ಭಾರತ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸದಿದ್ದರೆ ಸಿಡ್ನಿ ಟೆಸ್ಟ್ ರೋಹಿತ್ ಶರ್ಮಾ ಕೊನೆಯ ಪಂದ್ಯ? ನಿವೃತ್ತಿ ಸುಳಿವು ನೀಡಿದ ವರದಿ
ರೋಹಿತ್ ಶರ್ಮಾ ಕಳಪೆ ಫಾರ್ಮ್ ಮುಂದುವರೆದಿದೆ. ಅಲ್ಲದೆ ನಾಯಕನಾಗಿಯೂ ತಂಡಕ್ಕೆ ಗೆಲುವು ಒಲಿಯುತ್ತಿಲ್ಲ. ಹೀಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಭಾರತ ತಂಡದ ನಾಯಕ ಟೆಸ್ಟ್ ಕ್ರಿಕೆಟ್ ತ್ಯಜಿಸುವ ಮನಸ್ಸು ಮಾಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಟೀಮ್ ಇಂಡಿಯಾ ಮುಂದಿನ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ರೋಹಿತ್ ಶರ್ಮಾ ಕಳಪೆ ಪ್ರದರ್ಶನವು, ಅವರ ನಿವೃತ್ತಿ ಕುರಿತು ಚರ್ಚೆ ಹೆಚ್ಚಿಸಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿಯೂ ಒಂದಂಕಿ ಮೊತ್ತಕ್ಕೆ ಔಟಾಗಿ ಸತತ ವೈಫಲ್ಯ ಎದುರಿಸುತ್ತಿರುವ ಹಿಟ್‌ಮ್ಯಾನ್, ತಮ್ಮ ಆಟವನ್ನು ಮರೆತಂತಿದೆ. ಈಗಾಗಲೇ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಅನುಭವಿಸಿದ್ದು, ಟೆಸ್ಟ್‌ನಲ್ಲಿ ಕಳಪೆ ಫಾರ್ಮ್ ಬೆನ್ನಲ್ಲೇ ರೋಹಿತ್ ಶರ್ಮಾ ಈ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳುವ ಕುರಿತು ಚರ್ಚೆಗಳು ಶುರುವಾಗಿವೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದು ಜಸ್ಪ್ರೀತ್ ಬುಮ್ರಾ. ಆ ನಂತರ ತಂಡದ ನಾಯಕನಾಗಿ ಮರಳಿದ ಹಿಟ್‌ಮ್ಯಾನ್, ಒಂದು ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಿಲ್ಲ.
ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ತಂಡ ಹೀನಾಯ ಸೋಲು ಕಂಡರೆ, ಅದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ವೈಟ್‌ವಾಶ್ ಮುಖಭಂಗಕ್ಕೆ ತುತ್ತಾಯಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಕೊನೆಯ ಆರು ಟೆಸ್ಟ್‌ಗಳಲ್ಲಿ ಗೆಲುವು ಸಾಧಿಸಿಲ್ಲ. ಇದರಲ್ಲಿ ಗಬ್ಬಾ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಹಿಟ್‌ಮ್ಯಾನ್ ಕಳಪೆ ನಾಯಕತ್ವವನ್ನು ಬದಿಗೊತ್ತಿದರೂ, ಅವರ ವೈಯಕ್ತಿಕ ಕಳಪೆ ಪ್ರದರ್ಶನ ಎದ್ದು ಕಾಣುತ್ತಿದೆ.
ಕಳಪೆ ಫಾರ್ಮ್
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೋಹಿತ್ ಬ್ಯಾಟ್‌ನಿಂದ ಬಂದ ಒಟ್ಟು ರನ್‌ಗಳು ಅರ್ಧಶತಕವನ್ನೂ ದಾಟಿಲ್ಲ. ಬ್ಯಾಟ್ ಬೀಸಿದ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 6.2ರ ಸರಾಸರಿಯಲ್ಲಿ 31 ರನ್ ಮಾತ್ರ ಗಳಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ಸರಣಿ ಪ್ರಾರಂಭವಾದಾಗಿನಿಂದ, 15 ಇನ್ನಿಂಗ್ಸ್‌ಗಳಲ್ಲಿ 10.93ರ ಸರಾಸರಿಯಲ್ಲಿ ಕೇವಲ 164 ರನ್ ಕಲೆ ಹಾಕಿದ್ದಾರೆ.
ರೋಹಿತ್ ಶರ್ಮಾ ನಿವೃತ್ತಿ ನಿರ್ಧಾರ
ಹಿಟ್‌ಮ್ಯಾನ್ ಫಾರ್ಮ್ ಸುಧಾರಿಸುತ್ತಿಲ್ಲ. ಅಲ್ಲದೆ ನಾಯಕತ್ವದ ತಂತ್ರವೂ ಫಲ ಕೊಡುತ್ತಿಲ್ಲ. ಹೀಗಾಗಿ ಎಂಸಿಜಿ ಟೆಸ್ಟ್ ಪಂದ್ಯ ಅವರ ಟೆಸ್ಟ್ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂಬ ಊಹಾಪೋಹಗಳಿದ್ದವು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದ್ದು, ಐದನೇ ಟೆಸ್ಟ್ ಬಳಿಕ ಭಾರತ ತಂಡದ ನಾಯಕ ಟೆಸ್ಟ್ ಕ್ರಿಕೆಟ್ ತ್ಯಜಿಸುವ ಮನಸ್ಸು ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ರೋಹಿತ್ ನಿವೃತ್ತಿ ಕುರಿತು ಬಿಸಿಸಿಐ ಉನ್ನತ ಅಧಿಕಾರಿಗಳು ಮತ್ತು ಆಯ್ಕೆದಾರರ ನಡುವೆ ಚರ್ಚೆ ನಡೆಯುತ್ತಿದೆ ಎಂದು ವರದಿ ಹೇಳಿದೆ. ಆದರೆ, ಅದೃಷ್ಟವಶಾತ್ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದರೆ, ಈ ಸನ್ನಿವೇಶ ಬದಲಾಗಬಹುದು. ಆಯ್ಕೆದಾರೊಂದಿಗೆ ಮಾತನಾಡಿ ಮತ್ತೆ ಕೆಲವು ತಿಂಗಳ ಕಾಲ ತಂಡದಲ್ಲಿ ಉಳಿಯಬಹುದು.
2025ರ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಭಾರತ ತಂಡ ಅರ್ಹತೆ ಪಡೆದಿಲ್ಲ. ಅದು ತಂಡದ ಕೈಯಲ್ಲಿಲ್ಲ. ತಂಡವು ಸಿಡ್ನಿ ಟೆಸ್ಟ್ ಗೆದ್ದರೂ, ಮುಂದೆ ಶ್ರೀಲಂಕಾ ತಂಡವು ಆಸೀಸ್ ವಿರುದ್ಧ ಗೆಲ್ಲುವವರೆಗೂ ಕಾಯಬೇಕಾಗುತ್ತದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope