕೊಂಡಿದ್ದಾರೆ. ಏಕದಿನ ಸರಿಯಾಗಿ ಆಡುವುದಿಲ್ಲ. ಆದರೆ ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ ಎಂದು ಸೂರ್ಯನ ಪರ ವಾದಿಸಿದ್ದಾರೆ.
ಏಷ್ಯನ್ ಗೇಮ್ಸ್ ಆಡಿದ್ದ ಆಟಗಾರರಿಗೆ ಮಣೆ
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಕ್ರಿಕೆಟ್ ತಂಡವು ಚಿನ್ನ ಗೆದ್ದುಕೊಂಡಿತು. ಈ ವೇಳೆ ತಂಡಕ್ಕೆ ಆಯ್ಕೆಯಾಗಿದ್ದ ಬಹುತೇಕ ಆಟಗಾರರು, ಆಸೀಸ್ ಸರಣಿಗೂ ಆಯ್ಕೆಯಾಗಿರುವುದು ವಿಶೇಷ. ಮತ್ತೊಂದೆಡೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್, ಸ್ಪಿನ್ನರ್ ಯುಜುವೇಂದ್ರ ಚಹಲ್ ಮತ್ತು ವೇಗಿ ಭುವನೇಶ್ವರ್ ಕುಮಾರ್ರನ್ನು ಕೈಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾ ಟಿ20 ಸರಣಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್) ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಕೇಶ್ ಕುಮಾರ್.
- ಶ್ರೇಯಸ್ ಅಯ್ಯರ್ ಕೊನೆಯ 2 ಟಿ20 ಪಂದ್ಯಗಳಿಗೆ ತಂಡಕ್ಕೆ ಸೇರಿಕೊಳ್ಳಲಿದ್ದು, ಉಪನಾಯಕನ ಜವಾಬ್ದಾರಿ ವಹಿಸಲಿದ್ದಾರೆ.
ಭಾರತ - ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ವೇಳಾಪಟ್ಟಿ | |||
---|---|---|---|
ಸಂಖ್ಯೆ | ದಿನಾಂಕ | ಪಂದ್ಯ | ಸ್ಥಳ |
1 | ನವೆಂಬರ್ 23 | ಮೊದಲ ಟಿ20 ಪಂದ್ಯ | ವಿಶಾಖಪಟ್ಟಣ |
2 | ನವೆಂಬರ್ 26 | ಎರಡನೇ ಟಿ20 ಪಂದ್ಯ | ತಿರುವನಂತಪುರಂ |
3 | ನವೆಂಬರ್ 28 | ಮೂರನೇ ಟಿ20 ಪಂದ್ಯ | ಗುವಾಹಟಿ |
4 | ಡಿಸೆಂಬರ್ 1 | ನಾಲ್ಕನೇ ಟಿ20 ಪಂದ್ಯ | ರಾಯ್ಪುರ |
5 | ಡಿಸೆಂಬರ್ 3 | ಐದನೇ ಟಿ20 ಪಂದ್ಯ | ಬೆಂಗಳೂರು |