ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ: ಎಂಸಿಜಿಯಲ್ಲಿ ಕಪ್ಪು ಕೈಪಟ್ಟಿ ಧರಿಸಿ ಕಣಕ್ಕಿಳಿದ ಭಾರತದ ಕ್ರಿಕೆಟಿಗರು
ಕನ್ನಡ ಸುದ್ದಿ  /  ಕ್ರಿಕೆಟ್  /  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ: ಎಂಸಿಜಿಯಲ್ಲಿ ಕಪ್ಪು ಕೈಪಟ್ಟಿ ಧರಿಸಿ ಕಣಕ್ಕಿಳಿದ ಭಾರತದ ಕ್ರಿಕೆಟಿಗರು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ: ಎಂಸಿಜಿಯಲ್ಲಿ ಕಪ್ಪು ಕೈಪಟ್ಟಿ ಧರಿಸಿ ಕಣಕ್ಕಿಳಿದ ಭಾರತದ ಕ್ರಿಕೆಟಿಗರು

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ‌ ಆಟಗಾರರು ಕಪ್ಪು ಕೈಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದಾರೆ. ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಳೆದ ರಾತ್ರಿ ನಿಧನರಾಗಿದ್ದು, ಅವರಿಗೆ ಗೌರವ ಸೂಚಕವಾಗಿ ಕಪ್ಪು ಪಟ್ಟಿ ಧರಿಸಲಾಗಿದೆ.

ಎಂಸಿಜಿಯಲ್ಲಿ ಕಪ್ಪು ಕೈಪಟ್ಟಿ ಧರಿಸಿ ಕಣಕ್ಕಿಳಿದ ಭಾರತ ಕ್ರಿಕೆಟಿಗ ವಿರಾಟ್‌ ಕೊಹ್ಲಿ
ಎಂಸಿಜಿಯಲ್ಲಿ ಕಪ್ಪು ಕೈಪಟ್ಟಿ ಧರಿಸಿ ಕಣಕ್ಕಿಳಿದ ಭಾರತ ಕ್ರಿಕೆಟಿಗ ವಿರಾಟ್‌ ಕೊಹ್ಲಿ (AP)

ಡಿಸೆಂಬರ್ 26ರ ಗುರುವಾರ ರಾತ್ರಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದರು. ಅವರಿಗೆ ಗೌರವ ಸೂಚಕವಾಗಿ ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂದು ಭಾರತ ತಂಡದ ಆಟಗಾರರು ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ್ದಾರೆ. ಮನೆಯಲ್ಲಿ ಪ್ರಜ್ಞೆ ಕಳೆದುಕೊಂಡು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸಿಂಗ್ ಅವರನ್ನು ಗುರುವಾರ ರಾತ್ರಿ ನವದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

“ಅವರನ್ನು ರಾತ್ರಿ 8:06ಕ್ಕೆ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾತ್ರಿ 9:51ಕ್ಕೆ ಅವರು ನಿಧನರಾದರು” ಎಂದು ಆಸ್ಪತ್ರೆ ತಿಳಿಸಿದೆ. ವಯೋಸಹಜ ಅನಾರೋಗ್ಯ ಕಾರಣದಿಂದಾಗಿ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದರು.

ಸೌಮ್ಯ ಸ್ವಭಾವದ ಮನಮೋಹನ್‌ ಸಿಂಗ್‌ ಪ್ರಧಾನಿ ಹುದ್ದೆ ಅಲಂಕರಿಸಿದ ಭಾರತದ ಶ್ರೇಷ್ಠ ಆರ್ಥಿಕ ತಂತ್ರಜ್ಞರೂ ಹೌದು. ಆರ್‌ಬಿಐ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದ ಅವರು, ಎರಡು ಅವಧಿಗಳಲ್ಲಿ ಒಟ್ಟು 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳಲ್ಲಿ ಒಬ್ಬರು. ಆ ನಂತರ ಕಾಂಗ್ರೆಸ್‌ನಿಂದ ಸಂಸತ್ತಿನ ಮೇಲ್ಮನೆ ಸದಸ್ಯರಾಗಿ ಮುಂದುವರೆದಿದ್ದರು.

ಎಂಸಿಜಿಯಲ್ಲಿ ಭಾರತದ ಪ್ರದರ್ಶನ

ಎರಡನೇ ದಿನದಾಟದಲ್ಲಿ ಭಾರತ ನೀರಸ ಆರಂಭ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ 311 ರನ್‌ ಗಳಿಸಿ 6 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌, ಎರಡನೇ ದಿನವೂ ಅಬ್ಬರ ಮುದುವರೆಸಿತು. ಸ್ಟೀವ್‌ ಸ್ಮಿತ್‌ ಆಕರ್ಷಕ ಶತಕ ಸಿಡಿಸಿದರು. ಆಸ್ಟ್ರೇಲಿಯಾ ತಂಡದ ಮೊದಲ ಇನ್ನಿಂಗ್ಸ್ ಮುಗಿಸಲು ಭಾರತಕ್ಕೆ ನಾಲ್ಕು ವಿಕೆಟ್‌ಗಳ ಅಗತ್ಯವಿತ್ತು. ಆದರೆ, ಸ್ಟೀವ್ ಸ್ಮಿತ್ ಮತ್ತು ಪ್ಯಾಟ್ ಕಮಿನ್ಸ್‌ ಸುಲಭ ರನ್‌ ಕಲೆ ಹಾಕಿದರು. ಎರಡನೇ ದಿನದಾಟದ ಲಂಚ್‌ ಬ್ರೇಕ್‌ ಒಳಗೆ ಪ್ಯಾಟ್‌ ಕಮಿನ್ಸ್‌ 49 ರನ್‌ ಗಳಿಸಿ ಔಟಾದರು. ಆದರೆ ಅನುಭವಿ ಆಟಗಾರ ಸ್ಟೀವ್‌ ಸ್ಮಿತ್‌ ಅಜೇಯ 139 ರನ್‌ ಗಳಿಸಿ ಬ್ಯಾಟಿಂಗ್‌ ಮುಂದುವರೆಸಿದ್ದಾರೆ.

ಸದ್ಯ ಊಟದ ವಿರಾಮದ ವೇಳೆಗೆ ಆಸೀಸ್‌ 7 ವಿಕೆಟ್‌ ಕಳೆದುಕೊಂಡು 454 ರನ್‌ ಪೇರಿಸಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರ ಹಾಕಿಕೊಂಡಿದೆ.

ಮೊದಲ ದಿನದಾಟದಲ್ಲಿ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಪಂದ್ಯದ ಗಮನ ಸೆಳೆದರು. ರೋಮಾಂಚಕ ಅರ್ಧಶತಕ ಸಿಡಿಸಿ ಮಿಂಚಿದರು. ಮೊದಲ ದಿನವೇ ಪಂದ್ಯ ವೀಕ್ಷಿಸಲು ಬರೋಬ್ಬರಿ 87,242 ಪ್ರೇಕ್ಷಕರು ಹಾಜರಿದ್ದರು. ಈ ನಡುವೆ 19 ವರ್ಷದ ಕಾನ್ಸ್ಟಾಸ್‌ ಹಾಗೂ ವಿರಾಟ್ ಕೊಹ್ಲಿ ನಡುವೆ ಸ್ಲೆಡ್ಜಿಂಗ್ ಮೈಂಡ್‌ಗೇಮ್‌ ಕೂಡಾ ನಡೆಯಿತು. ಕಾನ್ಸ್ಟಾಸ್​ ಅವರನ್ನು ಕೆಣಕುವ ಮೂಲಕ ಕೊಹ್ಲಿ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದರು. ಹೀಗಾಗಿ ಭಾರತದ ಆಟಗಾರನಿಗೆ ತಮ್ಮ ಪಂದ್ಯದ ಶುಲ್ಕದ ಶೇ 20 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಡಿಮೆರಿಟ್ ಅಂಕ ಸಹ ನೀಡಿದೆ.

Whats_app_banner