ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತ ಭಾರತ; ಕನಿಷ್ಠ ಡ್ರಾ ಸಾಧಿಸುವಲ್ಲೂ ವಿಫಲ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಹೀನಾಯ ಸೋಲು
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 184 ರನ್‌ಗಳಿಂದ ಸೋತಿದೆ. ಇದರೊಂದಿಗೆ ಸರಣಿಯಲ್ಲಿ ಆಸೀಸ್ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ನಾಲ್ಕನೇ ದಿನದಾಟದ ವೇಳೆಗೆ ಗೆಲುವಿನ ಸುಳಿವು ನೀಡಿದ್ದ ಟೀಮ್ ಇಂಡಿಯಾ, ಐದನೇ ದಿನದಾಟದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಗೆಲುವು ಬದಿಗೊತ್ತಿ, ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸುತ್ತೆ ಎಂಬ ನಿರೀಕ್ಷೆ ಕೂಡಾ ವಿಫಲವಾಗಿದೆ. ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಹೊರಬಂದಿಲ್ಲ. ಪರಿಣಾಮ, ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 184 ರನ್‌ಗಳಿಂದ ಸೋಲೊಪ್ಪಿಕೊಂಡಿದೆ. ಇದರೊಂದಿಗೆ ಆತಿಥೇಯ ಆಸೀಸ್ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ತಂಡ 234 ರನ್ ಗಳಿಸಿ ಆಲೌಟ್ ಆಯ್ತು. ಐದನೇ ದಿನದಾಟದ ಆರಂಭದಲ್ಲೇ ಲಿಯಾನ್ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ, ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರು. ಅಂತಿಮ ಇನ್ನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ಆಸೀಸ್ 340 ರನ್‌ಗಳ ಬೃಹತ್ ಗುರಿ ನೀಡಿತು. ದೊಡ್ಡ ಗುರಿ ತಲುಪುವುದು ಕಷ್ಟವಾದರೂ, ಭಾರತ ತಂಡ ಡ್ರಾ ಸಾಧಿಸಬಹುದು ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಯಾವ ಲೆಕ್ಕಾಚಾರವೂ ವರ್ಕೌಟ್ ಆಗಲಿಲ್ಲ.
ಭಾರತವು ಡ್ರಾ ಮಾಡುವ ಉದ್ದೇಶದೊಂದಿಗಗೆ ನಿಧಾನಗತಿಯ ಆಟಕ್ಕೆ ಮಣೆ ಹಾಕಿತು. ಆದರೂ, ಊಟದ ವಿರಾಮದ ವೇಳೆಗೆ ತಂಡ 33 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಆದರೆ, ಆ ಬಳಿಕ ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ಆಕರ್ಷಕ ಜೊತೆಯಾಟವಾಡಿ ತಂಡದ ರಕ್ಷಣೆಗೆ ನಿಂತರು. ಟೀ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದ್ದ ಭಾರತ, ಪಂದ್ಯದಲ್ಲಿ ದಿಟ್ಟ ಹೋರಾಟ ನಡೆಸುವ ಸೂಚನೆ ಕೊಟ್ಟಿತು. ಆದರೆ, ಆ ನಂತರ ನಡೆದಿದ್ದೇ ಆಸೀಸ್ ಆಟ. ಭಾರತ ತಂಡವು ತನ್ನ ಕೊನೆಯ 7 ವಿಕೆಟ್‌ಗಳನ್ನು ಕೇವಲ 34 ರನ್‌ಗಳ ಅಂತರಕ್ಕೆ ಕಳೆದುಕೊಂಡು ಪಂದ್ಯವನ್ನೇ ಸೋತಿತು.
ಇಬ್ಬರಷ್ಟೇ ಎರಡಂಕಿ ಮೊತ್ತ
ಭಾರತದ ಇನ್ನಿಂಗ್ಸ್ ಎಷ್ಟು ಕಳಪೆ ಎಂದರೆ, ಇಬ್ಬರು ಮಾತ್ರ ಎರಡಂಕಿ ಮೊತ್ತ ಗಳಿಸಲು ಸಧ್ಯವಾಯ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕ್ರೀಸ್‌ಕಚ್ಚಿ ಆಡಿ 84 ರನ್ ಗಳಿಸಿದರೆ, ಪಂತ್ ಕಷ್ಟಪಟ್ಟು 30 ರನ್ ಪೇರಿಸಿದರು. ಉಳಿದಂತೆ ಸರಣಿಯಲ್ಲಿ ಮತ್ತೆ ವೈಫಲ್ಯ ಮುಂದುವರೆಸಿದ ನಾಯಕ ರೋಹಿತ್ ಶರ್ಮಾ 9 ರನ್ ಮಾತ್ರ ಗಳಿಸಿದರು. ಕೆಎಲ್ ರಾಹುಲ್ ಶೂನ್ಯಕ್ಕೆ ನಿರ್ಗಮಿಸಿದರೆ, ಕೊಹ್ಲಿಯ ತಂತ್ರವೂ ಫಲ ಕಾಣಲಿಲ್ಲ. ಜಡೇಜಾ 2 ರನ್ ಗಳಿಸಿದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ನಿತೀಶ್ ರೆಡ್ಡಿ 1 ರನ್ ಮಾತ್ರ ಗಳಿಸಲು ಸಾಧ್ಯವಾಯ್ತು. ವಾಷಿಂಗ್ಟನ್ ಸುಂದರ್ ಅಜೇಯ 5 ರನ್ ಗಳಿಸಿದರು.
ಆಸೀಸ್ ಪರ ಸ್ಕಾಟ್ ಬೋಲ್ಯಾಂಡ್ ಹಾಗೂ ನಾಯಕ ಪ್ಯಾಟ ಕಮಿನ್ಸ್ ತಲಾ 3 ವಿಕೆಟ್ ಪಡೆದರು.
ಸರಣಿಯಲ್ಲಿ ಒಂದು ಪಂದ್ಯ ಬಾಕಿ ಉಳಿದಿದ್ದು, ಜನವರಿ 3ರಿಂದ ಸಿಡ್ನಿಯಲ್ಲಿ ಐದನೇ ಟೆಸ್ಟ್ ನಡೆಯಲಿದೆ. ಭಾರತಕ್ಕೆ ಸರಣಿ ಡ್ರಾ ಮಾಡುವ ಅವಕಾಶವಿದೆ. ಅದಕ್ಕಾಗಿ ಸಿಡ್ನಿ ಟೆಸ್ಟ್ ಗೆಲ್ಲಲೇಬೇಕಾಗಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope