ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಟೂರ್ನಿಯ ತಂಡವನ್ನು ಪ್ರಕಟಿಸಿದ ಐಸಿಸಿ; ಭಾರತದ 6 ಆಟಗಾರರಿಗೆ ಅವಕಾಶ, ಕೊಹ್ಲಿಗಿಲ್ಲ ಸ್ಥಾನ!

ಟಿ20 ವಿಶ್ವಕಪ್ ಟೂರ್ನಿಯ ತಂಡವನ್ನು ಪ್ರಕಟಿಸಿದ ಐಸಿಸಿ; ಭಾರತದ 6 ಆಟಗಾರರಿಗೆ ಅವಕಾಶ, ಕೊಹ್ಲಿಗಿಲ್ಲ ಸ್ಥಾನ!

T20 World Cup 2024 : ಟಿ20 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅತ್ಯುತ್ತಮ ಟೂರ್ನಿಯ ತಂಡವನ್ನು ಪ್ರಕಟಿಸಿದೆ. ಭಾರತದ 6 ಆಟಗಾರರಿಗೆ ಅವಕಾಶ ನೀಡಲಾಗಿದೆ.

ಟಿ20 ವಿಶ್ವಕಪ್ ಟೂರ್ನಿಯ ತಂಡವನ್ನು ಪ್ರಕಟಿಸಿದ ಐಸಿಸಿ; ಭಾರತದ 6 ಆಟಗಾರರಿಗೆ ಅವಕಾಶ, ಕೊಹ್ಲಿಗಿಲ್ಲ ಸ್ಥಾನ!
ಟಿ20 ವಿಶ್ವಕಪ್ ಟೂರ್ನಿಯ ತಂಡವನ್ನು ಪ್ರಕಟಿಸಿದ ಐಸಿಸಿ; ಭಾರತದ 6 ಆಟಗಾರರಿಗೆ ಅವಕಾಶ, ಕೊಹ್ಲಿಗಿಲ್ಲ ಸ್ಥಾನ!

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಜೂನ್ 29ರಂದು ಮುಕ್ತಾಯಗೊಂಡ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ (T20 World Cup 2024) ತನ್ನ ಅತ್ಯುತ್ತಮ ತಂಡವನ್ನು ಪ್ರಕಟಿಸಿದೆ. ಪ್ರಶಸ್ತಿ ವಿಜೇತ ಭಾರತೀಯ ತಂಡದ ರೋಹಿತ್​ ಶರ್ಮಾ (Rohit Sharma) ಸೇರಿ 6 ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಫೈನಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ (Virat Kohli) ಅವರನ್ನು ಕೈಬಿಡಲಾಗಿದೆ. ಯಾರಿಗಲ್ಲಾ ಅವಕಾಶ ಸಿಕ್ಕಿದೆ? ಇಲ್ಲಿದೆ ವಿವರ.

ಭಾರತ ತಂಡವನ್ನು ಚಾಂಪಿಯನ್ ಮಾಡಿದ ರೋಹಿತ್​ ಶರ್ಮಾ ಅವರೇ ಐಸಿಸಿ ತಂಡವನ್ನೂ ಮುನ್ನಡೆಸಲಿದ್ದಾರೆ. ಟೂರ್ನಿಯಲ್ಲಿ ರೋಹಿತ್ 156 ಸ್ಟ್ರೈಕ್ ರೇಟ್‌ನಲ್ಲಿ 257 ರನ್ ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಕಳೆದೊಂದು ವರ್ಷದಲ್ಲಿ 3 ಫಾರ್ಮೆಟ್​​ನಲ್ಲೂ ಫೈನಲ್ ಪ್ರವೇಶಿಸಿದೆ. ಐಸಿಸಿ ಪ್ರಕಟಿಸಿದ ತಂಡದಲ್ಲಿ ಭಾರತದ ಇಬ್ಬರು ಬ್ಯಾಟರ್ಸ್, ಇಬ್ಬರು ಆಲ್​ರೌಂಡರ್ಸ್, ಇಬ್ಬರು ಬೌಲರ್​ಗಳು ಸ್ಥಾನ ಪಡೆದಿದ್ದಾರೆ.

ರೋಹಿತ್​ ಶರ್ಮಾ ತಂಡದ ನಾಯಕ

ರೋಹಿತ್ ಜತೆಗೆ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಸ್ಥಾನ ಪಡೆದಿದ್ದಾರೆ. ಈ ಋತುವಿನಲ್ಲಿ 281 ರನ್ ಗಳಿಸಿ ಪ್ರಮುಖ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಇಬ್ರಾಹಿಂ ಜದ್ರಾನ್ ಜೊತೆಗಿನ ಗುರ್ಬಾಜ್ ಜೊತೆಯಾಟವು ಅಫ್ಘಾನಿಸ್ತಾನ ಸೆಮಿಫೈನಲ್​ಗೇರಲು ಪ್ರಮುಖ ಪಾತ್ರವಹಿಸಿತ್ತು. ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್, ಭಾರತದ ಸೂರ್ಯಕುಮಾರ್ ಯಾದವ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದಿದ್ದಾರೆ ಎಂಬುದು ಗಮನಾರ್ಹ.

ಟ್ರೆಂಡಿಂಗ್​ ಸುದ್ದಿ

ಸೂರ್ಯ ಫೈನಲ್​ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ ಅವರು ಹಿಡಿದ ಕ್ಯಾಚ್ ಪಂದ್ಯದ ಚಿತ್ರಣ ಬದಲಿಸಿತು. ಸೆಮಿಫೈನಲ್‌ನಲ್ಲಿ ಯುಎಸ್‌ಎ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಅವರ ನಿರ್ಣಾಯಕ ಇನ್ನಿಂಗ್ಸ್​​ಗಳು ತಂಡಕ್ಕೆ ನೆರವಾದವು. ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯ್ನಿಸ್, ಭಾರತದ ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಇಬ್ಬರು ಸಹ ವೇಗದ ಆಲ್​ರೌಂಡರ್​​ಗಳಾಗಿದ್ದಾರೆ.

ಸ್ಪಿನ್ ಆಲ್​ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದಿರುವ ಅಕ್ಷರ್ ಪಟೇಲ್ ಅಗ್ರ 7ರಲ್ಲಿ ಕಣಕ್ಕಿಳಿಯಲಿದ್ದಾರೆ. ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಟೂರ್ನಿಯಲ್ಲಿ 14 ವಿಕೆಟ್ ಪಡೆದಿದ್ದು, ತಂಡದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ. ನಂತರ ಜಸ್ಪ್ರೀತ್ ಬುಮ್ರಾ ಹಾಗೂ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದವರಾದ ಅರ್ಷದೀಪ್ ಸಿಂಗ್ ಮತ್ತು ಫಜಲ್ಹಕ್ ಫಾರೂಕಿ ವೇಗಿಗಳಾಗಿ ಅವಕಾಶ ಪಡೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರ ವಿಕೆಟ್​ಗಳ ದಾಖಲೆ ಸರಿಗಟ್ಟಿ 15 ವಿಕೆಟ್‌ ಪಡೆದ ದಕ್ಷಿಣ ಆಫ್ರಿಕಾದ ವೇಗಿ ಆನ್ರಿಚ್ ನೋಕಿಯಾ ಐಸಿಸಿ ಪ್ರಕಟಿಸಿದ ತಂಡದಲ್ಲಿ 12ನೇ ಆಟಗಾರ ಎಂದು ಹೆಸರಿಸಲ್ಪಟ್ಟಿದ್ದಾರೆ. ಗಾಯದ ಕಾರಣದಿಂದ 8-ತಿಂಗಳ ಸುದೀರ್ಘ ವಿಶ್ರಾಂತಿ ಪಡೆದಿದ್ದ ನೋಕಿಯಾ, ಕಂಬ್ಯಾಕ್ ಮಾಡಿದ ಟೂರ್ನಿಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದರು.

ಐಸಿಸಿ ಟಿ20 ವಿಶ್ವಕಪ್ 2024ರ ಐಸಿಸಿ ತಂಡ: ರೋಹಿತ್ ಶರ್ಮಾ, ರಹಮಾನುಲ್ಲಾ ಗುರ್ಬಾಜ್, ನಿಕೋಲಸ್ ಪೂರನ್, ಸೂರ್ಯಕುಮಾರ್ ಯಾದವ್, ಮಾರ್ಕಸ್ ಸ್ಟೊಯ್ನಿಸ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಫಜಲ್ಹಕ್ ಫಾರೂಕಿ, 12ನೇ ಆಟಗಾರ ಆನ್ರಿಚ್ ನೋಕಿಯಾ.