ಸುಂದರ್‌ಗೆ ಅವಕಾಶಕ್ಕೆ ಚಿಂತನೆ; ಇಂಡೋ-ಆಸೀಸ್ 3ನೇ ಟಿ20ಗೆ ಭಾರತ ಸಂಭಾವ್ಯ ತಂಡ ಹೀಗಿದೆ
ಆಸೀಸ್ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸರಣಿ ಜಯ ಸಾಧಿಸುವ ಗುರಿ ಹೊಂದಿದೆ. ಈ ನಡುವೆ ತಂಡದ ಆಡುವ ಬಳಗದಲ್ಲಿ ಬದಲಾವಣೆಯಾಗುತ್ತಾ ಎಂಬ ಪ್ರಶ್ನೆಯಿದೆ.
ವಿಶ್ವಕಪ್‌ನಲ್ಲಿ ಆಘಾತಕಾರಿ ಸೋಲಿನ ಬೆನ್ನಲ್ಲೇ, ಭಾರತ ತಂಡವು ಅದೇ ಆಸ್ಟ್ರೇಲಿಯಾ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡುತ್ತಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿಯೂ ಗೆದ್ದ ಟೀಮ್ ಇಂಡಿಯಾ, 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಗುವಾಹಟಿಯಲ್ಲಿ ನವೆಂಬರ್ 28ರ ಮಂಗಳವಾರ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಇಂಡೋ-ಆಸೀಸ್ (India vs Australia 3rd T20I) ತಂಡಗಳು ಮುಖಾಮುಖಿಯಾಗುತ್ತಿದ್ದು, ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಸೂರ್ಯಕುಮಾರ್ ಬಳಗವಿದೆ.
ಮೊದಲೆರಡು ಪಂದ್ಯಗಳಲ್ಲಿ ಭಾರತದ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಮೂರನೇ ಟಿ20 ಪಂದ್ಯಕ್ಕೂ ಭಾರತ ತಂಡವು ಅದೇ ಪ್ಲೇಯಿಂಗ್ ಇಲೆವೆನ್‌ನೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ. ಸದ್ಯದ ಆಡುವ ಬಳಗವು ಉತ್ತಮವಾಗಿದ್ದು, ಎರಡೂ ಪಂದ್ಯಗಳಲ್ಲಿ ಅರ್ಹ ಜಯ ಸಾಧಿಸಿದೆ. ಹೀಗಾಗಿ ಮತ್ತೆ ಬದಲಾವಣೆಗೆ ಕೈ ಹಾಕುವ ಸಾಧ್ಯತೆ ಕಡಿಮೆ.
ಉತ್ತಮ ಆರಂಭಿಕರು
ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಆತಿಥೇಯರ ಪರ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ಈ ಇಬ್ಬರೂ ತಲಾ ಅರ್ಧಶತಕ ಗಳಿಸಿದ್ದರು. ಅದರಲ್ಲೂ ಜೈಸ್ವಾಲ್ ಅಬ್ಬರ ಜೋರಾಗಿತ್ತು. ಇದೀಗ ಗುವಾಹಟಿಯಲ್ಲಿ ಭಾರತವು ಮತ್ತೊಂದು ಹೈಸ್ಕೋರಿಂಗ್ ಪಂದ್ಯವನ್ನು ಎದುರು ನೋಡುತ್ತಿದೆ.
ಬಲಿಷ್ಠ ಮಧ್ಯಮ ಕ್ರಮಾಂಕ
ವಿಕೆಟ್ ಕೀಪರ್ ಆಗಿ ಆರಂಭಿಕ ಸ್ಥಾನದಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಇಶಾನ್ ಕಿಶನ್, ಸದ್ಯ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಆರಂಭ ನಿಧಾನವಾದರೂ ಆ ಬಳಿಕ ಅಬ್ಬರಿಸಿ ಸ್ಟ್ರೈಕ್ ರೇಟ್ ಹೆಚ್ಚಿಸುತ್ತಿದ್ದಾರೆ. ಈ ನಡುವೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಅಬ್ಬರ ಮುಂದುವರೆಸಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಶತಕವಂಚಿತರಾದ ಅವರು, ಎರಡನೇ ಪಂದ್ಯದಲ್ಲಿ 19 ರನ್ ಗಳಿಸಿ ಔಟಾದರು.
ಉತ್ತಮ ಫಿನಿಶರ್‌ಗಳು
5ನೇ ಕ್ರಮಾಂಕದಲ್ಲಿ ತಿಲಕ್ ವರ್ಮ ಹಾಗೂ 6ನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಫಿನಿಶರ್ ಪಾತ್ರ ನಿಭಾಯಿಸುತ್ತಿದ್ದಾರೆ. ಅಕ್ಷರ್ ಪಟೇಲ್ 7ನೇ ಕ್ರಮಂಕದಲ್ಲಿ ಆಲ್‌ರೌಂಡರ್ ಆಗಿ ಮಿಂಚುತ್ತಿದ್ದಾರೆ. ಈ ನಡುವೆ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಪ್ರಮುಖ ಸ್ಪಿನ್ನರ್ ಆಗಿ ಮುಂದುವರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | ಟೀಮ್ ಇಂಡಿಯಾ ಆಲ್‌ರೌಂಡ್ ಆಟಕ್ಕೆ ತಲೆಬಾಗಿದ ಆಸೀಸ್; ಎರಡನೇ ಟಿ20ಯಲ್ಲಿ ಭಾರತಕ್ಕೆ 44 ರನ್ ಜಯ
ವೇಗಿಗಳಾಗಿ ಅವೇಶ್ ಖಾನ್ ಆಯ್ಕೆಗೆ ಲಭ್ಯವಿದ್ದಾರೆ. ಆದರೆ ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್ ಮತ್ತು ಪ್ರಸಿದ್ಧ್ ಕೃಷ್ಣ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ.
ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20ಗೆ ಭಾರತದ ಸಂಭಾವ್ಯ ಆಡುವ ಬಳಗ
- ಆರಂಭಿಕರು: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್
- ಮಧ್ಯಮ ಕ್ರಮಾಂಕ: ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್
- ಆಲ್ ರೌಂಡರ್: ಅಕ್ಷರ್ ಪಟೇಲ್
- ಸ್ಪಿನ್ನರ್: ರವಿ ಬಿಷ್ಣೋಯ್
- ವೇಗಿಗಳು: ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್
ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ
ಮ್ಯಾಥ್ಯೂ ವೇಡ್ (ನಾಯಕ, ವಾರ), ಸ್ಟೀವನ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಆಡಮ್ ಜಂಪಾ, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್ / ಸೀನ್ ಅಬಾಟ್, ತನ್ವೀರ್ ಸಂಘ.