ವೈಟ್ ಬಾಲ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ರಿಷಿ ಧವನ್; ಧೋನಿ ನಾಯಕತ್ವದಲ್ಲಿ ಆಡಿದ್ದ ಆಲ್‌ರೌಂಡರ್
ಭಾರತ ಕ್ರಿಕೆಟ್ ತಂಡದ ಪರ ಕೆಲವೇ ಪಂದ್ಯಗಳನ್ನು ಆಡಿದ್ದ ಹಿಮಾಚಲ ಪ್ರದೇಶದ ಆಲೌರೌಂಡರ್ ರಿಷಿ ಧವನ್, ಸೀಮಿತ್ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್, ಐಪಿಎಲ್‌ನಲ್ಲೂ ಗುರುತಿಸಿಕೊಂಡಿದ್ದ ಆಟಗಾರ, ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು.
ಭಾರತ ತಂಡದ ಪರ ನಾಲ್ಕು ಪಂದ್ಯಗಳಲ್ಲಿ ಆಡಿದ್ದ ಆಲ್‌ರೌಂಡರ್ ರಿಷಿ ಧವನ್, ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಜನವರಿ 5ರ ಭಾನುವಾರ ಈ ಕುರಿತು ಹೇಳಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಆಟಗಾರ ಟೀಮ್ ಇಂಡಿಯಾ ಪರ ಮೂರು ಏಕದಿನ ಪಂದ್ಯ ಮತ್ತು ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. 34 ವರ್ಷದ ಆಟಗಾರ ಸಾಮಾಜಿಕ ಮಾಧ್ಯಮದ ಮೂಲಕ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಮೂರು ಏಕದಿನ ಪಂದ್ಯಗಳ ಎರಡು ಇನ್ನಿಂಗ್ಸ್‌ಗಳಲ್ಲಿ ಆಡಿರುವ ಧವನ್ 12 ರನ್ ಗಳಿಸಿದ್ದಾರೆ. ಇದೇ ವೇಳೆ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ಒಂದು ಟಿ20 ಪಂದ್ಯ ಆಡಿರುವ ಕ್ರಿಕೆಟಿಗ 1 ರನ್ ಮತ್ತು 1 ವಿಕೆಟ್ ಪಡೆದಿದ್ದಾರೆ.
“ಭಾರವಾದ ಹೃದಯದಿಂದ ನಾನು ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಈ ನಿರ್ಧಾರದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಕಳೆದ 20 ವರ್ಷಗಳಿಂದ ನನ್ನ ಜೀವನವನ್ನು ವ್ಯಾಖ್ಯಾನಿಸಿದ ಕ್ರೀಡೆ ಇದು. ಈ ಆಟವು ನನಗೆ ಲೆಕ್ಕವಿಲ್ಲದಷ್ಟು ಸಂತೋಷದ ಜೊತೆಗೆ ಮರೆಯಲಾಗದ ನೆನಪುಗಳನ್ನು ನೀಡಿದೆ. ಕ್ರಿಕೆಟ್ ಯಾವಾಗಲೂ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿರುತ್ತದೆ” ಎಂದು ಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟ್ ನನಗೆ ಉತ್ಸಾಹ
“ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ನೀಡಿದ ಅವಕಾಶಗಳಿಗೆ ನನ್ನ ಕೃತಜ್ಞತೆ ಹೇಳಬಯಸುತ್ತೇನೆ. ಇದು ಒಂದು ಸೌಭಾಗ್ಯವಾಗಿದೆ. ಕ್ರಿಕೆಟ್ ಎಂದರೆ ನನಗೆ ಉತ್ಸಾಹ. ನನ್ನನ್ನು ವ್ಯಕ್ತಿಯಾಗಿ ರೂಪಿಸುವಲ್ಲಿ ನೀವು ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ನನ್ನ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ರಿಷಿ 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾಗೆ ಏಕದಿನ ಪದಾರ್ಪಣೆ ಮಾಡಿದ್ದರು. ಅದೇ ವರ್ಷದ ಜೂನ್‌ನಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯವಾಡಿದರು.
ಲಿಸ್ಟ್ ಎ ಕ್ರಿಕೆಟ್ ದಾಖಲೆ
ಧವನ್ 134 ಲಿಸ್ಟ್ ಎ ಪಂದ್ಯಗಳಲ್ಲಿ 186 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 38.23ರ ಸರಾಸರಿಯಲ್ಲಿ 2906 ರನ್ ಗಳಿಸಿದ್ದಾರೆ. 135 ಟಿ20 ಪಂದ್ಯಗಳಲ್ಲಿ ಆಡಿರುವ ಅವರು 26.44ರ ಸರಾಸರಿಯಲ್ಲಿ 118 ವಿಕೆಟ್ ಕಬಳಿಸಿದ್ದಾರೆ. ಇದೇ ವೇಳೆ 121.33ರ ಸ್ಟ್ರೈಕ್ ರೇಟ್‌ನಲ್ಲಿ 1740 ರನ್ ಬಾರಿಸಿದ್ದಾರೆ. 2021-22ರಲ್ಲಿ ಹಿಮಾಚಲ ಪ್ರದೇಶ ತಂಡವು ವಿಜಯ್ ಹಜಾರೆ ಟ್ರೋಫಿ ಗೆಲ್ಲಲು ನೆರವಾಗಿದ್ದರು.
ರಿಷಿ ಧವನ್ ಪ್ರಸಕ್ತ ರಣಜಿ ಟ್ರೋಫಿ ಋತುವಿನಲ್ಲಿ ತಮ್ಮ ದೇಶೀಯ ತಂಡ ಹಿಮಾಚಲ ಪ್ರದೇಶ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುವುದನ್ನು ಮುಂದುವರೆಸಲಿದ್ದಾರೆ. ಅವರ ತಂಡವು ಪ್ರಸ್ತುತ ಪಂದ್ಯಾವಳಿಯ ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಸಕ್ತ ರಣಜಿ ಟ್ರೋಫಿ ಋತುವಿನಲ್ಲಿ ಧವನ್ ಹಿಮಾಚಲ ಪ್ರದೇಶ ಪರ ಎಲ್ಲಾ ಐದು ಪಂದ್ಯಗಳಲ್ಲಿಯೂ ಆಡಿದ್ದಾರೆ. ಅಲ್ಲಿ ಅವರು 79.40 ಸರಾಸರಿಯಲ್ಲಿ 397 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಪರ 39 ಪಂದ್ಯಗಳನ್ನಾಡಿರುವ ಧವನ್, 25 ವಿಕೆಟ್ ಹಾಗೂ 210 ರನ್ ಗಳಿಸಿದ್ದಾರೆ.