ಜಸ್ಪ್ರೀತ್ ಬುಮ್ರಾ 2024ರ ಐಸಿಸಿ ವರ್ಷದ ಕ್ರಿಕೆಟಿಗ; ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಗೌರವ ಪಡೆದ ಭಾರತೀಯ ವೇಗಿ
ICC Cricketer of the Year 2024: ಜಸ್ಪ್ರೀತ್ ಬುಮ್ರಾ ಐಸಿಸಿ 2024ರ ವರ್ಷದ (ಪುರುಷರ) ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಸರ್ ಗಾರ್ಫೀಲ್ಡ್ ಸೋಬರ್ಸ್ ಗೌರವಕ್ಕೆ ಭಾಜನರಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಐಸಿಸಿ ವರ್ಷದ (ಪುರುಷ) ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಸಿಸಿಯ ಪ್ರತಿಷ್ಠಿತ ಪ್ರಶಸ್ತಿಯಾದ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಗೌರವಕ್ಕೆ ಬುಮ್ರಾ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಂದು (ಜನವರಿ 28ರ ಮಂಗಳವಾರ) ಈ ಘೋಷಣೆ ಮಾಡಿದೆ. 2024ರ ವರ್ಷಪೂರ್ತಿ ಬುಮ್ರಾ ಅಮೋಘ ಪ್ರದರ್ಶನ ನೀಡಿದ್ದಾರೆ. ಆಡಿದ ಪ್ರತಿಯೊಂದು ಪಂದ್ಯದಲ್ಲೂ ಪ್ರಾಬಲ್ಯ ಸಾಧಿಸಿದ ವೇಗದ ಬೌಲರ್, ಟ್ರಾವಿಸ್ ಹೆಡ್, ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರನ್ನು ಸೋಲಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಟ್ಟಿದಾರೆ. ಇದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಹುಲ್ ದ್ರಾವಿಡ್ (2004), ಸಚಿನ್ ತೆಂಡೂಲ್ಕರ್ (2010), ರವಿಚಂದ್ರನ್ ಅಶ್ವಿನ್ (2016) ಮತ್ತು ವಿರಾಟ್ ಕೊಹ್ಲಿ (2017 ಮತ್ತು 2018) ನಂತರ ಭಾರತದಿಂದ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಐದನೇ ಆಟಗಾರ ಬುಮ್ರಾ.
2024ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ವೇಳೆ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದರು. ಪ್ರಸ್ತುತ ನಂ.1 ಸ್ಥಾನದಲ್ಲಿಯೇ ಉಳಿದಿದ್ದಾರೆ. ವೇಗವಾಗಿ 200 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೂ ಬುಮ್ರಾ ಪಾತ್ರರಾಗಿದ್ದಾರೆ. ಇದೇ ವೇಳೆ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ 900 ಅಂಕಗಳ ಗಡಿಯನ್ನು ದಾಟಿದರು. ದಾಖಲೆಯ 907 ಅಂಕಗಳೊಂದಿಗೆ ವರ್ಷವನ್ನು ಕೊನೆಗೊಳಿಸಿದರು. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಭಾರತೀಯ ಬೌಲರ್ ಒಬ್ಬರ ವಿಶೇಷ ಸಾಧನೆಯಾಗಿದೆ.
ವೆಸ್ಟ್ ಇಂಡೀಸ್‌ನಲ್ಲಿ ನಡೆದ ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಂದ್ಯಾವಳಿಯಲ್ಲಿ 8.26ರ ಸರಾಸರಿ ಮತ್ತು ಕೇವಲ 4.17ರ ಎಕಾನಮಿಯೊಂದಿಗೆ 15 ವಿಕೆಟ್ ಕಬಳಿಸಿದರು. ಇದರೊಂದಿಗೆ ಸರಣಿ ಶ್ರೇಷ್ಠರಾದರು.
13 ಪಂದ್ಯಗಳಲ್ಲಿ 71 ಟೆಸ್ಟ್ ವಿಕೆಟ್
ಕಳೆದ ವರ್ಷ ಭಾರತೀಯ ವೇಗಿ ಆಡಿದ ಕೇವಲ 13 ಪಂದ್ಯಗಳಲ್ಲಿ 71 ಟೆಸ್ಟ್ ವಿಕೆಟ್‌ಗಳನ್ನು ಪಡೆದರು. ಇದು 2024ರಲ್ಲಿ ಯಾವುದೇ ಬೌಲರ್ ಗಳಿಸಿದ ಅತ್ಯಧಿಕ ವಿಕೆಟ್ ಆಗಿದೆ. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ವೇಗಿ ಕಪಿಲ್ ದೇವ್ ನಂತರ ಜಸ್ಪ್ರೀತ್ ಬುಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅವರು ಒಟ್ಟು 32 ವಿಕೆಟ್‌ಗಳನ್ನು ಪಡೆದರು.
ವಿಶ್ವಕಪ್‌ನಲ್ಲಿ ಅಬ್ಬರ
ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದರು. 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿಯೂ ದಕ್ಷಿಣ ಆಫ್ರಿಕಾವನ್ನು ಸೋಲಿಸಲು ಭಾರತಕ್ಕೆ ನೆರಾವದರು. ರೀಜಾ ಹೆಂಡ್ರಿಕ್ಸ್ ಮತ್ತು ಮಾರ್ಕೊ ಜಾನ್ಸೆನ್ ಅವರ ವಿಕೆಟ್ ಕಬಳಿಸಿ ಮಿಂಚಿದರು.
