ಭಾರತೀಯ ಕ್ರಿಕೆಟನ್ನು ಉತ್ತುಂಗಕ್ಕೇರಿಸಿದ ಮಹೇಂದ್ರನಿಗೆ 43ನೇ ಹುಟ್ಟುಹಬ್ಬ; ಎಂಎಸ್ ಧೋನಿಯ 10 ವಿಶ್ವದಾಖಲೆಗಳು
MS Dhoni Birthday: ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ ಅವರಿಗೆ 42ನೇ ಹುಟ್ಟುಹಬ್ಬ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಧೋನಿ ಪ್ರಸ್ತುತ ಐಪಿಎಲ್ನಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ಅನ್ನು ಪ್ರಖ್ಯಾತಿಗೊಳಿಸಿದ ವಿಶ್ವ ಮಟ್ಟದಲ್ಲಿ ಕ್ರಿಕೆಟ್‌ಗೆ ಹೊಸ ಟ್ರೆಂಡ್ ಸೃಷ್ಟಿಸಿದ ಹಾಗೂ ಸಾರ್ವಕಾಲಿಕ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇಂದು (ಜುಲೈ 24, 1981) 43ನೇ ಹುಟ್ಟುಹಬ್ಬವನ್ನು (MS Dhoni 42nd Birthday) ಆಚರಿಸಿಕೊಳ್ಳುತ್ತಿದ್ದಾರೆ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಮಾಹಿಗೆ, ಹಾಲಿ-ಮಾಜಿ ಕ್ರಿಕೆಟರ್ಗಳು, ಅಭಿಮಾನಿಗಳು ಸೇರಿದಂತೆ ಜಗತ್ತಿನಾದ್ಯಂತ ಶುಭಾಶಯ ಕೋರುತ್ತಿದ್ದಾರೆ.
15 ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಸೇವೆ ಸಲ್ಲಿಸಿದ ಕೂಲ್ ಕ್ಯಾಪ್ಟನ್ 2020ರ ಆಗಸ್ಟ್ 15ರಂದು ರಾತ್ರಿ 7.29ರ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ಬೈ ಹೇಳಿದ್ದರು. ವಯಸ್ಸು 43 ಆದರೂ ಅವರಿಗೆ ಅಭಿಮಾನಿಗಳ ಸಂಖ್ಯೆ ದಿನೆದಿನೇ ಹೆಚ್ಚುತ್ತಿರುವುದು ವಿಶೇಷ. ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಕ್ರಿಕೆಟಿಗರಲ್ಲಿ ಧೋನಿ ಕೂಡ ಒಬ್ಬರು. ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 2019ರ ಜೂನ್ 9ರಂದು ಆಡಿದ್ದಾರೆ. ಅದು ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವಾಗಿತ್ತು.
ಧೋನಿ ಯಶಸ್ಸಿಗೆ ಆಟದ ಶೈಲಿ, ಶಾಂತ ರೀತಿಯ ವರ್ತನೆ ಮತ್ತು ಚಾಣಾಕ್ಷ ನಿರ್ಧಾರಗಳೇ ಕಾರಣ. ಐಪಿಎಲ್ನಲ್ಲಿ ಸಕ್ರಿಯರಾಗಿರುವ ಮಾಹಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮುಂದಿನ ವರ್ಷ ಕೊನೆಯ ಸೀಸನ್ ಆಡುವ ನಿರೀಕ್ಷೆ ಇದೆ. ಈಗಾಗಲೇ ನಾಯಕತ್ವ ಕೂಡ ತ್ಯಜಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ 2023ರಲ್ಲಿ ಐತಿಹಾಸಿಕ ಐದನೇ ಟ್ರೋಫಿ ಗೆದ್ದುಕೊಟ್ಟಿದ್ದ ಧೋನಿ, 2024ರಲ್ಲಿ ಋತುರಾಜ್ಗೆ ಜವಾಬ್ದಾರಿಯನ್ನು ಬಿಟ್ಟುಕೊಟ್ಟರು. ರಾಂಚಿಯಲ್ಲಿ ಜನಿಸಿದ ಧೋನಿ, ಸಿಎಸ್ಕೆಗೆ 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಮಹೇಂದ್ರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಅತ್ಯಂತ ಯಶಸ್ಸು ಕಂಡಿದ್ದು, ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ.
ತಂದೆ ಪಾನ್ ಸಿಂಗ್ ಧೋನಿ, ತಾಯಿ ದೇವಿಕಾ ದೇವಿ, ಪತ್ನಿ ಸಾಕ್ಷಿ ಸಿಂಗ್, ಮಗಳು ಝೀವಾ. ಮಾಹಿ ಅವರ ಒಟ್ಟು ಆಸ್ತಿ ಮೌಲ್ಯ 1040 ಕೋಟಿ. ಅತ್ಯಂತ ಚಾಣಾಕ್ಷ ನಾಯಕ ಧೋನಿ ತಮ್ಮ 15 ವರ್ಷಗಳ ಕ್ರಿಕೆಟ್ ಕರಿಯರ್ನಲ್ಲಿ ಧೋನಿ ಹತ್ತು ಹಲವು ವಿಶ್ವ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 43ನೇ ಜನ್ಮದಿನದ ಪ್ರಯುಕ್ತ ನಾಯಕನಾಗಿ ಮತ್ತು ಆಟಗಾರನಾಗಿ ಮಾಡಿರುವ ಸಾಧನೆಗಳ ಇಲ್ಲಿದೆ.
ದಾಖಲೆಗಳ ಪಟ್ಟಿ ಇಲ್ಲಿದೆ
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ವಿಶ್ವದ ಏಕೈಕ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಮಾಹಿ ನಾಯಕತ್ವದಲ್ಲಿ ಭಾರತ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.
- 200 ಏಕದಿನಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಧೋನಿ, ಈ ಪೈಕಿ 110 ಪಂದ್ಯಗಳಲ್ಲಿ ಗೆದ್ದಿದ್ದಾರೆ. ಆ ಮೂಲಕ ನಾಯಕನಾಗಿ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ಭಾರತದ ಮೊದಲ ಹಾಗೂ ವಿಶ್ವದ 3ನೇ ನಾಯಕ ಎಂಬ ದಾಖಲೆ ಬರೆದಿದ್ದಾರೆ.
- 3 ಸ್ವರೂಪಗಳು (ಟೆಸ್ಟ್, ಏಕದಿನ, ಟಿ20) ಸೇರಿ ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿರುವ ವಿಶ್ವದ ಏಕೈಕ ಆಟಗಾರ. ಧೋನಿ 332 (200 ಏಕದಿನ, 60 ಟೆಸ್ಟ್ ಮತ್ತು 72 ಟಿ20) ಪಂದ್ಯಗಳಿಗೆ ನಾಯಕನಾಗಿದ್ದರು. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 324 ಪಂದ್ಯಗಳಿಗೆ ನಾಯಕತ್ವದ ಜವಾಬ್ದಾರಿ ವಹಿಸಿದ್ದರು.
- ಮಾಹಿ ಅತ್ಯುತ್ತಮ ಕ್ಯಾಪ್ಟನ್ ಮಾತ್ರವಲ್ಲ, ಅತ್ಯುತ್ತಮ ವಿಕೆಟ್ ಕೀಪರ್ ಕೂಡ ಹೌದು ಎಂಬುದಕ್ಕೆ ಅತಿ ಹೆಚ್ಚು ಸ್ಟಂಪೌಟ್ ಮಾಡಿರುವುದೇ ಸಾಕ್ಷಿ. ವಿಶ್ವ ಕ್ರಿಕೆಟ್ನಲ್ಲಿ ಅಧಿಕ ಸ್ಟಂಪ್ಸ್ ಮಾಡಿರುವ ವರ್ಲ್ಡ್ ರೆಕಾರ್ಡ್ ಮಾಹಿ ಹೆಸರಿನಲ್ಲಿದೆ. 3 ಫಾರ್ಮೆಟ್ ಸೇರಿ 195 ಆಟಗಾರರನನ್ನು ಸ್ಟಂಪ್ಸ್ ಮಾಡಿದ್ದಾರೆ. ಶ್ರೀಲಂಕಾದ ಕುಮಾರ್ ಸಂಗಕ್ಕಾರ 139 ಮಂದಿಯನ್ನು ಸ್ಟಂಪ್ಸ್ ಮಾಡಿ 2ನೇ ಸ್ಥಾನದಲ್ಲಿದ್ದಾರೆ.
- ಎಂಎಸ್ ಧೋನಿ ಕೇವಲ 0.08 ಸೆಕೆಂಡುಗಳಲ್ಲಿ ಸ್ಟಂಪ್ ಮಾಡುವ ಮೂಲಕ ಅತಿ ವೇಗದ ಸ್ಟಂಪ್ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಅಲ್ಲದೆ, 2018ರಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಕೀಮೋ ಪೌಲ್ ಅವರನ್ನು 0.09 ಸೆಕೆಂಡ್ಗಳಲ್ಲಿ ಸ್ಟಂಪ್ ಮಾಡಿದ್ದರು. ಎರಡು ದಾಖಲೆಗಳು ಅವರ ಹೆಸರಲ್ಲೇ ಇವೆ.
- ಏಕದಿನ ಕ್ರಿಕೆಟ್ನಲ್ಲಿ ಕಡಿಮೆ ಪಂದ್ಯಗಳಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಕೇವಲ 42 ಪಂದ್ಯಗಳಲ್ಲಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದರು. ಹಾಗೆಯೇ ಏಕದಿನ ಇತಿಹಾಸದಲ್ಲಿ ಹೆಚ್ಚು ನಾಟೌಟ್ ಆಗಿ ಉಳಿದಿರುವ ಆಟಗಾರ (84). ಆದರೆ 2 ಬಾರಿಯಷ್ಟೇ ಭಾರತ ಸೋತಿದೆ.
- ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 6ನೇ ಕ್ರಮಾಂಕದಲ್ಲಿ ಹೆಚ್ಚು ರನ್ (4031) ಗಳಿಸಿದ್ದಾರೆ. ಏಕದಿನದಲ್ಲಿ 200 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಮತ್ತು ವಿಶ್ವದ 5ನೇ ಆಟಗಾರ. 2005ರಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಗಳಿಸಿದ ಅಜೇಯ 183* ವಿಕೆಟ್ ಕೀಪರ್‌ನ ಗರಿಷ್ಠ ಸ್ಕೋರ್ ಆಗಿದೆ.
- ಏಕದಿನದಲ್ಲಿ 300 ಕ್ಯಾಚ್ ಪಡೆದ ಮೊದಲ ಭಾರತೀಯ ವಿಕೆಟ್-ಕೀಪರ್ ಮತ್ತು ವಿಶ್ವದ 4ನೇ ವಿಕೆಟ್-ಕೀಪರ್. ಏಕದಿನದಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 10,000 ರನ್ ಪೂರೈಸಿದ ಆಟಗಾರ. ಒಡಿಐನಲ್ಲಿ 7ನೇ ಸ್ಥಾನ ಅಥವಾ ಅದಕ್ಕಿಂತ ಕೆಳಮಟ್ಟದಲ್ಲಿ ಬ್ಯಾಟಿಂಗ್ ಮಾಡುವಾಗ ಹೆಚ್ಚು ಸ್ಕೋರ್ ಮಾಡಿದ ಏಕೈಕ ಆಟಗಾರ. (ಧೋನಿ 7ನೇ ಸ್ಥಾನದಲ್ಲಿ 2 ಶತಕ ಸಿಡಿಸಿದ್ದಾರೆ).
- ಧೋನಿ ನಾಯಕತ್ವದಲ್ಲಿ ಭಾರತ ತಂಡವು, 2009ರಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತು. ಧೋನಿ 4,000 ಟೆಸ್ಟ್ ರನ್ ಪೂರೈಸಿದ ಮೊದಲ ಭಾರತೀಯ ವಿಕೆಟ್ ಕೀಪರ್. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಧೋನಿ ಗಳಿಸಿದ 224 ರನ್, ಭಾರತದ ನಾಯಕರಲ್ಲಿ 3ನೇ ಗರಿಷ್ಠ ಸ್ಕೋರ್ ಆಗಿದೆ.
- ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಹಿಂದೆ 294 ಮಂದಿಯನ್ನು ಬಲಿ ಪಡೆದಿದ್ದಾರೆ. ಇದು ಭಾರತದ ಯಾವೊಬ್ಬ ವಿಕೆಟ್ ವಿಕೆಟ್ ಕೀಪರ್ ಮಾಡದ ದಾಖಲೆ ಇದು. 2009ರಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ನಂಬರ್ವನ್ ಸ್ಥಾನಕ್ಕೇರಿಸಿದ ಹೆಗ್ಗಳಿಕೆ ಅವರದ್ದು.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ವಿಶ್ವದ 8ನೇ ಅದ್ಭುತ ಮತ್ತು ರಾಷ್ಟ್ರೀಯ ಸಂಪತ್ತು; ವೇಗಿಯನ್ನು ಕೊಂಡಾಡಿದ ವಿರಾಟ್ ಕೊಹ್ಲಿ
ಧೋನಿ ಕ್ರಿಕೆಟ್ ವೃತ್ತಿಜೀವನ
- ಏಕದಿನ: ಡಿಸೆಂಬರ್ 23, 2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಧೋನಿ, 350 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 10773 ರನ್ ಗಳಿಸಿದ್ದಾರೆ. 73 ಅರ್ಧಶತಕ, 10 ಶತಕ ಅವರ ಖಾತೆಯಲ್ಲಿವೆ. ಏಕದಿನ ಕೊನೆಯ ಪಂದ್ಯ ಆಡಿದ್ದು 2019ರ ಜೂನ್ 9ರಂದು ನ್ಯೂಜಿಲೆಂಡ್ ವಿರುದ್ಧ.
- ಟೆಸ್ಟ್: ಡಿಸೆಂಬರ್ 2, 2005ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಾಹಿ, 90 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 4876 ರನ್ ಗಳಿಸಿರುವ ಧೋನಿ 6 ಶತಕ, 33 ಅರ್ಧಶತಕ ಸಿಡಿಸಿದ್ದಾರೆ. ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2014ರ ಡಿಸೆಂಬರ್ 26ರಂದು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.
- ಟಿ20: ಡಿಸೆಂಬರ್ 1, 2006ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೂಲ್ ಕ್ಯಾಪ್ಟನ್, 98 ಪಂದ್ಯಗಳಲ್ಲಿ ಮೈದಾನಕ್ಕಿಳಿದಿದ್ದಾರೆ. 1617 ರನ್, ಗಳಿಸಿದ್ದಾರೆ. ಅವರ ಕೊನೆಯ ಟಿ20 ಪಂದ್ಯವನ್ನು 2019ರ ಫೆಬ್ರವರಿ 27ರಂದು ಆಸ್ಟ್ರೇಲಿಯಾ ಎದುರು ಆಡಿದ್ದರು.
- ಐಪಿಎಲ್: 2008ರಿಂದ ಐಪಿಎಲ್ ಆಡುತ್ತಿರುವ ಧೋನಿ, 264 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 39.13ರ ಬ್ಯಾಟಿಂಗ್ ಸರಾಸರಿಯಲ್ಲಿ 5243 ರನ್ ಗಳಿಸಿದ್ದಾರೆ. 137.54ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿದ್ದಾರೆ. 363 ಬೌಂಡರಿ, 252 ಸಿಕ್ಸರ್ಗಳನ್ನು ಚಚ್ಚಿದ್ದಾರೆ.
ಇದನ್ನೂ ಓದಿ: ವಾಂಖೆಡೆಯಲ್ಲಿ ಬಾಹುಬಲಿ-2 ಇಂಟರ್ವಲ್ ದೃಶ್ಯ ಮರುಸೃಷ್ಟಿಸಿದ ವಿರಾಟ್ ಕೊಹ್ಲಿ, ಆ ಸೀನ್ ನೋಡಿದವರೇ ಭಾಗ್ಯವಂತರು!