ಎಂಎಸ್ ಧೋನಿ ಐಕಾನಿಕ್ ನಂಬರ್ 7 ಜೆರ್ಸಿಗೆ ನಿವೃತ್ತಿ; ಭವಿಷ್ಯದಲ್ಲಿ ಯಾವ ಆಟಗಾರರಿಗೆ ಸಿಗಲಿದೆ ಈ ಗೌರವ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಂಎಸ್ ಧೋನಿ ಐಕಾನಿಕ್ ನಂಬರ್ 7 ಜೆರ್ಸಿಗೆ ನಿವೃತ್ತಿ; ಭವಿಷ್ಯದಲ್ಲಿ ಯಾವ ಆಟಗಾರರಿಗೆ ಸಿಗಲಿದೆ ಈ ಗೌರವ

ಎಂಎಸ್ ಧೋನಿ ಐಕಾನಿಕ್ ನಂಬರ್ 7 ಜೆರ್ಸಿಗೆ ನಿವೃತ್ತಿ; ಭವಿಷ್ಯದಲ್ಲಿ ಯಾವ ಆಟಗಾರರಿಗೆ ಸಿಗಲಿದೆ ಈ ಗೌರವ

MS Dhoni No 7 jersey: ಭಾರತ ತಂಡದ ಮಾಜಿ ನಾಯಕ​ ಧೋನಿ ಅವರ 7ನೇ ಸಂಖ್ಯೆ ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಈ ಹಿಂದೆ 2017ರಲ್ಲಿ ಸಚಿನ್​ ಅವರ 10ನೇ ಸಂಖ್ಯೆಯ ಜೆರ್ಸಿಯನ್ನು ನಿವೃತ್ತಗೊಳಿಸಲಾಗಿತ್ತು.

ಮಹೇಂದ್ರ ಸಿಂಗ್ ಧೋನಿ.
ಮಹೇಂದ್ರ ಸಿಂಗ್ ಧೋನಿ.

ಮೂರು ಐಸಿಸಿ ಟ್ರೋಫಿಗಳ ವಿಜೇತ, ಭಾರತ ಕಂಡಂತಹ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರಿಗೆ (Mahendra Singh Dhoni) ವಿಶೇಷ ಗೌರವ ಸಲ್ಲಿಸಲು ಬಿಸಿಸಿಐ (BCCI) ಮುಂದಾಗಿದೆ. ಮಾಹಿ ಅವರ ಜೆರ್ಸಿ ನಂಬರ್ 7ಕ್ಕೆ ಶಾಶ್ವತ ವಿದಾಯ ನೀಡಲು ಬಿಸಿಸಿಐ ನಿರ್ಧರಿಸಿದೆ. ಇನ್ಮುಂದೆ ಈ ಸಂಖ್ಯೆಯ ಜೆರ್ಸಿಯನ್ನು ಯಾರೂ ತೊಡುವಂತಿಲ್ಲ ಎಂದು ಸೂಚಿಸಿದೆ ಎಂದು ವರದಿಯಾಗಿದೆ.

ಭಾರತ ತಂಡಕ್ಕಾಗಿ 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ವೃತ್ತಿಜೀವನ ಸೇವೆ ಸಲ್ಲಿಸಿದ ಧೋನಿ, ನಂಬರ್ 7 ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರು. ಧೋನಿ ಅವರಂತೆ ಜೆರ್ಸಿಯೂ ಕೂಡ ಅಷ್ಟೇ ಪ್ರಸಿದ್ಧಿ ಎಂಬುದು ವಿಶೇಷ. ಲೆಜೆಂಡರಿ ಆಟಗಾರನ ನಾಯಕತ್ವದಲ್ಲಿ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.

ಇಂಡಿಯನ್ ಎಕ್ಸ್​ಪ್ರೆಸ್ ವರದಿ ಪ್ರಕಾರ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ನಂತರ, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಿಸಿಸಿಐ ಜೆರ್ಸಿ ನಂಬರ್​ 7ಕ್ಕೆ ನಿವೃತ್ತಿ ಹೇಳಲು ಬಿಸಿಸಿಐ ನಿರ್ಧರಿಸಿದೆ. 42 ವರ್ಷದ ಧೋನಿಗೆ ಸಂಬಂಧಿಸಿದ ಈ ಜೆರ್ಸಿಯನ್ನು ಯಾರೂ ಕೂಡ ಆಯ್ಕೆ ಮಾಡುವಂತಿಲ್ಲ. ಧೋನಿಗೂ ಮೊದಲು 2017ರಲ್ಲಿ ಸಚಿನ್ ತೆಂಡೂಲ್ಕರ್​ ಅವರ (Sachin Tendulkar) ಐಕಾನಿಕ್ ಜೆರ್ಸಿ 10 ಅನ್ನು ಬಿಸಿಸಿಐ ನಿವೃತ್ತಿಗೊಳಿಸಿ ಗೌರವ ಸೂಚಿಸಿತ್ತು.

ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಯುವ ಆಟಗಾರರು ಮತ್ತು ಪ್ರಸ್ತುತ ಭಾರತೀಯ ತಂಡದ ಆಟಗಾರರಿಗೆ ಧೋನಿ ಅವರ ನಂಬರ್ 7 ಆಯ್ಕೆ ಮಾಡದಂತೆ ತಿಳಿಸಲಾಗಿದೆ. ಧೋನಿ ಕ್ರಿಕೆಟ್​ಗೆ ನೀಡಿದ ಕೊಡುಗಾಗಿ ಅವರ ಜೆರ್ಸಿಗೆ ನಿವೃತ್ತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಈಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬರುವ ಆಟಗಾರರು ಈ ಜೆರ್ಸಿಯನ್ನು ಪಡೆಯಲು ಸಾಧ್ಯವಿಲ್ಲ. ಅದೇ ರೀತಿ ಸಚಿನ್​​ರ ಜೆರ್ಸಿಯನ್ನೂ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ 60 ಬೆಸ ಸಂಖ್ಯೆಗಳನ್ನು ಭಾರತೀಯ ತಂಡದಲ್ಲಿ ನಿಯಮಿತರು ಮತ್ತು ಸ್ಫರ್ಧೆಯಲ್ಲಿ ಇರುವವರಿಗೆ ಗೊತ್ತುಪಡಿಸಲಾಗಿದೆ. ಆದ್ದರಿಂದ ಆಟಗಾರನು ಸುಮಾರು 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತಂಡದಿಂದ ಹೊರಗಿದ್ದರೂ ನಾವು ಹೊಸ ಆಟಗಾರನಿಗೆ ಅವರ ಸಂಖ್ಯೆ ನೀಡುವುದಿಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದರು. ಇದೀಗ ಭಾರತೀಯ ಕ್ರಿಕೆಟ್​ಗೆ ಸಲ್ಲಿಸಿದ ಅಪಾರ ಕೊಡುಗೆಗಾಗಿ ಧೋನಿ ಅವರ 7ನೇ ಜೆರ್ಸಿಗೆ ನಿವೃತ್ತಿ ನೀಡಲು ಬಿಸಿಸಿಐ ನಿರ್ಧರಿಸಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಶಾರ್ದೂಲ್ ವಿರುದ್ಧ ಆಕ್ರೋಶ

2017ರಲ್ಲಿ ಶಾರ್ದೂಲ್ ಠಾಕೂರ್ ಅವರು ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಸಚಿನ್​ ಅವರ ಐಕಾನಿಕ್ ಜೆರ್ಸಿ 10 ಅನ್ನು ಧರಿಸಿ ಕಣಕ್ಕಿಳಿದಿದ್ದರು. ಇದಾದ ನಂತರ ಈ ಜೆರ್ಸಿಯನ್ನು ನಿವೃತ್ತಗೊಳಿಸಲಾಯಿತು. ಶಾರ್ದೂಲ್​ ಠಾಕೂರ್ ಮಾತ್ರ ಹೆಚ್ಚು ಟ್ರೋಲ್​ಗೆ ಒಳಗಾಗಿದ್ದರು. ಅಲ್ಲದೆ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬಿಸಿಸಿಐ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಸಿಸಿಐ ಮಧ್ಯ ಪ್ರವೇಶಿಸಿ ಠಾಕೂರ್​ಗೆ ಜರ್ಸಿ ನಂಬರ್ 54ಕ್ಕೆ ಬದಲಿಸಿತು.

ಮುಂದಿನ ದಿನಗಳಲ್ಲಿ ಕೊಹ್ಲಿ-ರೋಹಿತ್​

ಸಚಿನ್ ಮತ್ತು ಧೋನಿ ನಂತರ ವಿರಾಟ್ ಕೊಹ್ಲಿ ಜೆರ್ಸಿ ನಂಬರ್ 18 ಮತ್ತು ರೋಹಿತ್​ ಶರ್ಮಾ ಅವರ ಜೆರ್ಸಿ ನಂಬರ್ 45 ಅನ್ನು ಭವಿಷ್ಯದಲ್ಲಿ ನಿವೃತ್ತಿಗೊಳಿಸಿದರೂ ಅಚ್ಚರಿ ಇಲ್ಲ. ಇವರಿಬ್ಬರು ಭಾರತ ತಂಡದ ಪರ ಬ್ಯಾಟಿಂಗ್ ಲೆಜೆಂಡ್​ಗಳಾಗಿ ಮಾರ್ಪಟ್ಟಿದ್ದು, ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರ ಕೊಡುಗೆಗೆ ಗೌರವ ಸಲ್ಲಿಸುವ ಸಲುವಾಗಿ 18 ಮತ್ತು 45 ಜೆರ್ಸಿಗಳಿಗೆ ವಿದಾಯ ಹೇಳಿದರೂ ಅಚ್ಚರಿ ಇಲ್ಲ.

Whats_app_banner