419 ವಿಕೆಟ್, 8901 ರನ್ ಗಳಿಸಿದ್ದ ಭಾರತದ ದಿಗ್ಗಜ ಕ್ರಿಕೆಟಿಗ ನಿಧನ; ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು ಇವರು!
ಕನ್ನಡ ಸುದ್ದಿ  /  ಕ್ರಿಕೆಟ್  /  419 ವಿಕೆಟ್, 8901 ರನ್ ಗಳಿಸಿದ್ದ ಭಾರತದ ದಿಗ್ಗಜ ಕ್ರಿಕೆಟಿಗ ನಿಧನ; ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು ಇವರು!

419 ವಿಕೆಟ್, 8901 ರನ್ ಗಳಿಸಿದ್ದ ಭಾರತದ ದಿಗ್ಗಜ ಕ್ರಿಕೆಟಿಗ ನಿಧನ; ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು ಇವರು!

419 ವಿಕೆಟ್ ಕಿತ್ತಿರುವ ಮತ್ತು 8901 ರನ್ ಗಳಿಸಿರುವ ಭಾರತದ ಮಾಜಿ ಆಲ್​ರೌಂಡರ್ ಸೈಯದ್ ಅಬಿದ್ ಅಲಿ ನಿಧನರಾಗಿದ್ದಾರೆ. ದಿಗ್ಗಜ ಕ್ರಿಕೆಟಿಗನ ನಿಧನಕ್ಕೆ ಕ್ರಿಕೆಟ್ ಲೋಕ ಸಂತಾಪ ಸೂಚಿಸುತ್ತಿದೆ.

419 ವಿಕೆಟ್, 8901 ರನ್ ಗಳಿಸಿದ್ದ ಭಾರತದ ದಿಗ್ಗಜ ಕ್ರಿಕೆಟಿಗ ನಿಧನ; ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು ಇವರು!
419 ವಿಕೆಟ್, 8901 ರನ್ ಗಳಿಸಿದ್ದ ಭಾರತದ ದಿಗ್ಗಜ ಕ್ರಿಕೆಟಿಗ ನಿಧನ; ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು ಇವರು!

ಬಹುಮುಖ ಪ್ರತಿಭೆ ಮತ್ತು ಕೌಶಲ್ಯಯುತ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದ ಭಾರತದ ಮಾಜಿ ಆಲ್​ರೌಂಡರ್​ ಸೈಯದ್ ಅಬಿದ್ ಅಲಿ ಅವರು ದೀರ್ಘಕಾಲದ ಅನಾರೋಗ್ಯದ ಕಾರಣ ಬುಧವಾರ (ಮಾರ್ಚ್ 12) ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಟೀಮ್ ಇಂಡಿಯಾ ಪರ ಒಟ್ಟು 34 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು, ಎಂಎಕೆ ಪಟೌಡಿ, ಎಂಎಲ್ ಜೈಸಿಂಹ, ಅಬ್ಬಾಸ್ ಅಲಿ ಬೇಗ್ ಅವರೊಂದಿಗೆ ಹೈದರಾಬಾದ್​ನ ಪ್ರಸಿದ್ಧ ಕ್ರಿಕೆಟಿಗರ ಗುಂಪಿನ ಭಾಗವಾಗಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಿಧನರಾಗಿದ್ದಾರೆ. ಮಾಜಿ ಕ್ರಿಕೆಟಿಗನ ನಿಧನದ ಸುದ್ದಿಯನ್ನು ಉತ್ತರ ಅಮೆರಿಕನ್ ಕ್ರಿಕೆಟ್ ಲೀಗ್ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದೆ.

ಅಬಿದ್ ಅಲಿ ಕ್ರಿಕೆಟ್ ಸಾಧನೆ

1967ರ ಡಿಸೆಂಬರ್​​ನ ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದ ಅಬಿದ್ ಅಲಿ, ಮೊದಲ ಇನ್ನಿಂಗ್ಸ್​ನಲ್ಲಿ 55 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಅದೇ ಸರಣಿಯ ಸಿಡ್ನಿ ಟೆಸ್ಟ್​​ನಲ್ಲಿ 78 ಮತ್ತು 81 ರನ್ ಗಳಿಸುವ ಮೂಲಕ ಬ್ಯಾಟಿಂಗ್ಸ್​​ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ಅಬಿದ್ ಅಲಿ 1967 ಮತ್ತು 1974 ರ ನಡುವೆ ಭಾರತಕ್ಕಾಗಿ 29 ಟೆಸ್ಟ್ ಪಂದ್ಯ ಆಡಿದ್ದು, 1018 ರನ್, 47 ವಿಕೆಟ್​ ಕಿತ್ತಿದ್ದಾರೆ. ವಿಕೆಟ್​ಗಳ ಮಧ್ಯೆ ವೇಗವಾಗಿ ಓಡಲು ಹೆಸರುವಾಸಿಯಾಗಿದ್ದ ಅವರು, ಅಂದು ಅತ್ಯುತ್ತಮ ಫೀಲ್ಡರ್​​ಗಳಲ್ಲಿ ಒಬ್ಬರಾಗಿದ್ದರು.

ಅಲಿ 1975ರಲ್ಲಿ ನಡೆದ ಮೊದಲ ಏಕದಿನ ವಿಶ್ವಕಪ್​ನ ಭಾರತ ತಂಡದ ಭಾಗವಾಗಿ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಏಕದಿನ ಸ್ವರೂಪದಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ಹೊರಬಂದಿತ್ತು. ಆ ಪಂದ್ಯದಲ್ಲಿ 98 ಎಸೆತಗಳಲ್ಲಿ 70 ರನ್ ಗಳಿಸಿ ಮಿಂಚಿದ್ದರು. ಅಬಿದ್ ಅಲಿ 5 ಏಕದಿನಗಳಲ್ಲಿ 93 ರನ್ ಮತ್ತು 7 ವಿಕೆಟ್ ಪಡೆದಿದ್ದಾರೆ. ದೇಶೀಯ ಮಟ್ಟದಲ್ಲಿ 212 ಪ್ರಥಮ ದರ್ಜೆ ಪಂದ್ಯಗಳಲ್ಲಿ 8,732 ರನ್, 397 ವಿಕೆಟ್ ಕಿತ್ತಿದ್ದಾರೆ. ಗರಿಷ್ಠ ಸ್ಕೋರ್ 173*. 23 ರನ್ ನೀಡಿ 6 ವಿಕೆಟ್ ಕಬಳಿಸಿದ್ದು ಅವರ ಬೆಸ್ಟ್ ಬೌಲಿಂಗ್.

ಕ್ಯಾಲಿಫೋರ್ನಿಯಾದ ಟ್ರೇಸಿಯನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡ ಭಾರತದ ಕ್ರಿಕೆಟ್ ದಂತಕಥೆ ಚಾಚಾ ಸೈಯದ್ ಅಬಿದ್ ಅಲಿ ಅವರ ನಿಧನದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಅವರ ಗಮನಾರ್ಹ ಪರಂಪರೆಯು ಶ್ರೇಷ್ಠತೆಗಾಗಿ ಶ್ರಮಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಎನ್ಎಸಿಎಲ್ ತನ್ನ ಫೇಸ್​ಬುಕ್ ಪುಟದಲ್ಲಿ ಪೋಸ್ಟ್ ಮಾಡಿದೆ. ನಾರ್ತ್ ಅಮೆರಿಕನ್ ಕ್ರಿಕೆಟ್ ಲೀಗ್ ಮತ್ತು ನಾರ್ದರ್ನ್ ಕ್ಯಾಲಿಫೋರ್ನಿಯಾ ಕ್ರಿಕೆಟ್ ಅಸೋಸಿಯೇಷನ್ ಬೇ ಏರಿಯಾದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಅವರ ದಣಿವರಿಯದ ಪ್ರಯತ್ನಗಳು ಮತ್ತು ಕೊಡುಗೆಗಳಿಗೆ ಕೃತಜ್ಞವಾಗಿವೆ. ನಮ್ಮ ಪ್ರಾರ್ಥನೆಯಲ್ಲಿ ಅವರನ್ನು ಸ್ಮರಿಸೋಣ ಮತ್ತು ಅವರ ಗಮನಾರ್ಹ ಪರಂಪರೆಯನ್ನು ಆಚರಿಸೋಣ ಎಂದಿದೆ.

ಮದನ್ ಲಾಲ್, ಎಂಎಸ್​ಕೆ ಪ್ರಸಾದ್ ದುಃಖ

ವಿಶ್ವಕಪ್ ವಿಜೇತ ಭಾರತದ ಆಲ್​ರೌಂಡರ್ ಮದನ್ ಲಾಲ್, ‘ದುಃಖದ ಸುದ್ದಿ ಅಬಿದ್ ಅಲಿ ಇನ್ನಿಲ್ಲ. ಅವರು ಉತ್ತಮ ತಂಡದ ಆಟಗಾರ ಮತ್ತು ಉತ್ತಮ ವ್ಯಕ್ತಿ. ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ ಎಂದಿದ್ದಾರೆ. ಮಾಜಿ ಮುಖ್ಯ ರಾಷ್ಟ್ರೀಯ ಆಯ್ಕೆಗಾರ ಮತ್ತು ವಿಕೆಟ್ ಕೀಪರ್ ಎಂಎಸ್​ಕೆ ಪ್ರಸಾದ್ ಅವರು ಅಬಿದ್ ಅಲಿ ಆಂಧ್ರ ಕೋಚ್ ಆಗಿದ್ದ ದಿನಗಳನ್ನು ನೆನಪಿಸಿಕೊಂಡರು. ಪ್ರಸಾದ್ ತಮ್ಮ ಸಂತಾಪ ಸಂದೇಶದಲ್ಲಿ, ’ಅಬಿದ್ ಸರ್ ನಿಧನರಾಗಿರುವುದು ತುಂಬಾ ದುರದೃಷ್ಟಕರ. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಾನು ಆಂಧ್ರದ ತರಬೇತುದಾರನಾಗಿದ್ದ ಅವಧಿಯಲ್ಲಿ ಅವರು ನಮಗೆ ಗೆಲ್ಲುವ ಕಲೆಯನ್ನು ಕಲಿಸಿದರು ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಆಂಧ್ರ ಕ್ರಿಕೆಟ್ಗೆ ಅವರು ನೀಡಿದ ಕೊಡುಗೆಯನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner