ಭಾರತ ನರ್ವಸ್ ಆಗಿದೆ, ಸೆಮೀಸ್‌ನಲ್ಲಿ ಅವರು ಬಯಸದ ಏಕೈಕ ತಂಡ ನ್ಯೂಜಿಲ್ಯಾಂಡ್: ರಾಸ್ ಟೇಲರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ನರ್ವಸ್ ಆಗಿದೆ, ಸೆಮೀಸ್‌ನಲ್ಲಿ ಅವರು ಬಯಸದ ಏಕೈಕ ತಂಡ ನ್ಯೂಜಿಲ್ಯಾಂಡ್: ರಾಸ್ ಟೇಲರ್

ಭಾರತ ನರ್ವಸ್ ಆಗಿದೆ, ಸೆಮೀಸ್‌ನಲ್ಲಿ ಅವರು ಬಯಸದ ಏಕೈಕ ತಂಡ ನ್ಯೂಜಿಲ್ಯಾಂಡ್: ರಾಸ್ ಟೇಲರ್

ಭಾರತ ತಂಡವು ಸೆಮಿಫೈನಲ್‌ನಲ್ಲಿ ಕಿವೀಸ್‌ ತಂಡವನ್ನು ಎದುರಿಸಲ ನಿಜಕ್ಕೂ ನರ್ವಸ್‌ ಆಗಲಿದೆ ಎಂದು ಕಿವೀಸ್ ತಂಡದ ಮಾಜಿ ನಾಯಕ ರಾಸ್ ಟೇಲರ್ ಹೇಳಿದ್ದಾರೆ.

ಭಾರತ ತಂಡದ ಆಟಗಾರರು
ಭಾರತ ತಂಡದ ಆಟಗಾರರು (PTI)

ಭಾರತ ತಂಡದ ವಿಶ್ವಕಪ್‌ ಗೆಲುವಿಗೆ ಇನ್ನೆರಡೇ ಹೆಜ್ಜೆಗಳು ಬಾಕಿ. ಈಗಾಗಲೇ ಸತತ 9 ಗೆಲುವಿನೊಂದಿಗೆ ಲೀಗ್‌ ಹಂತ ಮುಗಿಸಿರುವ ರೋಹಿತ್‌ ಪಡೆ, ನವೆಂಬರ್‌ 15ರ ಬುಧವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ 2023ರ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಲಿದೆ. ಆದರೆ, ಕಳೆದ ಆವೃತ್ತಿಯ ವಿಶ್ವಕಪ್‌ ಸೆಮಿಕದನದ ಕಹಿ ಸೋಲಿನಲ್ಲಿರುವ ಟೀಮ್‌ ಇಂಡಿಯಾ, ಈ ಬಾರಿ ಮತ್ತದೇ ಕಿವೀಸ್‌ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸುತ್ತಿದೆ. ಹೀಗಾಗಿ ಕಿವೀಸ್‌ ಆಟಗಾರರು ಟೀಮ್‌ ಇಂಡಿಯಾವನ್ನು ಸೋಲಿಸುವ ಭರವಸೆಯಲ್ಲಿದ್ದಾರೆ.

ಮಹತ್ವದ ಸೆಮಿ ಪಂದ್ಯಕ್ಕೂ ಮುನ್ನ ಮಾತನಾಡಿದ ಕಿವೀಸ್ ತಂಡದ ಮಾಜಿ ನಾಯಕ ರಾಸ್ ಟೇಲರ್, ನಾಕೌಟ್‌ನಲ್ಲಿ ಭಾರತ ತಂಡವು ಎದುರಿಸಲು ಬಯಸದ ಏಕೈಕ ತಂಡವೆಂದರೆ ಅದು ಕಿವೀಸ್‌ ಎಂದು ಹೇಳಿದ್ದಾರೆ. ಕಳೆದ ಬಾರಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ ಮೈದಾನದಲ್ಲಿ ನಡೆದ 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತವನ್ನು ಸೋಲಿಸಿತ್ತು. ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಭಾರತವನ್ನು ಮಣಿಸುವಲ್ಲಿ ಟೇಲರ್ 74 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ ಸೆಮಿಫೈನಲ್ ವಿಶ್ಲೇಷಣೆಯಲ್ಲಿ ಟೇಲರ್‌ ಮಾತನಾಡಿದ್ದಾರೆ. “ನಾಲ್ಕು ವರ್ಷಗಳ ಹಿಂದೆ, ಭಾರತವು ಪಂದ್ಯಾವಳಿಯ ಇನ್‌ಫಾರ್ಮ್ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ನೆಟ್‌ ರನ್ ರೇಟ್ ಆಧಾರದಲ್ಲಿ ನಾವು ನಾಕೌಟ್‌ ಎಂಟ್ರಿ ಕೊಟ್ಟೆವು” ಎಂದು ಅವರು ಹೇಳಿದರು.

ಭಾರತ ನಿಜಕ್ಕೂ ನರ್ವಸ್‌ ಆಗುತ್ತದೆ

“ಈ ಬಾರಿ, ಭಾರತವು ತಂಡವು ಇನ್ನೂ ದೊಡ್ಡ ಮಟ್ಟದ ನೆಚ್ಚಿನ ತಂಡವಾಗಿದೆ. ತವರಿನ ಟೂರ್ನಿಯಲ್ಲಿ ಗುಂಪು ಹಂತದಲ್ಲಿ ಚೆನ್ನಾಗಿ ಆಡಿದೆ. ಅತ್ತ ಕಿವೀಸ್‌ ದುರ್ಬಲ ತಂಡವೇನಲ್ಲ. ನ್ಯೂಜಿಲ್ಯಾಂಡ್ ತಂಡ ಕೂಡಾ ಅಪಾಯಕಾರಿಯಾಗಬಹುದು. ಭಾರತಕ್ಕೆ ಒಂದು ತಂಡವನ್ನು ಎದುರಿಸಲು ನರ್ವಸ್‌ ಆಗುತ್ತದೆ ಎಂದಿದ್ದರೆ ಅದು ನ್ಯೂಜಿಲ್ಯಾಂಡ್ ತಂಡ" ಎಂದು ಅವರು ಹೇಳಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಜಡೇಜಾ 77 ರನ್ ಗಳಿಸಿದರು. ಆದರೆ ಮಾರ್ಟಿನ್ ಗಪ್ಟಿಲ್ ಅವರ ಅಮೋಘ ರನೌಟ್‌ನಿಂದಾಗಿ ಎಂಎಸ್ ಧೋನಿ 50 ರನ್‌ ಗಳಿಸಿ ಔಟಾದರು. ಇದರಿಂದ ಭಾರತದ ಯಶಸ್ವಿ ರನ್ ಚೇಸ್‌ಗೆ ಅಡ್ಡಿಯಾಯಿತು. ಜಡೇಜಾರನ್ನು ಟೇಲರ್ ಮೊದಲು ರನ್ ಔಟ್ ಮಾಡಿದ್ದರು.

ಮೂರು ವಿಕೆಟ್‌ ಪಡೆದರೆ ಭಾರತ ಒತ್ತಡಕ್ಕೆ ಒಳಗಾಗುತ್ತದೆ

ವಾಂಖೆಡೆಯಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್‌ ಮತ್ತು ಮೊದಲ ಪವರ್ ಪ್ಲೇ ಓವರ್‌ಗಳು ನಿರ್ಣಾಯಕವಾಗುತ್ತವೆ ಎಂದು ಟೇಲರ್ ಹೇಳಿದರು. “ಭಾರತ ಬ್ಯಾಟಿಂಗ್ ಮಾಡುವಾಗ, ಮೊದಲ ಹತ್ತು ಓವರ್‌ಗಳಲ್ಲಿ ಎರಡು ಅಥವಾ ಮೂರು ವಿಕೆಟ್‌ ಪಡೆದರೆ ಟೀಮ್‌ ಇಂಡಿಯಾ ಒತ್ತಡಕ್ಕೆ ಸಿಲುಕುತ್ತದೆ. ತಂಡವು ಅಗ್ರ ಮೂವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಶ್ವದ ನಂಬರ್‌ 1 ಆಟಗಾರ ಶುಭ್ಮನ್ ಗಿಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ನಾವು ಮಧ್ಯಮ ಕ್ರಮಾಂಕವನ್ನು ಒತ್ತಡದಲ್ಲಿ ಇರಿಸಲು ಪ್ರಯತ್ನಿಸಬೇಕಾಗಿದೆ. ಆ ಪ್ರಯತ್ನ ಯಶಸ್ವಿಯಾದರೆ, ಮತ್ತೆ ಬೇಗನೆ ತಮ್ಮ ಪ್ರಾಬಲ್ಯ ಸಾಧಿಸಬಹುದು" ಎಂದು ಟೇಲರ್‌ ತಿಳಿಸಿದ್ದಾರೆ.

Whats_app_banner