ಐಸಿಸಿ ರ‍್ಯಾಂಕಿಂಗ್: ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತವೇ ನಂಬರ್ 1; ಟೆಸ್ಟ್‌ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಕುಸಿತ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ರ‍್ಯಾಂಕಿಂಗ್: ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತವೇ ನಂಬರ್ 1; ಟೆಸ್ಟ್‌ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಕುಸಿತ

ಐಸಿಸಿ ರ‍್ಯಾಂಕಿಂಗ್: ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತವೇ ನಂಬರ್ 1; ಟೆಸ್ಟ್‌ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಕುಸಿತ

ಐಸಿಸಿ ಏಕದಿನ ಹಾಗೂ ಟಿ20 ಶ್ರೇಯಾಂಕದಲ್ಲಿ ಭಾರತ ಕ್ರಿಕೆಟ್‌ ತಂಡ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನ ಕಾಯ್ದುಕೊಂಡಿದೆ. ಐಸಿಸಿ ನೂತನ ಶ್ರೇಯಾಂಕ ಪಟ್ಟಿ ಇಲ್ಲಿದೆ.

ಐಸಿಸಿ ರ‍್ಯಾಂಕಿಂಗ್: ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತವೇ ನಂಬರ್ 1
ಐಸಿಸಿ ರ‍್ಯಾಂಕಿಂಗ್: ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತವೇ ನಂಬರ್ 1 (ANI)

ಸದ್ಯ ಐಪಿಎಲ್ ಜೋಶ್ ಜೋರಾಗಿದೆ. ಇದರ ನಡುವೆ ಐಸಿಸಿ ಶ್ರೇಯಾಂಕದಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡದ ಪ್ರಾಬಲ್ಯ ಮುಂದುವರೆದಿದೆ. ಭಾರತವು ಪುರುಷರ ಕ್ರಿಕೆಟ್‌ನ ವೈಟ್ ಬಾಲ್ ಸ್ವರೂಪದ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಏಕದಿನ ಮಾತ್ರವಲ್ಲದೆ ಟಿ20 ಸ್ವರೂಪದಲ್ಲಿಯೂ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡವು, ಅದಕ್ಕೂ ಮುಂಚೆಯೇ 2024ರಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಿತ್ತು. ಹೀಗಾಗಿ ಎರಡೂ ಸ್ವರೂಪಗಳಲ್ಲಿ ವಿಶ್ವದ ಬಲಿಷ್ಠ ತಂಡವೆಂಬ ಪಟ್ಟ ಉಳಿಸಿಕೊಂಡಿದೆ.

ಈ ನಡುವೆ ಟೆಸ್ಟ್ ಶ್ರೇಯಾಂಕದಲ್ಲಿ ಭಾರತದ ಪ್ರದರ್ಶನ ಕಳಪೆಯಾಗಿದೆ. ತವರಿನಲ್ಲಿ ಕಿವೀಸ್‌ ವಿರುದ್ಧ ಸರಣಿ ಸೋತ ಬಳಿಕ, ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಉಳಿಸಲು ಕೂಡಾ ಸಾಧ್ಯವಾಗಿಲ್ಲ. ಹೀಗಾಗಿ‌ ಟೆಸ್ಟ್ ಶ್ರೇಯಾಂಕದಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡು ಈಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡವು ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಅದರೊಂದಿಗೆ ಜೂನ್‌ನಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿರುವ ಇಂಗ್ಲೆಂಡ್, ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಟಿ20ಐ ಸ್ವರೂಪಕ್ಕೆ ದೊರೆ

ಟಿ20 ಶ್ರೇಯಾಂಕದಲ್ಲಿ ಭಾರತ ತಂಡವು ಸುದೀರ್ಘ ಅವಧಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಭಾರತವು 271 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕಿಂತ ಒಂಬತ್ತು ಅಂಕಗಳು ಮುಂದಿದೆ. 2024ರ ಆರಂಭದಿಂದ ಭಾರತವು ಕೇವಲ ನಾಲ್ಕು ಟಿ20ಐ ಪಂದ್ಯಗಳನ್ನು ಮಾತ್ರ ಸೋತಿದೆ. ಟಿ20 ವಿಶ್ವಕಪ್‌ನಲ್ಲಿ ಅಜೇಯ ಅಭಿಯಾನ ಪೂರ್ಣಗೊಳಿಸಿ ಕಪ್‌ ಗೆದ್ದ ತಂಡ ಒಟ್ಟು 29 ಪಂದ್ಯಗಳನ್ನು ಗೆದ್ದಿದೆ.

ಟೆಸ್ಟ್ ಶ್ರೇಯಾಂಕ

ದಶಕದ ನಂತರ ತವರು ನೆಲದಲ್ಲಿ ಮೊದಲ ಬಾರಿಗೆ ಸರಣಿ ಸೋಲಿನ ನಂತರ, ಭಾರತದ ಟೆಸ್ಟ್ ಸಾಧನೆ ಕಳಪೆಯಾಗಿದೆ.‌ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ವೈಟ್‌ವಾಶ್ ಅನುಭವಿಸಿದ ಭಾರತದ ಟೆಸ್ಟ್ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಇದರ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ 3-1 ಅಂತರದಿಂದ ಸರಣಿ ಸೋಲನ್ನು ಅನುಭವಿಸಿತು. ಮೇಲಿಂದ ಮೇಲೆ ಸರಣಿ ಸೋಲುಗಳು ಭಾರತದ ಡಬ್ಲ್ಯುಟಿಸಿ ಫೈನಲ್‌ ಅವಕಾಶವನ್ನೂ ಕಸಿದುಕೊಂಡಿತು. ಭಾರತ ತಂಡವು ಈಗ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕಿಂತ 21 ಅಂಕಗಳಷ್ಟು ಹಿಂದೆ ಬಿದ್ದಿದೆ.

2023ರ ಏಕದಿನ ವಿಶ್ವಕಪ್‌ನಿಂದ ಭಾರತವು ಐಸಿಸಿ ಈವೆಂಟ್‌ಗಳಲ್ಲಿ ಬರೋಬ್ಬರಿ 23-1 ಅಂತರದ ಗೆಲುವಿನ ದಾಖಲೆಯನ್ನು ಅನುಭವಿಸಿದೆ. ಇದು ಭಾರತದ ಪ್ರಚಂಡ ಫಾರ್ಮ್‌ ಅನ್ನು ತೋರಿಸುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.