ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನಕ್ಕೆ ರೋಹಿತ್ ಶರ್ಮಾ ಭೇಟಿ ಸಾಧ್ಯತೆ; ಕಾರಣ ಹೀಗಿದೆ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಚಾಂಪಿಯನ್ಸ್ ಟ್ರೋಫಿಯ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಸಲು ಯೋಜಿಸುತ್ತಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಕೂಡಾ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇದೆ.

ಭಾರತ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂಬುದು ಈಗಾಗಲೇ ಖಚಿತವಾಗಿದೆ. ಹೀಗಾಗಿ ಟೀಮ್ ಇಂಡಿಯಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಬರೋಬ್ಬರಿ ಎಂಟು ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುತ್ತಿದ್ದು, ಈ ಬಾರಿ 8 ತಂಡಗಳು ಭಾಗವಹಿಸುತ್ತಿವೆ. ಭಾರತ ಕ್ರಿಕೆಟ್ ತಂಡದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆದರೆ, ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಭಾರತ ತಂಡ ಪಾಕಿಸ್ತಾನಕ್ಕೆ ತೆರಳದಿದ್ದರೂ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕ್ ದೇಶಕ್ಕೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ. ಹಾಗಂತಾ ಅಲ್ಲಿ ಹಿಟ್‌ಮ್ಯಾನ್ ಯಾವುದೇ ಪಂದ್ಯ ಆಡುತ್ತಿಲ್ಲ.
ಸುದೀರ್ಘ ವರ್ಷಗಳ ಅಂತರದ ಬಳಿಕ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಭಾರತ ತಂಡದ ನಾಯಕ ಆತಿಥೇಯ ರಾಷ್ಟ್ರ ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಫೆಬ್ರುವರಿ 16 ಅಥವಾ 17ರಂದು (ತಾತ್ಕಾಲಿಕ ದಿನಾಂಕ) ಚಾಂಪಿಯನ್ಸ್ ಟ್ರೋಫಿಯ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಸಲು ಯೋಜಿಸುತ್ತಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಇದು ಸಾಮಾನ್ಯ. ಹೀಗಾಗಿ ರೋಹಿತ್ ಶರ್ಮಾ ಕೂಡಾ ಪಾಕಿಸ್ತಾನಕ್ಕೆ ತೆರಳುವ ಸುಳಿವು ಸಿಕ್ಕಿದೆ.
ಮೂಲಗಳಿಂದ ಮಾಹಿತಿ
“ಸುಮಾರು 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಅದ್ಧೂರಿ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ ನಡೆಯುತ್ತಿರುವುದರಿಂದ, ಪಿಸಿಬಿ ಕೂಡಾ ಅದ್ಧೂರಿ ಕಾರ್ಯಕ್ರಮವನ್ನು ಯೋಜಿಸುತ್ತಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಭಾರತ ತಂಡದ ನಾಯಕ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ” ಎಂದು ಮೂಲಗಳು ಸುದ್ದಿಸಂಸ್ಥೆ IANSಗೆ ತಿಳಿಸಿವೆ.
ಫೆಬ್ರುವರಿ 19ರಂದು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗುತ್ತಿದೆ. ಪಾಕಿಸ್ತಾನವು 1996ರಲ್ಲಿ ಭಾರತ ಮತ್ತು ಶ್ರೀಲಂಕಾದೊಂದಿಗೆ ಜಂಟಿಯಾಗಿ ಕ್ರಿಕೆಟ್ ವಿಶ್ವಕಪ್ ಆಯೋಜಿಸಿತ್ತು. ಅದಾದ ನಂತರ ಪಾಕಿಸ್ತಾನವು ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಭಾರತ ತಂಡವು ಪಾಕ್‌ಗೆ ತೆರಳದಿರಲು ನಿರ್ಧರಿಸಿದ ನಂತರ, ಪಂದ್ಯಾವಳಿಯನ್ನು ಹೈಬ್ರಿಡ್ ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ರೋಹಿತ್ ಶರ್ಮಾ ಪಡೆಯ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ.
ಇಂಡೋ-ಪಾಕ್ ನಡುವೆ ರಾಜಕೀಯ ಸಂಬಂಧಗಳು ಹದಗೆಟ್ಟಿರುವುದರಿಂದ, ಉಭಯ ರಾಷ್ಟ್ರಗಳು ವಿಶ್ವಕಪ್ ಮತ್ತು ಏಷ್ಯಾಕಪ್‌ನಂತಹ ಐಸಿಸಿ ಹಾಗೂ ಎಸಿಸಿ ಈವೆಂಟ್‌ಗಳಲ್ಲಿ ಮಾತ್ರ ಸ್ಪರ್ಧಿಸುತ್ತವೆ. ಉಭಯ ತಂಡಗಳು ಕೊನೆಯದಾಗಿ 2024ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಡಿದ್ದವು. ಅದರಲ್ಲಿ ಭಾರತ ಗೆದ್ದಿತ್ತು.
8 ತಂಡಗಳು ಭಾಗಿ
ಟೂರ್ನಿಯಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಜೊತೆಗೆ ಆತಿಥೇಯ ಪಾಕಿಸ್ತಾನ ಭಾಗವಹಿಸಲಿವೆ. ಆತಿಥೇಯ ಪಾಕಿಸ್ತಾನ ತಂಡವು ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸುವುದರೊಂದಿಗೆ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಫೆಬ್ರುವರಿ 23ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್/ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.
