ಭಾರತಕ್ಕಿದು ಐತಿಹಾಸಿಕ ಕ್ಷಣ; ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತ ತಂಡಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರ ಅಭಿನಂದನೆ
2024ರ ಟಿ20 ವಿಶ್ವಕಪ್‌ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ತಂಡ 7 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ರೋಚಕ ಗೆಲುವಿಗೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವಕಪ್ ಕಿರೀಟ ಗೆದ್ದ ಭಾರತ ತಂಡ ಸಾಧನೆಗೆ ಐತಿಹಾಸಿಕ ಕ್ಷಣ ಕಂಡು ಕೊಂಡಾಡಿದ್ದಾರೆ.

2011ರಲ್ಲಿ ನಡೆದ ವಿಶ್ವಕಪ್ ಪಂದ್ಯದ ಕಪ್ ಗೆದಿದ್ದ ಭಾರತ ತಂಡ, ಇದೀಗ 2024ರ ವಿಶ್ವಕಪ್ ಗೆಲ್ಲುವ ಮೂಲಕ ಕೋಟಿ ಕೋಟಿ ಭಾರತೀಯರ ಕನಸನ್ನು ನನಸಾಗಿದೆ. 13 ವರ್ಷಗಳ ನಂತರ ವಿಶ್ವಕಪ್ ಕಿರೀಟ ಭಾರತದ ಮುಡಿಗೇರಿದೆ. ಟಿ20 ವಿಶ್ವಕಪ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸಿ ಭಾರತ ವಿಶ್ವಕಪ್ ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ.
2024ರ ವಿಶ್ವಕಪ್ ಕಿರೀಟ ಗೆದ್ದು, ಭಾರತಕ್ಕೆ ಹೆಮ್ಮೆ ತಂದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಮೋದಿ, ಸುನಿಲ್ ಶೆಟ್ಟಿ ಸೇರಿದಂತೆ ಹಲವು ರಾಜಕೀಯ ಹಾಗೂ ಸಿನಿರಂಗ ಗಣ್ಯರು ಶುಭಾಶಯ ಕೋರಿದ್ದಾರೆ. ಯಾರೆಲ್ಲಾ ಹೇಗೆ ವಿಶ್ ಮಾಡಿದ್ದಾರೆ ಎಂಬ ವಿವರ ಇಲ್ಲಿದೆ.
ʼಚಾಂಪಿಯನ್ಸ್, ತನ್ನದೇ ಶೈಲಿಯಲ್ಲಿ ನಮ್ಮ ತಂಡ ವಿಶ್ವಕಪ್ ಅನ್ನು ಮನೆಗೆ ತಂದಿದೆ. ಭಾರತದ ಕ್ರಿಕೆಟ್ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ. ನಿಜಕ್ಕೂ ಇದು ಐತಿಹಾಸಿಕ ಮ್ಯಾಚ್ʼ ಎಂದು ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಭಾರತ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ʼಕ್ಯಾಪ್ಟನ್ ರೋಹಿತ್, ನಿಮ್ಮ ಅದ್ಭುತ ಪಯಣ ಮತ್ತು ನಾಯಕತ್ವ ಟಿ20 ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ನಿಮ್ಮ ನಾಯಕತ್ವದಲ್ಲಿ, ನಾವು T20 ವಿಶ್ವಕಪ್ 2024 ಗೆಲುವು ಸೇರಿದಂತೆ ಉತ್ತಮ ಎತ್ತರವನ್ನು ಸಾಧಿಸಿದ್ದೇವೆ. ಮೈದಾನದಲ್ಲಿ ನಿಮ್ಮ ಕೌಶಲ ಸಮರ್ಪಣೆ ಮತ್ತು ಶಾಂತ ಉಪಸ್ಥಿತಿ ಎಲ್ಲದ್ದಕ್ಕೂ ಕಾರಣ. ನಿಮ್ಮ ನಾಯಕತ್ವದಲ್ಲಿ ಆಡುವುದು ಗೌರವವಾಗಿದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆʼ ಎಂದು ಕ್ರಿಕೆಟಿಗ ಮೊಹ್ಮಮದ್ ಶಮಿ ಸಾರ್ಥಕ ಭಾವದೊಂದಿಗೆ ಟ್ವೀಟ್ ಮಾಡಿದ್ದಾರೆ.
ʼಎಂತಹ ಮ್ಯಾಚ್, ಎಂತಹ ಮ್ಯಾಚ್... T20 ವಿಶ್ವಕಪ್ ಮನೆಗೆ ಮರಳಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಲ್ಲದೇ ಇನ್ಯಾರು ಟ್ರೋಪಿ ಗೆಲ್ಲಲ್ಲು ಸಾಧ್ಯ. ವಿರಾಟ್ ಕೊಹ್ಲಿ ಆಟದ ಮಾಂತ್ರಿಕ. ಸೂರ್ಯ ನೀನು ಬ್ಯೂಟಿ, ಹಾರ್ದಿಕ ಐತಿಹಾಸಿಕ ಆಟ. ಪಂದ್ಯದುದ್ದಕ್ಕೂ ಬೌಲರ್‌ಗಳದ್ದೇ ಮೇಲುಗೈ. ಟೀಮ್ ಇಂಡಿಯಾ - ನೀವು 1.4 ಬಿಲಿಯನ್ ಹೃದಯಗಳನ್ನು ಹೆಮ್ಮೆಯಿಂದ ಹಿಗ್ಗುವಂತೆ ಮಾಡಿದ್ದೀರಿ. ಕೊನೆಯದಾಗಿ ಭಾರತ ತಂಡ ಕೋಚ್ ರಾಹುಲ್ ದ್ರಾವಿಡ್‌ಗೆ ಸೆಲ್ಯೂಟ್ʼ ಎಂದು ಬರೆದುಕೊಳ್ಳುವ ಮೂಲಕ ಭಾರತ ತಂಡವನ್ನು ಹಾಡಿ ಹೊಗಳಿದ್ದಾರೆ.
ʼಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಎಂದಿಗೂ ಸೋಲದ ಉತ್ಸಾಹದಲ್ಲಿ ತಂಡದಲ್ಲಿ ಆಟವಾಡಿ ಕಷ್ಟದ ಸಂದರ್ಭದಲ್ಲೂ ಮುಂದೆ ಸಾಗಿತು. ಪಂದ್ಯದ ಉದ್ದಕ್ಕೂ ಅತ್ಯುತ್ತಮ ಕೌಶಲ ಪ್ರದರ್ಶಿಸಿತು. ಇದು ಅಂತಿಮ ಪಂದ್ಯದಲ್ಲಿ ಅಸಾಮಾನ್ಯ ಗೆಲುವು. ಸೂಪರ್ ಟೀಮ್ ಇಂಡಿಯಾ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆʼ ಎಂದು ಭಾರತದ ರಾಷ್ಟ್ರಪತಿ ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ʼಕಂಗ್ರ್ಯಾಜುಲೇಷನ್ಸ್ ರೋಹಿತ್ ಶರ್ಮಾ, ವೃತ್ತಿಜೀವನದಲ್ಲಿ ಮರೆಯಲಾಗದ ಟಿ20 ಪಂದ್ಯವಿದು. ನಿಮ್ಮ ಸಾಧನೆ ಭಾರತಕ್ಕೆ ಹೆಮ್ಮೆ ತಂದಿದೆ. T20 ವಿಶ್ವಕಪ್ ಗೆದ್ದ ನಂತರ ಉನ್ನತ ಮಟ್ಟದಲ್ಲಿ ಕೊನೆಗೊಳ್ಳಲು ಎಂತಹ ಪರಿಪೂರ್ಣ ಮಾರ್ಗವಾಗಿದೆ! ಭವಿಷ್ಯದ ಶುಭಾಶಯಗಳುʼ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಯುಸೂಫ್ ಪಠಾಣ್ ರೋಹಿತ್ ಶರ್ಮಾರನ್ನು ಲೆಜೆಂಡ್ ಎಂದು ಬಣ್ಣಿಸಿದ್ದಾರೆ.
ʼಭಾರತ ಕ್ರಿಕೆಟ್ ತಂಡದ ಎಂತಹ ಅದ್ಭುತ ಗೆಲುವು ಮತ್ತು ಸಾಧನೆ! #T20WolrdCupFinal ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ತಂಡವು ಇತಿಹಾಸವನ್ನು ಬರೆದಿದೆ! ಭಾರತ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದಿರುವುದಕ್ಕೆ ಇಡೀ ದೇಶವೇ ಸಂಭ್ರಮಿಸಿದೆ! ಕ್ರಿಕೆಟ್ ಕೌಶಲಗಳು, ಕಠಿಣ ಪರಿಶ್ರಮ ಮತ್ತು ಪರಿಶ್ರಮದ ಅದ್ಭುತ ಪ್ರದರ್ಶನಕ್ಕಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಇಂದಿನ ಈ ಗೆಲುವು ಮುಂಬರುವ ಹಲವು ಕ್ರಿಕೆಟಿಗರು ಮತ್ತು ಕ್ರೀಡಾಪಟುಗಳಿಗೆ ಪ್ರೇರಣೆ ನೀಡಲಿದೆ. ಭಾರತ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆʼ ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ʼಇತಿಹಾಸದ ಪುಟದಲ್ಲಿ ಕೆತ್ತಿದ ಗೆಲುವು, T20 ವಿಶ್ವಕಪ್ 2024 ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಜೈ ಹಿಂದ್!ʼ ಎಂದು ಕನ್ನಡ ನಟ ಯಶ್ ಟ್ವೀಟ್ ಮಾಡಿದ್ದಾರೆ.
ʼವಿಶ್ವದ ಅಗ್ರಸ್ಥಾನದಲ್ಲಿ ಭಾರತ !!! 17 ವರ್ಷಗಳ ನಂತರ ಸಂಪೂರ್ಣ ಅದ್ಭುತ ಮಾರ್ಗದಲ್ಲಿ ICC T20 ವಿಶ್ವಕಪ್ ಗೆದ್ದ ಭಾರತ. ಬ್ರಾವೋ ವಿರಾಟ್ ಕೊಹ್ಲಿ! ಅಮೋಘ ಪ್ರದರ್ಶನಕ್ಕಾಗಿ ಬುಮ್ರಾ, ಹಾರ್ದಿಕ್, ಅಕ್ಸರ್, ಅರ್ಶ್‌ದೀಪ್ ಮತ್ತು ವಿಜಯಶಾಲಿ ನಾಯಕ ರೋಹಿತ್ ಶರ್ಮಾ ಮತ್ತು ಇಡೀ ತಂಡದ ಸಾಧನೆ ಅದ್ಭುತ. ಮತ್ತು ಸೂರ್ಯ ಕುಮಾರ್ ಯಾದವ್ ಅವರ ಔಟ್ ಆಫ್ ದಿ ವರ್ಲ್ಡ್ ಕ್ಯಾಚ್ ಕೇವಲ ವಾಹ್. ಮೇರಾ ಭಾರತ್ ಮಹಾನ್ ಎಂದು ಟಾಲಿವುಡ್ ನಟ ಚಿರಂಜೀವಿ ಕೊನಿಡೆಲಾ ಟ್ವೀಟ್ ಮಾಡಿದ್ದಾರೆ.
ʼಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡಕ್ಕೆ ಶುಭಾಶಯಗಳು ಮತ್ತು ಸಮಸ್ತ ಭಾರತೀಯರ ಪರವಾಗಿ ಅಭಿನಂದನೆಗಳು. ಅನೇಕ ರೋಚಕ ತಿರುವುಗಳ ಫೈನಲ್ ಪಂದ್ಯ ಭಾರತೀಯರೆಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿತ್ತು. ಎಲ್ಲರ ಆಕಾಂಕ್ಷೆ, ನಿರೀಕ್ಷೆಯಂತೆ ಭಾರತ ಗೆದ್ದು ಬಿಗಿದೆ. ನಮ್ಮ ಹೆಮ್ಮೆಯ ತಂಡಕ್ಕೆ ಶುಭವಾಗಲಿʼ ಎಂದು ಜೆಡಿಎಸ್‌ನ ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ.
ʼವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳು. ನಿರ್ಣಾಯಕ ಹಂತದಲ್ಲಿ ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ವಿಶ್ವಕಪ್ ಟಿ20 ಜಯಿಸಿದ ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದು ಕಡೇ ಕ್ಷಣದಲ್ಲಿ ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡದ ಆಟವೂ ಮೆಚ್ಚತಕ್ಕದ್ದೆ. ಇದೊಂದು ಐತಿಹಾಸಿಕ ಕ್ಷಣ. ಕ್ರಿಕೆಟ್ ಪ್ರೇಮಿಯಾದ ನನಗೆ ನಮ್ಮವರ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಕೋಟ್ಯಂತರ ಜನರ ಹರಕೆ, ಹಾರೈಕೆಗಳು ಕಡೆಗೂ ಫಲಕೊಟ್ಟಿದೆ, ವಿಶ್ವಕಪ್ ಮರಳಿ ಭಾರತದ ಮಡಿಲು ಸೇರಿದೆʼ ಎಂದು ಸಿದ್ದರಾಮಯ್ಯ ತಮ್ಮ ಅಧಿಕೃತ ಖಾತೆಯ ಮೂಲಕ ಶುಭಾಶಯ ತಿಳಿಸಿದ್ದಾರೆ.
