ಆಡುತ್ತಿದ್ದಾಗ ಹೃದಯಾಘಾತಕ್ಕೊಳಗಾದ ತಮೀಮ್ ಇಕ್ಬಾಲ್‌ಗೆ ತುರ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ; ಬಾಂಗ್ಲಾ ಆಟಗಾರನ ಹೆಲ್ತ್ ಅಪ್ಡೇಟ್
ಹೃದಯಾಘಾತಕ್ಕೊಳಗಾಗಿದ್ದ ತಮೀಮ್ ಇಕ್ಬಾಲ್‌ಗೆ ಆಂಜಿಯೋಪ್ಲ್ಯಾಸ್ಟಿ ಯಶಸ್ವಿಯಾಗಿ ನಡೆದಿದೆ. ತುರ್ತು ಶಸ್ತ್ರಚಿಕಿತ್ಸೆಯ ನಂತರ ತಮೀಮ್ ಇಕ್ಬಾಲ್‌ಗೆ ಪ್ರಜ್ಞೆ ಬಂದಿದೆ. ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ (Tamim Iqbal) ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಮಾರ್ಚ್ 24ರ ಸೋಮವಾರ ಢಾಕಾದಲ್ಲಿ ನಡೆದ ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಪಂದ್ಯ ನಡೆಯುತ್ತಿದ್ದಾಗ ಫೀಲ್ಡಿಂಗ್ ಮಾಡುವ ಸಮಯದಲ್ಲೇ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸಾಗಿಸಿದ ನಂತರ ಇದೀಗ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಯಶಸ್ವಿಯಾಗಿ ನಡೆದಿದೆ. ಸದ್ಯ ಕ್ರಿಕೆಟಿಗ ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ಆಸ್ಪತ್ರೆ ಬುಲೆಟಿನ್ ತಿಳಿಸಿದೆ.
ವರದಿಗಳ ಪ್ರಕಾರ, ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಶಿನೆಪುಕುರ್ ಕ್ರಿಕೆಟ್ ಕ್ಲಬ್ ನಡುವಿನ 50 ಓವರ್‌ಗಳ ಪಂದ್ಯದ ಮೊದಲ ಇನ್ನಿಂಗ್ಸ್ ನಡೆಯುತ್ತಿದ್ದಾಗ, ಫೀಲ್ಡಿಂಗ್ ಮಾಡುತ್ತಿದ್ದ 36 ವರ್ಷದ ಇಕ್ಬಾಲ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎದೆನೋವು ಎಂದು ಹೇಳಿದ್ದ ತಮೀಮ್‌ಗೆ ಭಾರಿ ಹೃದಯಾಘಾತವಾಗಿದೆ ಎಂದು ನಿನ್ನೆಯೇ ವೈದ್ಯರು ಖಚಿತಪಡಿಸಿದ್ದರು. ಹೀಗಾಗಿ ಅವರಿಗೆ ತುರ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದೆ.
ಸೋಮವಾರ ನಡೆದ ತುರ್ತು ಶಸ್ತ್ರಚಿಕಿತ್ಸೆಯ ನಂತರ ತಮೀಮ್ ಇಕ್ಬಾಲ್‌ಗೆ ಪ್ರಜ್ಞೆ ಮರಳಿ ಬಂದಿದೆ. ಆ ನಂತರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರನನ್ನು ವೈದ್ಯರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ತಮೀಮ್ 48 ಗಂಟೆಗಳ ಕಾಲ ಪರಿಧಮನಿಯ ಆರೈಕೆ ಘಟಕದಲ್ಲಿ (CCU) ಚಿಕಿತ್ಸೆ ಪಡೆಯುತ್ತಿದ್ದಾರೆ.
"ಟಾಸ್ ಸಮಯದಲ್ಲಿ ಅವರು ಉತ್ಸಾಹದಲ್ಲಿದ್ದರು" ಎಂದು ಬಿಕೆಎಸ್‌ಪಿ ತಂಡದ ಮುಖ್ಯ ತರಬೇತುದಾರ ಮಾಂಟು ದತ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅತ್ತ ತಮೀಮ್ ಆರೋಗ್ಯ ಪರಿಸ್ಥಿತಿಯ ಬಗ್ಗೆ ತಿಳಿದ ಕೂಡಲೇ ಬಿಸಿಬಿ ಕೂಡಾ ತನ್ನ ನಿರ್ದೇಶಕರ ಸಭೆಯನ್ನು ರದ್ದುಗೊಳಿಸಿದೆ. ಅಧ್ಯಕ್ಷ ಫಾರೂಕ್ ಅಹ್ಮದ್ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಜಾಮುದ್ದೀನ್ ಅಹ್ಮದ್ ಮತ್ತು ತಮೀಮ್ ಅವರ ಚಿಕ್ಕಪ್ಪ ಅಕ್ರಮ್ ಖಾನ್ ಅವರೊಂದಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ.
ಚೇತರಿಕೆಗೆ ಭಾರತೀಯ ದಿಗ್ಗಜರ ಪ್ರಾರ್ಥನೆ
ತಮೀಮ್ ಚೇತರಿಕೆಗೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಟ್ವೀಟ್ ಮೂಲಕ ಹಾರೈಸಿದ್ದಾರೆ. "ನಮ್ಮ ಸ್ನೇಹಿತ ತಮೀಮ್ ಇಕ್ಬಾಲ್ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ನಿಮ್ಮನ್ನು ಶೀಘ್ರದಲ್ಲೇ ನೋಡಲು ಮತ್ತು ಕೆಲಸ ಮಾಡಲು ಆಶಿಸುತ್ತೇನೆ," ಹರ್ಷ ಭೋಗ್ಲೆ ಹೇಳಿದ್ದಾರೆ. "ನೀವು ಬೇಗನೆ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ. ಧೈರ್ಯವಾಗಿರಿ ಚಾಂಪಿಯನ್," ಎಂದು ಯುವರಾಜ್ ಸಿಂಗ್ ಎಕ್ಸ್‌ನಲ್ಲಿ ಹೇಳಿದ್ದಾರೆ.
