Explainer: ಬಾಕ್ಸಿಂಗ್ ಡೇ ಟೆಸ್ಟ್ ಸೋತರೂ ಭಾರತ ತಂಡ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಬಹುದಾ? ಸಾಧ್ಯತೆಗಳು ಹೀಗಿವೆ
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಸೋತಿರುವ ಭಾರತ ಕ್ರಿಕೆಟ್ ತಂಡವು, ಡಬ್ಲ್ಯುಟಿಸಿ ಫೈನಲ್ ರೇಸ್‌ನಿಂದ ಹೊರಬಿದ್ದಿಲ್ಲ. ಟೀಮ್ ಇಂಡಿಯಾಗೆ ಮುಂದೆಯೂ ಅವಕಾಶವಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗೆ ಗೆದ್ದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಸಾಧ್ಯತೆ ಇದೆ.
ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು 184 ರನ್‌ಗಳಿಂದ ಸೋಲೊಪ್ಪಿದೆ. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಅನುಭವಿಸಿದ್ದು, ಸಿಡ್ನಿ ಟೆಸ್ಟ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸರಣಿ ಒಂದೆಡೆಯಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಹಾಕುವ ಭಾರತದ ಲೆಕ್ಕಾಚಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದ್ದರೂ, ಭಾರತ ತಂಡ ತುಸು ನಿರಾಳವಾಗುತ್ತಿತ್ತು. ಆದರೆ, ಸೋಲಿನಿಂದಾಗಿ ತಂಡವು ಸಿಡ್ನಿ ಟೆಸ್ಟ್‌ನಲ್ಲಿ ಗೆಲ್ಲಬೇಕಾದ ಒತ್ತಡದ ಜೊತೆಗೆ, ಬೇರೆ ತಂಡಗಳ ಸೋಲು-ಗೆಲುವನ್ನು ಅವಲಂಬಿಸಬೇಕಾಗಿ ಬಂದಿದೆ.
ಜನವರಿ 3ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ (BGT) ಸರಣಿಯ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲು ಪಂದ್ಯದಲ್ಲಿ ಭಾರತವು ಗೆಲ್ಲಲೇಬೇಕಿದೆ. ಜೊತೆಗೆ ಡಬ್ಲ್ಯುಟಿಸಿ ಫೈನಲ್ ಆಸೆ ಜೀವಂತವಾಗಿರಿಸಲು ಆ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿದೆ.
ಆಸೀಸ್ ವಿರುದ್ಧದ ಐದನೇ ಟೆಸ್ಟ್ ಪಂದ್ಯವು ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ನಾಲ್ಕನೇ ಟೆಸ್ಟ್ ಪಂದ್ಯ ಸೋತ ಕಾರಣಕ್ಕೆ, ಭಾರತ ತಂಡ ಡಬ್ಲ್ಯುಟಿಸಿ ಫೈನಲ್ ರೇಸ್‌ನಿಂದ ಹೊರಬಿದ್ದಿಲ್ಲ. ತಂಡಕ್ಕೆ ಮುಂದೆಯೂ ಅವಕಾಶವಿದೆ. ರೋಹಿತ್ ಶರ್ಮಾ ಬಳಗವು ಮುಂದಿನ ವರ್ಷ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಅವಕಾಶ ಹೊಂದಿದ್ದು, ಅದಕ್ಕಾಗಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದೊಂದಿಗೆ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ.
ಆಸ್ಟ್ರೇಲಿಯಾ ದಾರಿ ಸುಗಮ
ಸದ್ಯದ ಲೆಕ್ಕಾಚಾರದ ಪ್ರಕಾರ, ಫೈನಲ್‌ಗೆ ಅರ್ಹತೆ ಪಡೆಯುವ ವಿಷಯದಲ್ಲಿ ಆಸ್ಟ್ರೇಲಿಯಾ ಸುಸ್ಥಿತಿಯಲ್ಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಅರ್ಹತೆ ಪಡೆದಿದ್ದು, ಒಂದು ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಆಸೀಸ್ ತಂಡವು ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ, ನೇರವಾಗಿ ಡಬ್ಲ್ಯುಟಿಸಿ ಫೈನಲ್‌ಗೆ ಲಗ್ಗೆ ಇಡುತ್ತದೆ. ಮುಂದೆ ಶ್ರೀಲಂಕಾ ವಿರುದ್ಧ ಆಸೀಸ್ 2-0 ಅಂತರದಲ್ಲಿ ಸರಣಿ ಸೋತರೂ ಸಮಸ್ಯೆ ಇಲ್ಲ. ಅಲ್ಲಿಗೆ ಭಾರತ ಫೈನಲ್ ರೇಸ್‌ನಿಂದ ಹೊರಬಿದ್ದಂತೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಏನು ಮಾಡಬೇಕು?
ಆಸೀಸ್ ವಿರುದ್ದದ ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕು. ಅಷ್ಟಕ್ಕೆ ತಂಡ ಡಬ್ಲ್ಯುಟಿಸಿ ಫೈನಲ್ ಪ್ರವೇಶ ಸಾಧ್ಯವಿಲ್ಲ. ಆ ನಂತರ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಕಾಂಗರೂಗಳನ್ನು ಕನಿಷ್ಠ 1-0 ಅಂತರದಿಂದ ಸೋಲಿಸಿದರೆ ಮಾತ್ರ ಭಾರತಕ್ಕೆ ಅವಕಾಶಗಳಿವೆ. ಹೀಗಾಗಿ ತಂಡವು ಲಂಕಾ ಮೇಲೆ ಭರವಸೆಯನ್ನು ಇರಿಸಬೇಕಾಗುತ್ತದೆ. ಭಾರತವು ಸಿಡ್ನಿ ಟೆಸ್ಟ್ ಗೆದ್ದರೆ ಮಾತ್ರ ತಂಡದ ಅವಕಾಶಗಳು ತೆರೆದುಕೊಳ್ಳುತ್ತವೆ.
ಒಂದು ವೇಳೆ ಭಾರತವು ಸಿಡ್ನಿಯಲ್ಲಿ ಡ್ರಾ ಸಾಧಿಸಿದರೂ, ಡಬ್ಲ್ಯುಟಿಸಿ ಫೈನಲ್ ಕನಸು ನುಚ್ಚು ನೂರಾಗಲಿದೆ. ಅಲ್ಲಿಗೆ ಆಸೀಸ್ ತಂಡದ ಅವಕಾಶ ದುಪ್ಪಟ್ಟಾಗುತ್ತದೆ.
ಸಿಡ್ನಿ ಟೆಸ್ಟ್ ಸೋತರೆ ಬಾರ್ಡರ್-ಗವಾಸ್ಕರ್ ಟ್ರೋಫಿಯೂ ಮಿಸ್
ಒಂದು ವೇಳೆ ಭಾರತವು ಸಿಡ್ನಿ ಟೆಸ್ಟ್ ಪಂದ್ಯ ಗೆದ್ದರೆ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶ ಒಂದೆಡೆಯಾದರೆ ಬಾರ್ಡರ್-ಗವಾಸ್ಕರ್ ಟ್ರೋಫಿಯೂ ಸಿಗಲಿದೆ. ಏಕೆಂದರೆ, ಆಸ್ಟ್ರೇಲಿಯಾ ತಂಡ ಒಂದು ದಶಕದಿಂದ ಭಾರತದ ವಿರುದ್ಧ ಟೆಸ್ಟ್ ಸರಣಿ ಗೆದ್ದಿಲ್ಲ. ಈ ಬಾರಿ ಕಾಂಗರೂಗಳಿಗೆ ಆ ಅವಕಾಶ ಸಿಕ್ಕಿದೆ. ಸರಣಿ 2-2 ಅಂತರದಿಂದ ಸಮಬಲಗೊಂಡರೂ ಭಾರತವೇ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ. ಏಕೆಂದರೆ ಸರಣಿ ಸಮಬಲವಾದ ಸಮಯದಲ್ಲಿ, ಈ ಹಿಂದಿನ ಸರಣಿ ವಿಜೇತರಿಗೆ ಟ್ರೋಫಿ ನೀಡಲಾಗುತ್ತದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope