ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು
ಕನ್ನಡ ಸುದ್ದಿ  /  ಕ್ರಿಕೆಟ್  /  ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಸಿಎಸ್‌ಕೆ ತಂಡವನ್ನು ರೋಚಕವಾಗಿ ಮಣಿಸಿ ಪ್ಲೇಆಫ್‌ಗೆ ಲಗ್ಗೆ ಹಾಕಿರುವ ಆರ್‌ಸಿಬಿ, ಐಪಿಎಲ್‌ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮುಂದೆ ತಂಡವು ಎಲಿಮನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬಲಾಬಲಗಳೇನು ಎಂಬುದನ್ನು ತಿಳಿಯೋಣ.

 ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು
ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು (ANI )

ಸುಮಾರು 70 ದಿನಗಳ ಲೀಗ್‌ ಪಂದ್ಯಗಳ ನಂತರ ಐಪಿಎಲ್ 2024ರ ಪ್ಲೇಆಫ್‌ ಪಂದ್ಯಗಳು ನಡೆಯುತ್ತಿವೆ. ಫೈನಲ್‌ ಪಂದ್ಯ ನಡೆದು ನೂತನ ಚಾಂಪಿಯನ್‌ ಹೊರಹೊಮ್ಮಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ನಾಲ್ಕು ತಂಡಗಳು ಜಿದ್ದಿನ ಕದನಕ್ಕಿಳಿದಿವೆ. ಪ್ಲೇಆಫ್‌ನಲ್ಲಿ ಆಡುತ್ತಿರುವ ಎಲ್ಲಾ ನಾಲ್ಕು ತಂಡಗಳು ನಿರ್ದಿಷ್ಟ ಸಾಮರ್ಥ್ಯ ಹಾಗೂ ದೌರ್ಬ್ಯಲ್ಯಗಳನ್ನು ಹೊಂದಿದೆ. ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡಾ ರಾಯಲ್‌ ಆಗಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ. ಮೇ 22ರಂದು ನಡೆಯುತ್ತಿರುವ ಎಲಿಮನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ (‌RCB vs RR) ತಂಡನನ್ನು ಎದುರಿಸುತ್ತಿದೆ. ಹಾಗಿದ್ದರೆ ಆರ್‌ಸಿಬಿ ತಂಡದ ಶಕ್ತಿ-ಸಾಮರ್ಥ್ಯಗಳೇನು? ಕಪ್‌ ಗೆಲ್ಲಬೇಕಾದರೆ ಆರ್‌ಸಿಬಿ ತಂಡದ ಯಾವ ದೌರ್ಬಲ್ಯಗಳನ್ನು ಸರಿಪಡಿಸಬೇಕು? ತಂಡದ ಪ್ರಮುಖ ಆಟಗಾರ ಯಾರು ಎಬುದನ್ನು ನೋಡೋಣ.

ತಂಡದ ಸಾಮರ್ಥ್ಯ

ಮೊದಲನೆಯದಾಗಿ ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್, ಆರ್‌ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ. ಕೊಹ್ಲಿ 14 ಇನ್ನಿಂಗ್ಸ್‌ಗಳಲ್ಲಿ ಆಡಿ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ ಒಟ್ಟು 708 ರನ್ ಗಳಿಸಿದ್ದಾರೆ. ಆರೇಂಜ್‌ ಕ್ಯಾಪ್‌ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಕ್ರಮಣಕಾರಿ ಆಟ ಮಾತ್ರವಲ್ಲದೆ ಸ್ಥಿರತೆ ಕಾಪಾಡಿಕೊಂಡಿದ್ದಾರೆ. 155.6ರ ಸ್ಟ್ರೈಕ್‌ ರೇಟ್‌ನಲ್ಲಿ ಸ್ಕೋರ್ ಮಾಡುತ್ತಿದ್ದಾರೆ. ಇದು ತಂಡದ ಪ್ರಮುಖ ಬಲ. ಬೌಲರ್‌ಗಳು ಲಯಕ್ಕೆ ಮರಳಿದ್ದು, ವಿಕೆಟ್‌ ಕಬಳಿಸುತ್ತಿದ್ದಾರೆ. ಅದರಲ್ಲೂ ಸ್ವಪ್ನಿಲ್‌ ಸಿಂಗ್‌ ತಂಡಕ್ಕೆ ಎಂಟ್ರಿ ಕೊಟ್ಟಾಗಿನಿಂದ ಪವರ್‌ಪ್ಲೇನಲ್ಲೇ ತಂಡ ಮ್ಯಾಜಿಕ್‌ ಮಾಡುತ್ತಿದೆ.

ಕೊನೆಯ ಕೆಲವು ಪಂದ್ಯಗಳಲ್ಲಿ ಕ್ಯಾಮರೂನ್‌ ಗ್ರೀನ್‌ ಕೂಡಾ ಫಾರ್ಮ್‌ಗೆ ಮರಳಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಡೆತ್‌ ಓವರ್‌ ವೇಳೆ ಆಡಿದ ಮ್ಯಾಕ್ಸ್‌ವೆಲ್‌ ಬೌಂಡರಿ-ಸಿಕ್ಸರ್‌ ಸಿಡಿಸಿ ತಾನಿನ್ನೂ ಫಾರ್ಮ್‌ನಲ್ಲಿರುವುದಾಗಿ ತೋರಿಸಿಕೊಂಡಿದ್ದರು.

ಆರ್‌ಸಿಬಿ ದೌರ್ಬಲ್ಯಗಳೇನು?

ಆರ್‌ಸಿಬಿ ತಂಡವು ಪ್ರತಿಬಾರಿಯೂ ಬ್ಯಾಟಿಂಗ್‌ನಲ್ಲಿ ಸೀಮಿತ ಆಟಗಾರರನ್ನು ನೆಚ್ಚಿಕೊಳ್ಳುತ್ತದೆ. ಅದು ಕೂಡಾ ಅಗ್ರ ಕ್ರಮಾಂಕದ ಬ್ಯಾಟರ್‌ಗಳೇ ತಂಡದ ಶಕ್ತಿ. ಈ ಋತುವಿನಲ್ಲಿಯೂ ಪ್ರಮುಖ 3 ಆಟಗಾರರಾದ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟೀದಾರ್ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ಅವರಲ್ಲಿ ಇಬ್ಬರು ವಿಫಲರಾದರೂ, ಮಧ್ಯಮ ಮತ್ತು ಕೆಳ ಕ್ರಮಾಂಕದ ಒತ್ತಡದಲ್ಲಿ ಸಿಲುಕುತ್ತದೆ. ಅಲ್ಲಿ ದಿನೇಶ್‌ ಕಾರ್ತಿಕ್‌ ಹೊರತಾಗಿ ತಂಡದ ರಕ್ಷಣೆಗೆ ಗಟ್ಟಿಯಾಗಿ ನಿಲ್ಲುವವರಿಲ್ಲ. ಇದು ಬದಲಾಗಬೇಕು.

ತಂಡದ ಎಕ್ಸ್‌ ಫ್ಯಾಕ್ಟರ್

ಪ್ಲೇಆಫ್‌ ಪಂದ್ಯಗಳು ಅಹ್ಮದಾಬಾದ್ ಮತ್ತು ಚೆನ್ನೈನಲ್ಲಿ ನಡೆಯುತ್ತಿದೆ. ಇಲ್ಲಿನ ಪಿಚ್ ನಿಧಾನಗತಿಯ ಬೌಲರ್‌ಗಳಿಗೆ ನೆರವಾಗುವುದರಿಂದ ರಜತ್ ಪಾಟೀದಾರ್ ತಂಡದ ಎಕ್ಸ್-ಫ್ಯಾಕ್ಟರ್ ಆಗಲಿದ್ದಾರೆ. ಪಂದ್ಯಾವಳಿಯ ದ್ವಿತಿಯಾರ್ಧದಲ್ಲಿ ಪಾಟೀದಾರ್ ಆರ್‌ಸಿಬಿ ಪಾಲಿಗೆ ಅತ್ಯಂತ ವಿನಾಶಕಾರಿ ಬ್ಯಾಟರ್ ಆಗಿದ್ದಾರೆ. ಋತುವಿನಾದ್ಯಂತ ಸ್ಪಿನ್ನರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದಿದ್ದಾರೆ.

ಇದನ್ನೂ ಒದಿ | ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಡೆಲ್ಲಿ ಕ್ಯಾಪಿಟಲ್ಸ್ ಸಿಡಿಗುಂಡು ಜೇಕ್ ಫ್ರೇಸರ್ ಮೆಕ್‌ಗುರ್ಕ್

ಸ್ಲೋ ಬೌಲಿಂಗ್‌ ವಿರುದ್ಧ ಕನಿಷ್ಠ 100 ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ ಪಾಟೀದಾರ್ ಅವರ ಸ್ಟ್ರೈಕ್ ರೇಟ್ 210.9 ಆಗಿದೆ. ಇದು ಪ್ರಸಕ್ತ ಋತುವಿನಲ್ಲಿ ಎರಡನೇ ಅತ್ಯುತ್ತಮ ಸ್ಟ್ರೈಕ್‌ ರೇಟ್‌ (ಸ್ಲೋ ಬೌಲಿಂಗ್‌ ವಿರುದ್ಧ). ಟೂರ್ನಿಯಲ್ಲಿ ಪಾಟೀದಾರ್ ಸ್ಪಿನ್‌ ಬೌಲಿಂಗ್‌ನಲ್ಲಿ 21 ಸಿಕ್ಸರ್‌ ಬಾರಿಸಿದ್ದಾರೆ.

ಇದನ್ನೂ ಓದಿ | KKR vs SRH live score IPL 2024: ಕೆಕೆಆರ್‌ vs ಎಸ್‌ಆರ್‌ಎಚ್‌ ಕ್ವಾಲಿಫೈಯರ್‌ ಪಂದ್ಯದ ಲೈವ್‌ ಅಪ್ಡೇಟ್

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner