ಟೆಸ್ಟ್ ಕ್ರಿಕೆಟ್ ಆಡಬೇಕೆಂದ ಸೂರ್ಯಕುಮಾರ್ ಯಾದವ್ ಕನಸು ನುಚ್ಚುನೂರು: ಅಷ್ಟಕ್ಕು ಏನಾಯಿತು ನೋಡಿ
Suryakumar Yadav: ಬುಚ್ಚಿ ಬಾಬು ಟೂರ್ನಮೆಂಟ್‌ನಲ್ಲಿ ಮುಂಬೈ ಮತ್ತು ಟಿಎನ್‌ಸಿಎ ಇಲೆವೆನ್ ನಡುವೆ ನಡೆದ ಪಂದ್ಯದ ಮೂರನೇ ದಿನ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಕೈಗೆ ಗಾಯ ಮಾಡಿಕೊಂಡರು. ಇದಾದ ನಂತರ ಅವರು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ಮಾಡಲಿಲ್ಲ.
Suryakumar Yadav: ಭಾರತೀಯ ಕ್ರಿಕೆಟ್‌ನ 2024-25ರ ದೇಶೀಯ ಋತುವು ಸೆಪ್ಟೆಂಬರ್ 5 ರಂದು ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗಲಿದೆ. ಟೀಮ್ ಇಂಡಿಯಾದ ಹಲವು ಸ್ಟಾರ್ ಆಟಗಾರರು ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ಟೆಸ್ಟ್ ತಂಡದಲ್ಲಿ ಪುನರಾಗಮನ ಮಾಡಲು ಕೆಲವು ಆಟಗಾರರು ಕಣ್ಣಿಟ್ಟಿದ್ದಾರೆ. ಇದರಲ್ಲಿ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೆಸರೂ ಸೇರಿದೆ. ಆದರೆ, ದುಲೀಪ್ ಟ್ರೋಫಿಗೂ ಮುನ್ನ ಸೂರ್ಯಕುಮಾರ್ ಯಾದವ್ ಅದೃಷ್ಟ ಕೈಕೊಟ್ಟಿದೆ. ಟೆಸ್ಟ್ ತಂಡದಲ್ಲಿ ಅವರ ಪುನರಾಗಮನದ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ.
ಸೂರ್ಯಕುಮಾರ್ ಯಾದವ್ಗೆ ದೊಡ್ಡ ಶಾಕ್
ಗಾಯದ ಸಮಸ್ಯೆಯಿಂದಾಗಿ ಸೂರ್ಯಕುಮಾರ್ ಯಾದವ್ ದುಲೀಪ್ ಟ್ರೋಫಿಯ ಪ್ರಾಥಮಿಕ ಸುತ್ತಿನಿಂದ ಹೊರಗುಳಿದಿದ್ದಾರೆ. ಕಳೆದ ವಾರ ಕೊಯಮತ್ತೂರಿನಲ್ಲಿ ನಡೆದ ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಮುಂಬೈಗಾಗಿ ಪೂರ್ವ-ಋತುವಿನ ಪಂದ್ಯದ ವೇಳೆ ಅವರು ಕೈಗೆ ಗಾಯ ಮಾಡಿಕೊಂಡರು. ಈ ಗಾಯದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯಕುಮಾರ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಮತ್ತು ಅವರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಲ್ಲಿ ನಿಯಮಿತ ತಪಾಸಣೆಗಾಗಿ ತೆರಳಿದ್ದಾರೆ.
ಬುಚ್ಚಿ ಬಾಬು ಟೂರ್ನಮೆಂಟ್‌ನಲ್ಲಿ ಮುಂಬೈ ಮತ್ತು ಟಿಎನ್‌ಸಿಎ ಇಲೆವೆನ್ ನಡುವೆ ನಡೆದ ಪಂದ್ಯದ ಮೂರನೇ ದಿನ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಕೈಗೆ ಗಾಯ ಮಾಡಿಕೊಂಡರು. ಇದಾದ ನಂತರ ಅವರು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ಮಾಡಲಿಲ್ಲ.
ಸೂರ್ಯಕುಮಾರ್ ಇತ್ತೀಚೆಗಷ್ಟೆ ಭಾರತ ಟೆಸ್ಟ್ ತಂಡಕ್ಕೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ನನಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಬೇಕು ಎಂಬ ದೊಡ್ಡ ಆಸೆಯಿದೆ ಎಂದು ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ದೃಷ್ಟಿ ನೆಟ್ಟಿದ್ದರು. ಈ ಕಾರಣಕ್ಕಾಗಿ, ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು, ಅವರು ಪೂರ್ವ-ಋತುವಿನ ಬುಚ್ಚಿ ಬಾಬು ಪಂದ್ಯವಳಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದರು. ಬಳಿಕ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ಗೆ ಆಯ್ಕೆ ಆಗುವ ಕನಸು ಕಂಡಿದ್ದರು. ಆದರೆ ಈ ಗಾಯವು ಸದ್ಯಕ್ಕೆ ಅವರ ಪುನರಾಗಮನದ ಕನಸನ್ನು ನುಚ್ಚುನೂರು ಮಾಡಿದೆ.
ಟೀಮ್ ಇಂಡಿಯಾ ಪರ ಆಡಿದ್ದು ಕೇವಲ 1 ಟೆಸ್ಟ್
ಸೂರ್ಯಕುಮಾರ್ ಯಾದವ್ ಅವರನ್ನು ಇತ್ತೀಚೆಗೆ ಟಿ20 ನಾಯಕರನ್ನಾಗಿ ಮಾಡಲಾಗಿದೆ. ಈ ಸ್ವರೂಪದಲ್ಲಿ ಅವರು ನಂಬರ್ 1 ಬ್ಯಾಟರ್ ಆಗಿದ್ದಾರೆ. ಆದರೆ ಇದುವರೆಗೆ ಟೆಸ್ಟ್ನಲ್ಲಿ ಈವರೆಗೆ ಕೇವಲ 1 ಪಂದ್ಯ ಆಡುವ ಅವಕಾಶ ಸಿಕ್ಕಿದೆಯಷ್ಟೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು ಕೇವಲ 8 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ಬಳಿಕ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.
(ವರದಿ: ವಿನಯ್ ಭಟ್)
ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಗೌರಿ ಹಬ್ಬದಂದೇ ಚಾಲನೆ; ಏನಿದು ಯೋಜನೆ, ಯಾರಿಗೆಲ್ಲಾ ಪ್ರಯೋಜನ, ಅನುದಾನ ಎಷ್ಟು?