Rohit Sharma Retire: ಆಸ್ಟ್ರೇಲಿಯಾ ಸರಣಿ ಬಳಿಕ ರೋಹಿತ್ ಶರ್ಮಾ ನಿವೃತ್ತಿ? ಕೊನೆ ಪಂದ್ಯವಾಗಲಿದೆಯೇ ಸಿಡ್ನಿ ಟೆಸ್ಟ್?
Rohit Sharma Test Retirement: ಮೆಲ್ಬೋರ್ನ್ ಟೆಸ್ಟ್ನಲ್ಲೂ ಕಳಪೆ ಪ್ರದರ್ಶನ ಮುಂದುವರೆಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯ ಕುರಿತು ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯುತ್ತಿರುವ 4ನೇ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಮೂರು ರನ್ನಿಗೆ ಪೆವಿಲಿಯನ್ ಸೇರಿದರು. ಒಟ್ಟಾರೆ ಸರಣಿಯಲ್ಲಿ ರೋಹಿತ್ ಗಳಿಸಿದ ರನ್ನುಗಳ ಸಂಖ್ಯೆ 22. ಇದರ ಬೆನ್ನಲ್ಲೇ 2025ರ ಜನವರಿ 3 ರಿಂದ ಶುರುವಾಗುವ ಆಸ್ಟ್ರೇಲಿಯಾ ವಿರುದ್ಧದ 5ನೇ ಅಥವಾ ಸಿಡ್ನಿ ಟೆಸ್ಟ್ ರೋಹಿತ್ ಪಾಲಿಗೆ ಕೊನೆಯ ಪಂದ್ಯ ಎಂಬ ಅನುಮಾನ ಕ್ರಿಕೆಟ್ ವಲಯದಲ್ಲಿ ಹುಟ್ಟಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ದದ ಸರಣಿ ರೋಹಿತ್ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಅವರ ಟೆಸ್ಟ್ ವೃತ್ತಿಜೀವನ ಉಳಿಸಿಕೊಳ್ಳಲು ಅದ್ಭುತ ಪ್ರದರ್ಶನ ನೀಡುವುದು ಅಗತ್ಯವಾಗಿತ್ತು. ಆದರೆ ಈ ಸರಣಿಗೂ ಮುನ್ನ ಕೆಟ್ಟ ಪ್ರದರ್ಶನದಿಂದ ಕಂಗೆಟ್ಟಿದ್ದ ರೋಹಿತ್, ಲಯಕ್ಕೆ ಮರಳಲು ವಿಫಲರಾಗಿದ್ದಾರೆ. ಪಿತೃತ್ವ ರಜೆ ಪಡೆದಿದ್ದ ಹಿನ್ನೆಲೆ ಪರ್ತ್ ಟೆಸ್ಟ್ಗೆ ಗೈರಾಗಿದ್ದ ಹಿಟ್ಮ್ಯಾನ್, 2ನೇ ಟೆಸ್ಟ್ ಪಂದ್ಯಕ್ಕೂ ತಂಡವನ್ನು ಸೇರ್ಪಡೆಯಾದರು. ಅವರ ಅಲಭ್ಯತೆ ಮಧ್ಯೆಯೂ ಮೊದಲ ಪಂದ್ಯವನ್ನು ಭಾರತ 295 ರನ್ಗಳಿಂದ ಗೆದ್ದಿತ್ತು. ಆದರೀಗ ಅವರ ನಾಯಕತ್ವದ ಜೊತೆಗೆ ಬ್ಯಾಟಿಂಗ್ನಲ್ಲೂ ಕಳಪೆ ಪ್ರದರ್ಶನ ಮುಂದುವರೆಸಿದ್ದು ಚರ್ಚೆಗೆ ಗ್ರಾಸವಾಗಿದೆ.
ರೋಹಿತ್ ಬ್ಯಾಟಿಂಗ್ ಮತ್ತು ನಾಯಕತ್ವ
ಅಡಿಲೇಡ್ ಟೆಸ್ಟ್ಗೆ ನಾಯಕತ್ವ ವಹಿಸಿಕೊಂಡ ರೋಹಿತ್, ತಂಡವನ್ನು ಸಮರ್ಥವಾಗಿ ಮುನ್ನಡೆಸಲು ವಿಫಲರಾದರು. ಪರಿಣಾಮ 10 ವಿಕೆಟ್ಗಳ ಸೋಲಿಗೂ ಕಾರಣರಾದರು. ಬ್ರಿಸ್ಬೇನ್ ಟೆಸ್ಟ್ನಲ್ಲೂ ನಾಯಕತ್ವ ಗಮನ ಸೆಳೆಯುವಂತಿರಲಿಲ್ಲ. ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರೂ ಅವರ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಈಗ ಮೆಲ್ಬೋರ್ನ್ನಲ್ಲೂ ಇದೇ ಪರಿಸ್ಥಿತಿ ಪುನರಾವರ್ತಿತವಾಗಿದೆ. ನಾಯಕತ್ವದ ಜೊತೆಗೆ ಬ್ಯಾಟಿಂಗ್ನಲ್ಲೂ ಸದ್ದೇ ಮಾಡದ ಹಿಟ್ಮ್ಯಾನ್ ಅವರ ಗರಿಷ್ಠ ಸ್ಕೋರ್ 10. ಹೌದು, ಈ ಸರಣಿಯಲ್ಲಿ ರೋಹಿತ್ರ ವೈಯಕ್ತಿಕ ಗರಿಷ್ಠ ಸ್ಕೋರ್ ಇದು. ಅವರು ಈ ಸರಣಿ ಮಾತ್ರವಲ್ಲ, 2024ರ ಕ್ಯಾಲೆಂಡರ್ ವರ್ಷದಲ್ಲೇ ಹೀನಾಯ ಪ್ರದರ್ಶನ ನೀಡಿದ್ದಾರೆ ಎಂಬುದಕ್ಕೆ ಅವರ ಅಂಕಿ-ಅಂಶಗಳೇ ಸಾಕ್ಷಿ.
ಪ್ರಸ್ತುತ ನಡೆಯುತ್ತಿರುವ ಬಿಜಿಟಿ ಸರಣಿಯಲ್ಲಿ ರೋಹಿತ್ ಶರ್ಮಾ ಈವರೆಗೂ 3 ಪಂದ್ಯ, 4 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಮೂರರಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರೆ, ಒಂದು ಬಾರಿ ಆರಂಭಿಕನಾಗಿ ಕಣಕ್ಕಿಳಿದಿದ್ದಾರೆ. ಆದರೆ ಅವರು ಈವರೆಗೂ ಗಳಿಸಿದ ರನ್ ಒಟ್ಟು 22 ರನ್. ಅವರ ಬ್ಯಾಟಿಂಗ್ ಸರಾಸರಿ 5.50. ಇದು ಬೌಲರ್ ಜಸ್ಪ್ರೀತ್ ಬುಮ್ರಾಗಿಂತ (10) ಕಡಿಮೆ. ಇನ್ನು 2024ರ ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್ ಗಳಿಸಿದ ಸ್ಕೋರ್ 610 ರನ್. 14 ಪಂದ್ಯ, 25 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿರುವ ಅವರು, ತಲಾ 2 ಶತಕ, ಅರ್ಧಶತಕ ಸಹಿತ 25.41ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಈ ವರ್ಷ ಟೆಸ್ಟ್ನಲ್ಲಿ ರೋಹಿತ್ ಪ್ರದರ್ಶನ
ಸೌತ್ ಆಫ್ರಿಕಾ ವಿರುದ್ಧ 1 ಟೆಸ್ಟ್ (2 ಇನ್ನಿಂಗ್ಸ್) - 55 ರನ್
ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ (9 ಇನ್ನಿಂಗ್ಸ್) - 400 ರನ್
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ (4 ಇನ್ನಿಂಗ್ಸ್) - 42 ರನ್
ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ (6 ಇನ್ನಿಂಗ್ಸ್) - 91 ರನ್
ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್ (4 ಇನ್ನಿಂಗ್ಸ್) - 22 ರನ್ (ಡಿಸೆಂಬರ್ 27ರ ತನಕ)
ಸಿಕ್ಕಾಪಟ್ಟೆ ಟೀಕೆ, ವಿದಾಯಕ್ಕೆ ಒತ್ತಾಯ
ರೋಹಿತ್ ಅವರ ಕಳಪೆ ಫಾರ್ಮ್ಗೆ ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿದೆ. ಮಾಜಿ ಕ್ರಿಕೆಟಿಗರು ಸಹ ಅನುಭವಿ ಆಟಗಾರನ ಆಟಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಅವರು ವಿದಾಯ ಹೇಳುವುದೇ ಲೇಸು ಎಂದು ಹಲವರು ಬಯಸಿದ್ದಾರೆ. ಅವರು ಕಳಪೆ ಪ್ರದರ್ಶನ ನೀಡಿದ ಪ್ರತಿ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ನಿವೃತ್ತಿ ನೀಡುವಂತೆ ಟ್ರೆಂಡ್ ಆಗುತ್ತಲೇ ಇರುತ್ತದೆ. ಇದೀಗ ಮತ್ತೆ ಅದೇ ಟ್ರೆಂಡ್ ಆಗುತ್ತಿದೆ. ಇದೀಗ ಕಠಿಣ ಸಮಯ ಎದುರಿಸಿ ತನ್ನೊಂದಿಗೆ ತಾನೇ ಹೋರಾಟ ಮಾಡುತ್ತಿರುವ ರೋಹಿತ್, ತನ್ನಲ್ಲಿನ್ನೂ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸುವುದು ತನ್ನ ಮುಂದಿರುವ ದಾರಿಯಾಗಿದೆ. ಮೆಲ್ಬೋರ್ನ್ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಲಯಕ್ಕೆ ಮರಳುತ್ತಾರೆಯೇ? ಕಾದುನೋಡಬೇಕಿದೆ.
ರೋಹಿತ್ ಶರ್ಮಾ ಪಾಲಿಗೆ ಇದು ಕೊನೆಯ ಟೆಸ್ಟ್ ಪಂದ್ಯವಾಗುತ್ತದೆ ಎಂದು ಹೇಳಲು ಮತ್ತೊಂದು ಕಾರಣವಿದೆ. ಅವರ ಫಿಟ್ನೆಸ್ ಸಹ ಅವರ ವಿದಾಯಕ್ಕೆ ಒತ್ತಡ ಹೇರುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಭಾರತ ತಂಡ ಅರ್ಹತೆ ಪಡೆಯಲು ವಿಫಲವಾದರೆ, ಸಿಡ್ನಿ ಟೆಸ್ಟ್ ರೋಹಿತ್ ಅವರ ಕೊನೆಯ ಟೆಸ್ಟ್ ಆಗಬಹುದು ಎಂದು ಚರ್ಚೆಗಳು ಶುರುವಾಗಿವೆ. ಸುನಿಲ್ ಗವಾಸ್ಕರ್ ಸಹ ಈ ಬಗ್ಗೆ ಮಾತನಾಡಿ, ಸಿಡ್ನಿ ಟೆಸ್ಟ್ ಸೇರಿ ಇನ್ನೂ ಮೂರು ಇನ್ನಿಂಗ್ಸ್ಗಳು ರೋಹಿತ್ಗೆ ಸಿಗಲಿವೆ. ಆದರೆ, ಈ ಮೂರು ಇನ್ನಿಂಗ್ಸ್ಗಳಲ್ಲಿ ರನ್ ಗಳಿಸದಿದ್ದರೆ ಪ್ರಶ್ನೆಗಳನ್ನು ಎದುರಿಸಬೇಕು ಎಂದು ಅವರು ಹೇಳಿದ್ದಾರೆ. ಹೀಗಾಗಿ ಏನಾಗಲಿದೆ ಎಂದು ಕಾದುನೋಡೋಣ.