ಕನ್ನಡ ಸುದ್ದಿ  /  ಕ್ರಿಕೆಟ್  /  ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಐಪಿಎಲ್‌ 2024ರ ಎಲಿಮನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಸಂಜು ಸ್ಯಾಮ್ಸನ್‌ ನೇತೃತ್ವದ ಆರ್‌ಆರ್‌ ಎಷ್ಟು ಬಲಿಷ್ಠವಾಗಿದೆ? ತಂಡದ ದೌರ್ಬಲ್ಯಗಳೇನು ಎಂಬುದನ್ನು ನೋಡೋಣ.

ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್
ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್ (AFP)

ಮೇ 22ರ ಐಪಿಎಲ್ ಎಲಿಮನೇಟರ್ ಪಂದ್ಯದತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ ಹರಿದಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Rajasthan Royals vs Royal Challengers Bengaluru) ತಂಡಗಳು ರೋಚಕ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಲೀಗ್‌ ಹಂತದಲ್ಲಿ ಉಭಯ ತಂಡಗಳ ಪ್ರದರ್ಶನ ಸಂಪೂರ್ಣ ತದ್ವಿರುದ್ಧವಾಗಿತ್ತು. ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ್‌ ಗೆಲುವಿನ ನಾಗಾಲೋಟದಲ್ಲಿದ್ದರೆ, ಫಾಫ್‌ ಡುಪ್ಲೆಸಿಸ್ ನೇತೃತ್ವದ ಆರ್‌ಸಿಬಿ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಆದರೆ, ಟೂರ್ನಿಯ ದ್ವಿತಿಯಾರ್ಧದಲ್ಲಿ ಆಗಿದ್ದೇ ಬೇರೆ, ರಾಜಸ್ಥಾನವು ಸತತ ಸೋಲಿಗೆ ಗುರಿಯಾದರೆ, ಆರ್‌ಸಿಬಿ ಗೆಲುವಿನ ನಾಗಾಲೋಟದಲ್ಲಿದೆ. ಸರಳವಾಗಿ ಹೇಳಬೇಕೆಂದಿದ್ದರೆ, ಆರ್‌ಸಿಬಿ ತಂಡ ಮೇ ತಿಂಗಳಲ್ಲಿ ಒಂದೇ ಒಂದು ಪಂದ್ಯ ಸೋತಿಲ್ಲ. ಅತ್ತ ರಾಜಸ್ಥಾನ ಮೇ ತಿಂಗಳಲ್ಲಿ ಒಂದು ಪಂದ್ಯವೂ ಗೆದ್ದಿಲ್ಲ.

ಟ್ರೆಂಡಿಂಗ್​ ಸುದ್ದಿ

ಪ್ರಚಂಡ ಫಾರ್ಮ್‌ನಲ್ಲಿರುವ ತಂಡದೊಂದಿಗೆ ಕಳಪೆ ಫಾರ್ಮ್‌ನಲ್ಲಿರುವ ತಂಡವೊಂದು ಪ್ಲೇಆಫ್‌ ಪಂದ್ಯವನ್ನಾಡುತ್ತಿದೆ. ರಾಜಸ್ಥಾನಕ್ಕೆ ಜಾಸ್‌ ಬಟ್ಲರ್ ಅನುಪಸ್ಥಿತಿ ಬಲವಾಗಿ ಕಾಡಲಿದೆ. ಏಕೆಂದರೆ ಲೀಗ್‌ ಹಂತದಲ್ಲಿ ಇದೇ ಆರ್‌ಸಿಬಿ ವಿರುದ್ಧ ಅಜೇಯ ಶತಕ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದ್ದರು.‌

ತಂಡದ ಶಕ್ತಿ ಮತ್ತು ಸಾಮರ್ಥ್ಯ

ನಾಯಕ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಅವರ ಪ್ರಚಂಡ ಫಾರ್ಮ್ ರಾಯಲ್ಸ್ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಇವರಿಬ್ಬರೂ 150ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ತಲಾ 500ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ. ಸಂಜು 5 ಅರ್ಧಶತಕ ಸಿಡಿಸಿದ್ದರೆ, ಪರಾಗ್‌ 5 ಫಿಫ್ಟಿ ಬಾರಿಸಿದ್ದಾರೆ. ಉಳಿದಂತೆ ಬೌಲಿಂಗ್‌ನಲ್ಲಿ ವೇಗ ಮತ್ತು ಸ್ಪಿನ್‌ ವಿಭಾಗದಲ್ಲಿ ಹಲವು ಆಯ್ಕೆ ತಂಡಕ್ಕಿದೆ.

ಇದನ್ನೂ ಓದಿ | ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ತಂಡದ ದೌರ್ಬಲ್ಯ

ತಂಡದ ಫಾರ್ಮ್‌. ರಾಯಲ್ಸ್ ತಂಡವು ಋತುವಿನ ಆರಂಭಿಕ ಒಂಬತ್ತು ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಪ್ರಚಂಡ ಫಾರ್ಮ್‌ ಪ್ರದರ್ಶಿಸಿತು. ಆದರೆ, ದಿಢೀರನೆ ಪಾತಾಳಕ್ಕೆ ಕುಸಿಯಿತು. ಕಳೆದ ಐದು ಪಂದ್ಯಗಳಲ್ಲಿ ತಂಡವು ಒಂದರಲ್ಲೂ ಗೆದ್ದಿಲ್ಲ. ತಂಡದ ಆರಂಭಿಕ ಗೆಲುವಿನ ವೇಗದ ಪ್ರಕಾರ ಅದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕಿತ್ತು. ಈ ನಡುವೆ ಕೊನೆಯ ಪಂದ್ಯದಲ್ಲಿ ಮಳೆಯ ಅವಕೃಪೆಗೆ ಪಾತ್ರವಾದ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಬ್ಯಾಟಿಂಗ್‌ ಮಾಡಿದ ಕೊನೆಯ ಎರಡು ಪಂದ್ಯಗಳಲ್ಲಿ ತಂಡದ ಮೊತ್ತ ಕನಿಷ್ಠ 150 ರನ್‌ ಕೂಡಾ ತಲುಪಿಲ್ಲ. ನಿಧಾನಗತಿಯ ಪಿಚ್‌ ತಂಡಕ್ಕೆ ಮಾರಕವಾಗುತ್ತಿದೆ. ಹೀಗಾಗಿ ಅಹಮದಾಬಾದ್‌ ಹಾಗೂ ಚೆನ್ನೈ ಪಿಚ್‌ ತಂಡಕ್ಕೆ ಮತ್ತೆ ಸವಾಲಾಗಬಹುದು.

ಎಕ್ಸ್‌ ಫ್ಯಾಕ್ಟರ್

ಕಿವೀಸ್‌ ವೇಗಿ ಟ್ರೆಂಟ್‌ ಬೌಲ್ಟ್‌ ಹೊಸ ಚೆಂಡಿನೊಂದಿಗೆ ಮ್ಯಾಜಿಕ್‌ ಮಾಡುತ್ತಿದ್ದಾರೆ. ಆರಂಭದಲ್ಲೇ ಎದುರಾಳಿ ವಿಕೆಟ್ ಕಬಳಿಸಿ ಮಿಂಚುತ್ತಿದ್ದಾರೆ. ಸದ್ಯ ಆರ್‌ಸಿಬಿ ವಿರುದ್ಧದ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಮತ್ತೆ ಪವರ್‌ಪ್ಲೇನಲ್ಲಿ ಟ್ರೆಂಟ್ ಬೌಲ್ಟ್ ತಂಡಕ್ಕೆ ಎಕ್ಸ್-ಫ್ಯಾಕ್ಟರ್ ಆಗಬಹುದು. ಹೀಗಾಗಿ ಇವರ ಬೌಲಿಂಗ್‌ ಆರ್‌ಆರ್‌ಗೆ ನಿರ್ಣಾಯಕವಾಗಿದೆ. 2019ರಿಂದ ಐಪಿಎಲ್‌ ಪವರ್‌ಪ್ಲೇನಲ್ಲಿ ಬೌಲ್ಟ್ ಅವರಿಗಿಂತ ಹೆಚ್ಚು ವಿಕೆಟ್‌ ಯಾರೂ ಉರುಳಿಸಿಲ್ಲ. ಪ್ರಸಕ್ತ ಆವೃತ್ತಿಯ ಮೊದಲ 9 ಪಂದ್ಯಗಳಲ್ಲಿ 7.8ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿರುವ ಅವರು 10 ವಿಕೆಟ್‌ ಪಡೆದರು. ಇದರಲ್ಲಿ ಏಳು ವಿಕೆಟ್‌ ಪವರ್‌ಪ್ಲೇನಲ್ಲಿ ಬಂದಿರುವುದು ಪ್ರಮುಖ ಅಂಶ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024