ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ; ಹಾರ್ದಿಕ್ ಆಯ್ಕೆಗೆ ಅಚ್ಚರಿಯ ಕಾರಣ ತಿಳಿಸಿದ ವರದಿ-team india captain rohit sharma likely to retire from t20i cricket after t20 world cup 2024 hardik pandya jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ; ಹಾರ್ದಿಕ್ ಆಯ್ಕೆಗೆ ಅಚ್ಚರಿಯ ಕಾರಣ ತಿಳಿಸಿದ ವರದಿ

ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ; ಹಾರ್ದಿಕ್ ಆಯ್ಕೆಗೆ ಅಚ್ಚರಿಯ ಕಾರಣ ತಿಳಿಸಿದ ವರದಿ

ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ಕುರಿತು ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿ ಬಳಿಕ ಹಿಟ್‌ಮ್ಯಾನ್‌ ವಿದಾಯ ಹೇಳಲಿದ್ದಾರೆ ಎಂದು ವರದಿ ಹೇಳಿದೆ.

ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ
ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ (PTI)

ಐಪಿಎಲ್‌ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಆರಂಭವಾಗುತ್ತಿದೆ. ಮಹತ್ವದ ಟೂರ್ನಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ ಹಾರ್ದಿಕ್‌ ಪಾಂಡ್ಯಗೆ ಉಪನಾಯಕ ಸ್ಥಾನ ನೀಡಲಾಗಿದೆ. ಈ ನಡುವೆ, ಬಹುನಿರೀಕ್ಷಿತ ಪಂದ್ಯಾವಳಿ ಬಳಿಕ ಹಿಟ್‌ಮ್ಯಾನ್‌ ಹಾಗೂ ವಿರಾಟ್‌ ಕೊಹ್ಲಿ ನಿವೃತ್ತಿ ಪಡೆಯಲಿದ್ದಾರೆ ಎಂಬ ವರದಿಗಳು ಮುನ್ನೆಲೆಗೆ ಬಂದಿವೆ. ಅದರಲ್ಲೂ ರೋಹಿತ್‌ ಶರ್ಮಾ ನಿವೃತ್ತಿ ಸುದ್ದಿಗೆ ಪುಷ್ಠಿ ಸಿಕ್ಕಿದೆ.

ದೈನಿಕ್ ಜಾಗರಣ್ ವರದಿಯ ಪ್ರಕಾರ, ವಿಶ್ವಕಪ್‌ ನಂತರ ಚುಟುಕು ಸ್ವರೂಪಕ್ಕೆ ರೋಹಿತ್ ವಿದಾಯ ಹೇಳುವ ಸಾಧ್ಯತೆ ಇದೆ. ಆದರೆ ಆ ಬಳಿಕ ಏನಾಗಲಿದೆ ಎಂಬ ನಿರ್ಧಾರವು ಭಾರತ ಟಿ20 ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯೊಂದಿಗೆ ನೇರವಾಗಿ ಸಂಬಂಧ ಹೊಂದಿದೆ ಎನ್ನುತ್ತಿದೆ ವರದಿ.

ಈಗಾಗಲೇ ವಿಶ್ವಕಪ್‌ಗೆ ಭಾರತದ 15 ಸದಸ್ಯರ ತಂಡ ಪ್ರಕಟಿಸಲಾಗಿದ್ದು, ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಅವರಿಗೆ ಉಪನಾಯಕ ಸ್ಥಾನ ನೀಡಲಾಗಿದೆ. ಎಂಐ ಪರ ಕಳಪೆ ಪ್ರದರ್ಶನ ನೀಡಿದರೂ, ಆಲ್‌ರೌಂಡರ್‌ಗೆ ಉಪನಾಯಕ ಪಟ್ಟ ನೀಡಲಾಗಿದೆ. ಹೀಗಾಗಿ ಈ ಸ್ಥಾನ ನೀಡಲು ಕಾರಣ ಅವರ ಪ್ರದರ್ಶನವಂತೂ ಅಲ್ಲ. ಬದಲಿಗೆ ಆಲ್ರೌಂಡರ್ ಅನ್ನು ಭಾರತದ ಮುಂದಿನ ಟಿ20 ನಾಯಕನಾಗಿ ಮಾಡಲು ಬಿಸಿಸಿಐ ಎದುರು ನೋಡುತ್ತಿದೆ ಎಂಬ ಅಂಶವೂ ಇದರೊಳಗೆ ಅಡಗಿದೆ. ಇದೇ ಕಾರಣದಿಂದಾಗಿ ಅವರನ್ನು ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡುವ ಜೊತೆಗೆ ಉಪನಾಯಕನನ್ನಾಗಿ ನೇಮಿಸಲಾಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ | ಯಾಕ್ರಪ್ಪ ನೀವೇ ಹಿಂಗಾದ್ರೆ ಹೆಂಗೆ; ಟಿ20 ವಿಶ್ವಕಪ್​ಗೂ ಮುನ್ನ ತಲೆನೋವು ಹೆಚ್ಚಿಸಿದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ

ಐಪಿಎಲ್‌ 2024ರ ಆವೃತ್ತಿಯ ಆರಂಭಕ್ಕೂ ಮುನ್ನವೇ, ರೋಹಿತ್‌ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್‌ ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್‌ ಅವರಿಗೆ ನಾಯಕನ ಸ್ಥಾನ ನೀಡಲಾಯ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯ್ತು. ಹಾರ್ದಿಕ್ ಅವರನ್ನು ಎಂಐ ನಾಯಕನಾಗಿ ನೇಮಿಸಿರುವುದು ತಂಡದಲ್ಲಿರುವ ವಿದೇಶಿ ಆಟಗಾರರಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ದೇಶೀಯ ಆಟಗಾರರು ಈಗಲೂ ರೋಹಿತ್ ಅವರತ್ತ ನೋಡುತ್ತಲೇ ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆಯೇ, ಮುಂಬೈ ಇಂಡಿಯನ್ಸ್ ಎರಡು ಬಣಗಳಾಗಿ ವಿಭಜನೆಯಾಗಿದೆ ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದರು. ಇದರ ಬೆನ್ನಲ್ಲೇ ಜಾಗರಣ್ ಬಿತ್ತರಿಸಿರುವ ವರದಿಯು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಒತ್ತಡಕ್ಕೆ ಮಣಿದ ಬಿಸಿಸಿಐ

ಟಿ20 ವಿಶ್ವಕಪ್‌ಗೆ ಭಾರತದ 15 ಸದಸ್ಯರ ತಂಡವನ್ನು ಅಂತಿಮಗೊಳಿಸುವ ವೇಳೆ, ರೋಹಿತ್, ಅಜಿತ್ ಅಗರ್ಕರ್ ಅಥವಾ ಬಿಸಿಸಿಐ ಆಯ್ಕೆ ಸಮಿತಿಯು ಹಾರ್ದಿಕ್ ಪಾಂಡ್ಯ ಅವರ ಆಯ್ಕೆ ಬಯಸಿಲ್ಲ ಎಂದು ವರದಿ ಹೇಳಿದೆ. ಆದರೆ, ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿ ಹೇಳಿದೆ. ಆದರೆ, ಈ ಒತ್ತಡವೇನು, ಹಾಗೂ ಯಾರಿಂದ ಬಂದಿತು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ. ಆ ಮೂಲಕ, ಹಾರ್ದಿಕ್ ಅವರನ್ನು ಭಾರತ ತಂಡದ ಭವಿಷ್ಯದ ದೃಷ್ಟಿಯಿಂದ ಆಯ್ಕೆ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿದೆ.

2022ರ ನವೆಂಬರ್‌ ತಿಂಗಳಿಂದ ಕೇವಲ ಮೂರು ಟಿ20 ಪಂದ್ಯಗಳಲ್ಲಿ ಮಾತ್ರ ಆಡಿರುವ ಹಿಟ್‌ಮ್ಯಾನ್‌, ಎರಡು ಬಾರಿ ಡಕೌಟ್‌ ಆದರೆ, ಒಂದು ಶತಕ ಸಿಡಿಸಿದ್ದಾರೆ. ಐಪಿಎಲ್ 2024ರ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ಕಳೆದ ಆರು ಪಂದ್ಯಗಳಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಇದು ಮುಂಬೈ ತಂಡದಲ್ಲಿ ಮಾತ್ರವಲ್ಲದೆ ಟೀಮ್‌ ಇಂಡಿಯಾದಲ್ಲಿ ನಾಯಕನ ಸ್ಥಾನಕ್ಕೆ ಕುತ್ತು ತಂದಿದೆ. ವಿಶ್ವಕಪ್‌ ಬಳಿಕ ರೋಹಿತ್‌ ತಾವಾಗಿ ನಿವೃತ್ತಿ ಪಡೆಯದಿದ್ದರೂ, ಬಿಸಿಸಿಐ ತಂಡಕ್ಕೆ ಮತ್ತೆ ಆಯ್ಕೆ ಮಾಡುವ ಸಾಧ್ಯತೆ ತೀರಾ ಕಡಿಮೆ ಇದೆ.