ರೋಹಿತ್ ಬೆನ್ನಲ್ಲೇ ಕೊನೆಗೂ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ; 14 ವರ್ಷಗಳ ವೃತ್ತಿಜೀವನ ಅಂತ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಬೆನ್ನಲ್ಲೇ ಕೊನೆಗೂ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ; 14 ವರ್ಷಗಳ ವೃತ್ತಿಜೀವನ ಅಂತ್ಯ

ರೋಹಿತ್ ಬೆನ್ನಲ್ಲೇ ಕೊನೆಗೂ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ; 14 ವರ್ಷಗಳ ವೃತ್ತಿಜೀವನ ಅಂತ್ಯ

ರೋಹಿತ್ ಶರ್ಮಾ ಬೆನ್ನಲ್ಲೇ ಕೊನೆಗೂ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ವೃತ್ತಿಜೀವನ ಅಂತ್ಯಗೊಳಿಸಿರುವ ಕೊಹ್ಲಿ, ಇನ್​ಸ್ಟಾಗ್ರಾಂ ಪೋಸ್ಟ್​​ ಮೂಲಕ ಖಚಿತಪಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ (AFP)

ನಿವೃತ್ತಿಯ ವದಂತಿಗಳು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕೆಲವೇ ದಿನಗಳು ಬಾಕಿ ಇರುವಾಗ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕೊನೆಗೂ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಈ ಕುರಿತು ಖುದ್ದು ಅವರೇ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಹಂಚಿಕೊಂಡು ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ನಾಯಕನಾಗಿ, ಆಟಗಾರನಾಗಿ ಟೆಸ್ಟ್​ ಕ್ರಿಕೆಟ್​ಗೆ ಹೊಸ ರೂಪ ಕೊಟ್ಟಿದ್ದ ಕೊಹ್ಲಿ, ಇದೀಗ ತಮ್ಮ 14 ವರ್ಷಗಳ ವೃತ್ತಿಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.

ಮೇ 7ರಂದು ಇನ್​ಸ್ಟಾಗ್ರಾಂ ಸ್ಟೋರಿಯೊಂದಿಗೆ ಟೆಸ್ಟ್​ ಕ್ರಿಕೆಟ್​​ಗೆ ರೋಹಿತ್​ ಶರ್ಮಾ ವಿದಾಯ ಹೇಳಿದ್ದರು. ಇದಾಗಿ ಐದೇ ದಿನಗಳಲ್ಲಿ ಈಗ ವಿರಾಟ್ ಕೊಹ್ಲಿ ಕೂಡ ರೆಡ್ ಬಾಲ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ನಂತರ ಚುಟುಕು ಕ್ರಿಕೆಟ್​​ನಿಂದ ಹಿಂದೆ ಸರಿದಿದ್ದ ಕೊಹ್ಲಿ, ಈಗ ಏಕದಿನ ಕ್ರಿಕೆಟ್​​ನಲ್ಲಿ ಮಾತ್ರ ಮುಂದುವರೆಯಲಿದ್ದಾರೆ. ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ನಿವೃತ್ತಿ ಕುರಿತು ಸಣ್ಣ ಟಿಪ್ಪಣಿಯೊಂದನ್ನು ಹಾಕಿದ್ದಾರೆ.

ಇನ್​ಸ್ಟಾ ಪೋಸ್ಟ್​​​ನಲ್ಲಿ ಕೊಹ್ಲಿ ಬರೆದಿರುವುದೇನು?

ನಾನು ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್​​​ನಲ್ಲಿ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಈ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನಾನು ಜೀವಿತಾವಧಿಯಲ್ಲಿ ನನ್ನೊಂದಿಗೆ ಸಾಗಿಸುವ ಪಾಠಗಳನ್ನು ಕಲಿಸಿತು. ವೈಟ್ ಜೆರ್ಸಿಯಲ್ಲಿ ಆಡುವುದು ಬಹಳ ವೈಯಕ್ತಿಕ ಅನುಭವ. ಶಾಂತವಾದ ಶ್ರಮ, ದೀರ್ಘ ದಿನಗಳು, ಯಾರೂ ನೋಡದ ಆದರೆ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುವ ಸಣ್ಣ ಕ್ಷಣಗಳು ಎಂದು ಬರೆದಿದ್ದಾರೆ.

ನಾನು ಈ ಸ್ವರೂಪದಿಂದ ಹಿಂದೆ ಸರಿಯುತ್ತಿದ್ದೇನೆ, ಆದರೆ ಅದು ಸುಲಭವಲ್ಲ. ಆದಾಗ್ಯೂ, ಅದು ಸರಿ ಎಂದು ಅನಿಸುತ್ತದೆ. ನಾನು ನನ್ನ ಎಲ್ಲವನ್ನೂ ನೀಡಿದ್ದೇನೆ ಮತ್ತು ಅದು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ನೀಡಿದೆ. ನನ್ನ ಹೃದಯದಲ್ಲಿ ಬಹಳಷ್ಟು ಕೃತಜ್ಞತೆಯೊಂದಿಗೆ ನಾನು ಹೊರಡುತ್ತಿದ್ದೇನೆ. ಆಟಕ್ಕಾಗಿ ನನ್ನೊಂದಿಗೆ ಆಡಿದ ಪ್ರತಿಯೊಬ್ಬ ಆಟಗಾರನಿಗೂ, ಸಿಬ್ಬಂದಿಗೂ, ಎಲ್ಲರಿಗೂ ಕೃತಜ್ಞ. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ನೆನಪಿಸಿಕೊಳ್ಳುವೆ. #269, ಸೈನಿಂಗ್ ಆಫ್ ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ.

ವಿರಾಟ್ ವೃತ್ತಿಜೀವನ

ವಿರಾಟ್ ಕೊಹ್ಲಿ 2011ರ ಜೂನ್ 20 ರಂದು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. 2025ರ ಜನವರಿ 3ರಂದು ಸಿಡ್ನಿಯಲ್ಲಿ ನಡೆದ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ತಮ್ಮ ಕೊನೆಯ ಪಂದ್ಯ ಆಡಿದರು. ವಿರಾಟ್ ತನ್ನ ಟೆಸ್ಟ್ ವೃತ್ತಿಜೀವನದಲ್ಲಿ 123 ಪಂದ್ಯಗಳ 210 ಇನ್ನಿಂಗ್ಸ್‌ಗಳಲ್ಲಿ ಒಟ್ಟು 9230 ರನ್ ಗಳಿಸಿದ್ದಾರೆ. ಈ ಪೈಕಿ ಒಟ್ಟು 7 ದ್ವಿಶತಕ ಸೇರಿ 30 ಶತಕ, 31 ಅರ್ಧಶತಕ ಸೇರಿವೆ. ಅವರ ಬ್ಯಾಟಿಂಗ್ ಸರಾಸರಿ 46.85 ಆಗಿದ್ದರೆ, ಅವರ ಸ್ಟ್ರೈಕ್ ರೇಟ್ 55.58 ಆಗಿತ್ತು.

ಈ ಸ್ವರೂಪದಲ್ಲಿ ಅವರು 13 ಬಾರಿ ಅಜೇಯರಾಗಿ ಉಳಿದಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 1027 ಬೌಂಡರಿಗಳು ಮತ್ತು 30 ಸಿಕ್ಸರ್‌ ಬಾರಿಸಿದ್ದಾರೆ. ಅನೇಕ ದಾಖಲೆಗಳ ಒಡೆಯ ವಿರಾಟ್ ಕೊಹ್ಲಿ ಇದೀಗ ತನ್ನ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 100 ಶತಕ ಬಾರಿಸುತ್ತಾರೆ ಎಂದು ನಿರೀಕ್ಷೆ ಹುಟ್ಟಿಸಿದ್ದರು. ಆದರೀಗ ಅದೆಲ್ಲಾ ಹುಸಿಯಾಗಿದೆ. ಪ್ರಸ್ತುತ ಅವರ ಅಂತಾರಾಷ್ಟ್ರೀಯ ಶತಕಗಳ ಸಂಖ್ಯೆ 82.

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಕೆಲವೇ ದಿನಗಳಲ್ಲಿ 36 ವರ್ಷದ ಕೊಹ್ಲಿ ಕೂಡಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ಈ ಇಬ್ಬರು ಅನುಭವಿ ಆಟಗಾರರು ಟಿ20ಗೆ ವಿದಾಯ ಹೇಳಿದ್ದಾರೆ. ಮುಂದೆ ಕೇವಲ ಏಕದಿನ ಸ್ವರೂಪದಲ್ಲಿ ಮುಂದುವರೆಯಲಿದ್ದಾರೆ.

ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ ಎಂಬ ಸುದ್ದಿ ಶನಿವಾರ ಮುಂಜಾನೆಯೇ ಸಿಕ್ಕಿತ್ತು. ತಮ್ಮ ನಿರ್ಧಾರ ಮರುಪರಿಶೀಲಿಸುವಂತೆ ಬಿಸಿಸಿಐ ಮನವಿ ಮಾಡಿತ್ತು. ಆದರೆ, ತಮ್ಮ ದೃಢನಿರ್ಧಾರವನ್ನು ಕೊಹ್ಲಿ ಬದಲಿಸಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ 46.8ರ ಸರಾಸರಿಯಲ್ಲಿ 9230 ರನ್‌ ಗಳಿಸಿದ್ದಾರೆ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.