ಕ್ರಿಕೆಟ್ ಲೋಕದ ಗಬ್ಬರ್‌ಗೆ ಹುಟ್ಟುಹಬ್ಬದ ಸಂಭ್ರಮ; ಶಿಖರ್ ಧವನ್ ವೃತ್ತಿಜೀವನದ ದಾಖಲೆ, ಗಬ್ಬರ್ ಹೆಸರಿನ ಹಿಂದಿನ ಕತೆ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ಲೋಕದ ಗಬ್ಬರ್‌ಗೆ ಹುಟ್ಟುಹಬ್ಬದ ಸಂಭ್ರಮ; ಶಿಖರ್ ಧವನ್ ವೃತ್ತಿಜೀವನದ ದಾಖಲೆ, ಗಬ್ಬರ್ ಹೆಸರಿನ ಹಿಂದಿನ ಕತೆ ಹೀಗಿದೆ

ಕ್ರಿಕೆಟ್ ಲೋಕದ ಗಬ್ಬರ್‌ಗೆ ಹುಟ್ಟುಹಬ್ಬದ ಸಂಭ್ರಮ; ಶಿಖರ್ ಧವನ್ ವೃತ್ತಿಜೀವನದ ದಾಖಲೆ, ಗಬ್ಬರ್ ಹೆಸರಿನ ಹಿಂದಿನ ಕತೆ ಹೀಗಿದೆ

Shikhar Dhawan: ಭಾರತ ಕ್ರಿಕೆಟ್‌ ತಂಡ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾದ ಶಿಖರ್ ಧವನ್, ತಮ್ಮ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿದ್ದಾರೆ. ಅಲ್ಲದೆ ಸ್ಮರಣೀಯ ಇನ್ನಿಂಗ್ಸ್‌ಗಳ ಭಾಗವಾಗಿದ್ದಾರೆ. ಹಟ್ಟುಹಬ್ಬದ ಸಂಭ್ರಮದಲ್ಲಿರುವ ಶಿಖರ್ ಧವನ್ ಕುರಿತು ಮತ್ತಷ್ಟು ತಿಳಿಯಿರಿ.

ಕ್ರಿಕೆಟ್ ಲೋಕದ ಗಬ್ಬರ್‌ಗೆ ಹುಟ್ಟುಹಬ್ಬದ ಸಂಭ್ರಮ; ಶಿಖರ್ ಧವನ್ ವೃತ್ತಿಜೀವನದ ದಾಖಲೆ ಹೀಗಿದೆ
ಕ್ರಿಕೆಟ್ ಲೋಕದ ಗಬ್ಬರ್‌ಗೆ ಹುಟ್ಟುಹಬ್ಬದ ಸಂಭ್ರಮ; ಶಿಖರ್ ಧವನ್ ವೃತ್ತಿಜೀವನದ ದಾಖಲೆ ಹೀಗಿದೆ (AFP)

ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್, ಇಂದು (ಡಿಸೆಂಬರ್ 5, ಗುರುವಾರ) ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. 2000ರ ದಶಕದ ಕೊನೆಯಲ್ಲಿ ತಮ್ಮ ಸೊಗಸಾದ ಬ್ಯಾಟಿಂಗ್‌ ಮೂಲಕ ಎದುರಾಳಿಗಳನ್ನು ಕಾಡಿದ್ದ ಬ್ಯಾಟರ್‌, ತಮ್ಮ ಆಕರ್ಷಕ ಸ್ಟ್ರೋಕ್‌ಪ್ಲೇಗಳಿಂದ ಹೆಸರಾಗಿದ್ದರು. ಟೀಮ್‌ ಇಂಡಿಯಾ ಹಾಲಿ ನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಸಮರ್ಥ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದ ಧವನ್, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬಾಯ್‌ ಹೇಳಿದ್ದಾರೆ. ಪ್ರಸ್ತುತ ನೇಪಾಳ ಪ್ರೀಮಿಯರ್‌ ಲೀಗ್‌ನಲ್ಲಿ ಆಡುತ್ತಿರುವ ಧವನ್‌, ಇಂದು ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಭಾರತದ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರಾದ ಶಿಖರ್ ಧವನ್, ತಮ್ಮ ದಶಕಗಳ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿದ್ದಾರೆ. ಶಿಖರ್ ಧವನ್ ವೃತ್ತಿಜೀವನದ ಮಹತ್ವದ ಅಂಕಿ-ಅಂಶಗಳು ಹಾಗೂ ದಾಖಲೆಗಳನ್ನು ನೋಡೋಣ.

ಭಾರತ ಕ್ರಿಕೆಟ್‌ ತಂಡದ ಪರ ವಿವಿಧ ಸ್ವರೂಪಗಳಲ್ಲಿ 269 ಪಂದ್ಯಗಳಲ್ಲಿ ಧವನ್‌ ಆಡಿದ್ದಾರೆ. 24 ಶತಕಗಳ ಸಹಿತ ಬರೋಬ್ಬರಿ 10,867 ರನ್ ಸಿಡಿಸಿದ್ದಾರೆ.

2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿ ಧವನ್ ಆಡಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಧವನ್.‌ ಎಡಗೈ ಆಟಗಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (701) ಭಾರತೀಯರ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಕ್ರಿಸ್ ಗೇಲ್ (791) ಮತ್ತು ಮಹೇಲಾ ಜಯವರ್ಧನೆ (742) ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಪದಾರ್ಪಣೆ ಪಂದ್ಯದಲ್ಲೇ ದಾಖಲೆ

2013ರಲ್ಲಿ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಪಂದ್ಯದ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ ಶಿಖರ್ ಧವನ್, ಪದಾರ್ಪಣೆ ಪಂದ್ಯದಲ್ಲೇ ಸ್ಫೋಟಕ ಶತಕ ಬಾರಿಸಿದರು. 174 ಎಸೆತಗಳಲ್ಲಿ 33 ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 187 ರನ್ ಗಳಿಸಿದರು. ಪದಾರ್ಪಣೆ ಪಂದ್ಯದಲ್ಲೇ ಭಾರತೀಯರ ಗರಿಷ್ಠ ಸ್ಕೋರ್ ಆಗಿದೆ.

ಟೆಸ್ಟ್ ಪದಾರ್ಪಣೆಯಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನೂ ಧವನ್‌ ಹೊಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಶಿಖರ್ ಧವನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆರಂಭಿಕ ಆಟಗಾರ 222 ಪಂದ್ಯಗಳಲ್ಲಿ ಆಡಿ 35.26ರ ಸರಾಸರಿಯಲ್ಲಿ 6769 ರನ್ ಗಳಿಸಿದ್ದಾರೆ. ಇದರಲ್ಲಿ 51 ಅರ್ಧಶತಕ ಮತ್ತು ಎರಡು ಶತಕಗಳನ್ನು ಗಳಿಸಿದ್ದಾರೆ.

ಸತತ ಶತಕ ಸಿಡಿಸಿದ ಮೊದಲಿಗ

ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ ಮೊದಲ ಆಟಗಾರ ಶಿಖರ್ ಧವನ್. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಆಡುತ್ತಿದ್ದ ಧವನ್, ಸಿಎಸ್‌ಕೆ ವಿರುದ್ಧ ಸೆಂಚುರಿ ಬಾರಿಸಿದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ವಿರುದ್ಧವೂ ಶತಕ ಸಿಡಿಸಿದ್ದರು.

ಅತಿ ಹೆಚ್ಚು ಬೌಂಡರಿ

ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಸಾರ್ವಕಾಲಿಕ ದಾಖಲೆ ಶಿಖರ್ ಧವನ್ ಹೆಸರಲ್ಲಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಪರ ಆಡಿರುವ ಎಡಗೈ ಆಟಗಾರ, 222 ಪಂದ್ಯಗಳಲ್ಲಿ ಒಟ್ಟು 768 ಬೌಂಡರಿ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 705 ಬೌಂಡರಿ ಬಾರಿಸಿದ್ದಾರೆ.

ಗಬ್ಬರ್‌ ಹೆಸರು ಬಂದಿದ್ದು ಹೇಗೆ?

ಶಿಖರ್ ಧವನ್ ಅವರನ್ನು 'ಗಬ್ಬರ್' ಎಂಬ ವಿಶೇಷ ಅಡ್ಡಹೆಸರಿನಿಂದ ಕರೆಯಲಾಗ ಉತ್ತದೆ. ಈ ಅಡ್ಡಹೆಸರಿನ ಹಿಂದಿನ ಕಥೆಯನ್ನು ಖುದ್ದು ಧವನ್‌ ಒಮ್ಮೆ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, "ನಾನು ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾಗ ಒಂದು ಬಾರಿ ಸಿಲ್ಲಿ ಪಾಯಿಂಟ್‌ನಲ್ಲಿ ಕುಳಿತಿದ್ದೆ. ಇತರ ತಂಡವು ದೊಡ್ಡ ಜೊತೆಯಾಟ ಆಡುತ್ತಿದ್ದಾಗ, ಅವರನ್ನು ಸುಮ್ಮನೆ ಕೆಣಕುತ್ತಿದ್ದವು. ಕುಳಿತಿರುತ್ತಿದ್ದ ನಾನು ಹಿಂದಿಯಲ್ಲಿ ‘ಬಹುತ್ ಯಾರನಾ ಹೈ s******n’ ಎಂದು ಕೂಗುತ್ತಿದ್ದೆ. ಆಗ ಎಲ್ಲರೂ ನಗುತ್ತಿದ್ದರು. ಆ ಸಮಯದಲ್ಲಿ ನಮ್ಮ ಕೋಚ್ (ವಿಜಯ್) ನನ್ನ ಹೆಸರನ್ನು ಗಬ್ಬರ್ ಎಂದು ಇಟ್ಟರು. ಆ ಬಳಿಕ ಆ ಹೆಸರು ತುಂಬಾ ಫೇಮಸ್ ಆಯಿತು. ಈಗ ಕ್ರಿಕೆಟ್ ಅಭಿಮಾನಿಗಳು ನನ್ನನ್ನು ಗಬ್ಬರ್ ಎಂದೇ ಕರೆಯುತ್ತಾರೆ ಎಂದು ಧವನ್‌ ಹೇಳಿದ್ದರು.

Whats_app_banner