ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ಮತ್ತಷ್ಟು ವಿಳಂಬ; ಈ ದಿನದಂದು ಟೀಮ್‌ ಇಂಡಿಯಾ ಘೋಷಣೆ ಸಾಧ್ಯತೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ಮತ್ತಷ್ಟು ವಿಳಂಬ; ಈ ದಿನದಂದು ಟೀಮ್‌ ಇಂಡಿಯಾ ಘೋಷಣೆ ಸಾಧ್ಯತೆ

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ಮತ್ತಷ್ಟು ವಿಳಂಬ; ಈ ದಿನದಂದು ಟೀಮ್‌ ಇಂಡಿಯಾ ಘೋಷಣೆ ಸಾಧ್ಯತೆ

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಜನವರಿ 12ರೊಳಗೆ ಭಾರತ ತಂಡ ಪ್ರಕಟವಾಗಬೇಕಿತ್ತು. ಬಿಸಿಸಿಐ ಇದೀಗ ತಂಡದ ಘೋಷಣೆಯಲ್ಲಿ ವಿಳಂಬ ಮಾಡಿದೆ. ಟೂರ್ನಿ ಆರಂಭಕ್ಕಿಂತ ಒಂದು ತಿಂಗಳು ಮುಂಚಿತವಾಗಿ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ಮುಂದೂಡಿಕೆ: ಐಸಿಸಿಗೆ ಬಿಸಿಸಿಐ ಮನವಿ (File)
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ಮುಂದೂಡಿಕೆ: ಐಸಿಸಿಗೆ ಬಿಸಿಸಿಐ ಮನವಿ (File) (Surjeet Yadav)

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy) ಭಾರತ ತಂಡವನ್ನು ಪ್ರಕಟಿಸುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ವಾರಾಂತ್ಯದಲ್ಲಿ (ಜನವರಿ 12 ಭಾನುವಾರ) ಟೀಮ್‌ ಇಂಡಿಯಾ ಪ್ರಕಟಿಸುವ ಸಾಧ್ಯತೆಯಿಲ್ಲ. ಬಿಸಿಸಿಐ ತಂಡದ ಘೋಷಣೆಯನ್ನು ವಿಳಂಬಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಶನಿವಾರ (ಜ.11) ಸಭೆ ಸೇರುತ್ತಿದ್ದು, ಅದಾದ ನಂತರ ಜನವರಿ 12ರಂದು (ಭಾನುವಾರ) ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆಯುವ ಏಕದಿನ ಮತ್ತು ಟಿ20 ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತಾತ್ಕಾಲಿಕ ತಂಡವನ್ನು ಪ್ರಕಟಿಸಬೇಕಿತ್ತು. ಈಗ ಅದು ವಿಳಂಬವಾಗಲಿದೆ ಎಂದು ಆರಂಭಿಕ ವರದಿಗಳು ಸೂಚಿಸಿವೆ.

ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಅಂತಿಮಗೊಳಿಸಲು ಐಸಿಸಿಯಿಂದ ಬಿಸಿಸಿಐ ಹೆಚ್ಚಿನ ಸಮಯವನ್ನು ಕೋರಿದೆ ಎಂದು ಕ್ರಿಕ್‌ಬಜ್ ವರದಿ ತಿಳಿಸಿದೆ. ಪಂದ್ಯಾವಳಿಯ ಮಾರ್ಗಸೂಚಿಗಳ ಪ್ರಕಾರ, ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಐಸಿಸಿ ಈವೆಂಟ್‌ಗೆ ಕನಿಷ್ಠ ಒಂದು ತಿಂಗಳ ಮೊದಲು ತಾತ್ಕಾಲಿಕ ತಂಡವನ್ನು ಹೆಸರಿಸುತ್ತವೆ. ಈ ಬಾರಿ ಪಂದ್ಯಾವಳಿಯ ಆರಂಭಕ್ಕೆ ಐದು ವಾರಗಳ ಮೊದಲು ಚಾಂಪಿಯನ್ಸ್ ಟ್ರೋಫಿಗೆ ತಾತ್ಕಾಲಿಕ ತಂಡವನ್ನು ಹೆಸರಿಸುವಂತೆ ಎಲ್ಲಾ ಎಂಟು ತಂಡಗಳಲ್ಲಿ ಐಸಿಸಿ ವಿನಂತಿಸಿತ್ತು.

“ತಂಡ ಪ್ರಕಟಿಸಲು ಬಿಸಿಸಿಐ ಹೆಚ್ಚಿನ ಸಮಯ ಕೋರುವ ನಿರೀಕ್ಷೆಯಿದೆ. ತಾತ್ಕಾಲಿಕ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಮುಖ್ಯವಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಆಟಗಾರರೇ ಭಾಗವಹಿಸುವ ಸಾಧ್ಯತೆಯಿದೆ,” ಎಂದು ವರದಿ ಹೇಳಿದೆ.

ಭಾರತ ತಂಡ ಪ್ರಕಟ ಯಾವಾಗ?

ಇದೀಗ, ಭಾರತದ ಚಾಂಪಿಯನ್ಸ್ ಟ್ರೋಫಿ ತಂಡವನ್ನು ಜನವರಿ 12ರ ಬದಲಿಗೆ ಜನವರಿ 19ರಂದು ಘೋಷಿಸುವ ಸಾಧ್ಯತೆಯಿದೆ. ಅಂದರೆ ಪಂದ್ಯಾವಳಿ ಆರಂಭವಾಗುವ ಒಂದು ತಿಂಗಳ ಮೊದಲು ಪ್ರಕಟಿಸುವ ನಿರೀಕ್ಷೆ ಇದೆ. ಫೆಬ್ರುವರಿ 19ರಂದು ಕರಾಚಿಯಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಐಸಿಸಿಗೆ ಮುಂಚಿತವಾಗಿ ತಂಡದ ಪಟ್ಟಿಯನ್ನು ನೀಡಿದ ನಂತರ, ಅದರಲ್ಲಿ ಬದಲಾವಣೆ ಮಾಡಲು ಅವಕಾಶಗಳಿವೆ. ಐಸಿಸಿ ಮಾರ್ಗಸೂಚಿಗಳ ಪ್ರಕಾರ, ತಾತ್ಕಾಲಿಕ ತಂಡವು 15 ಸದಸ್ಯರನ್ನು ಹೊಂದಿರಲಿದೆ. ಇದರೊಂದಿಗೆ ಮೂವರು ಪ್ರಯಾಣ ಮೀಸಲು ಆಟಗಾರರನ್ನು ತಂಡ ಹೊಂದಿರುತ್ತದೆ.

ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಹೆಚ್ಚೂ ಕಡಿಮೆ ಒಂದೇ ತಂಡ ಇರಲಿದೆ ಎಂದು ವರದಿ ಹೇಳಿದೆ. ಇಂಗ್ಲೆಂಡ್ ಸರಣಿಯ ಮೂಲಕ ಏಕದಿನ ಸ್ವರೂಪದಲ್ಲಿ ಅಭ್ಯಾಸಕ್ಕೆ ಆಟಗಾರರಿಗೆ ಅದು ಕೊನೆಯ ಅವಕಾಶವಾಗಿರಲಿದೆ. ಹೀಗಾಗಿ ತಂಡ ಮಾತ್ರವಲ್ಲದೆ ಆಡುವ ಬಳಗದ ಸಂಯೋಜನೆಯಲ್ಲಿ ಹೆಚ್ಚು ಬದಲಾವಣೆಯಾಗುವ ಸಾಧ್ಯತೆ ಇಲ್ಲ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ರಿಷಭ್ ಪಂತ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್/ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.‌

Whats_app_banner