ಐರ್ಲೆಂಡ್ ವಿರುದ್ಧ ಅಬ್ಬರಿಸಿದ ರೋಹಿತ್ ಶರ್ಮಾ; ಟಿ20ಐ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳು ಧೂಳೀಪಟ
Rohit Sharma Records : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟಿ20ಐ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (T20 World Cup 2024) ಟೀಮ್ ಇಂಡಿಯಾ (Team Indian) ಗೆಲುವಿನ ಅಭಿಯಾನ ಆರಂಭಿಸಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಭರ್ಜರಿ 8 ವಿಕೆಟ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಲವು ದಾಖಲೆ ಬರೆದಿದ್ದಾರೆ. ನಾಯಕನಾಗಿಯೂ ವಿಶೇಷ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಕಲೆ ಹಾಕಿದ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದರು. ಆದರೆ ಈ ಅರ್ಧಶತಕದೊಂದಿಗೆ ಹಲವು ದಾಖಲೆ ಬರೆದಿದ್ದಾರೆ. ಘಟಾನುಘಟಿ ಆಟಗಾರರನ್ನೇ ಹಿಂದಿಕ್ಕುವ ಮೂಲಕ ಗಮನ ಸೆಳೆದಿದ್ದಾರೆ. ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹಿಟ್ಮ್ಯಾನ್, ದೀರ್ಘಕಾಲದ ಎಂಎಸ್ ಧೋನಿ ದಾಖಲೆಯನ್ನೂ ಮುರಿದಿದ್ದಾರೆ. ಆ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ.
ಟಿ20ಐ ಕ್ರಿಕೆಟ್‌ನಲ್ಲಿ 4000 ರನ್ ಸಿಡಿಸಿದ ಹಿಟ್ಮ್ಯಾನ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ 4000 ರನ್ ಪೂರೈಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರು 3974 ರನ್ ಬಾರಿಸಿದ್ದರು. ಐರ್ಲೆಂಡ್ ವಿರುದ್ಧ 26 ರನ್ ಬಾರಿಸಿದ ಬೆನ್ನಲ್ಲೇ 4000 ರನ್ಗಳ ಗಡಿ ದಾಟಿದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡರು. ಭಾರತದ ವಿರಾಟ್ ಕೊಹ್ಲಿ, ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ. ನಂತರ ಪಾಕಿಸ್ತಾನ ತಂಡದ ಬಾಬರ್ ಅಜಮ್ ಈ ಸಾಧನೆ ಮಾಡಿದರು.
ಮೂರು ಫಾರ್ಮೆಟ್ನಲ್ಲೂ 4000+ ಸ್ಕೋರ್
ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲೂ 4000+ (ಏಕದಿನ, ಟಿ20ಐ, ಟೆಸ್ಟ್) 4000+ ಸ್ಕೋರ್ ಮಾಡಿರುವ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ರೋಹಿತ್ ಟಿ20ಐನಲ್ಲಿ 4026, ಟೆಸ್ಟ್‌ನಲ್ಲಿ 4137, ಏಕದಿನದಲ್ಲಿ 10709 ರನ್ ಸಿಡಿಸಿದ್ದಾರೆ. ಮೊದಲು ಈ ಸಾಧನೆ ಮಾಡಿದ್ದು ವಿರಾಟ್ ಕೊಹ್ಲಿ. ಅವರು ಟೆಸ್ಟ್‌ನಲ್ಲಿ 8848, ಏಕದಿನದಲ್ಲಿ 13848, ಮತ್ತು ಟಿ20ಐನಲ್ಲಿ 4038 ರನ್ ಬಾರಿಸಿದ್ದಾರೆ.
ಟಿ20 ವಿಶ್ವಕಪ್ನಲ್ಲಿ 1000 ರನ್
ಟಿ20 ವಿಶ್ವಕಪ್ ಇತಿಹಾಸದಲ್ಲಿ 1000 ರನ್ ಪೂರೈಸಿದ ವಿಶ್ವದ ಮೂರನೇ ಆಟಗಾರ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ನಂತರ ಶ್ರೀಲಂಕಾದ ಮಹೇಲಾ ಜಯವರ್ಧನೆ ಸ್ಥಾನ ಪಡೆದಿದ್ದಾರೆ. ರೋಹಿತ್ 40 ಪಂದ್ಯಗಳ 37 ಇನ್ನಿಂಗ್ಸ್ಗಳ ಪೈಕಿ 1015 ರನ್ ಗಳಿಸಿದ್ದಾರೆ. ಕೊಹ್ಲಿ, 26 ಇನ್ನಿಂಗ್ಸ್ಗಳಲ್ಲಿ 1142 ರನ್, ಜಯವರ್ಧನೆ 1016 ರನ್ ಸಿಡಿಸಿದ್ದಾರೆ.
ನಾಯಕನಾಗಿ ರೋಹಿತ್ ದಾಖಲೆ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ನಾಯಕನಾಗಿ ರೋಹಿತ್ ಶರ್ಮಾ ಅವರು ಎಂಎಸ್ ಧೋನಿ ದಾಖಲೆ ಸರಿಗಟ್ಟಿದ್ದಾರೆ. ಟಿ20ಐನಲ್ಲಿ ಭಾರತದ ಪರ ಅತ್ಯಧಿಕ ಪಂದ್ಯ ಗೆದ್ದವರ ಪಟ್ಟಿಯಲ್ಲಿ ರೋಹಿತ್-ಧೋನಿ ಜಂಟಿ ಸ್ಥಾನ ಪಡೆದಿದ್ದಾರೆ. ಇಬ್ಬರೂ ಸಹ ತಲಾ 43 ಪಂದ್ಯಗಳಲ್ಲಿ ಗೆದ್ದಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 32 ಟಿ20ಐ ಗೆದ್ದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್
ಐರ್ಲೆಂಡ್ ವಿರುದ್ಧದ ಮೂರು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ಸೃಷ್ಟಿಸಿದರು. ರೋಹಿತ್ ಏಕದಿನದಲ್ಲಿ 323 ಸಿಕ್ಸರ್, ಟಿ20ಐಗಳಲ್ಲಿ 193 ಸಿಕ್ಸರ್ ಮತ್ತು ಟೆಸ್ಟ್‌ನಲ್ಲಿ 84 ಸಿಕ್ಸರ್ ಚಚ್ಚಿದ್ದಾರೆ. ಕ್ರಿಸ್ಗೇಲ್ 553 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.