ಕೆಎಲ್ ರಾಹುಲ್ ಓಪನಿಂಗ್, 2 ಪ್ರಮುಖ ಬದಲಾವಣೆ; ಆಸ್ಟ್ರೇಲಿಯಾ ವಿರುದ್ಧದ ಗಬ್ಬಾ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ ಗಬ್ಬಾದಲ್ಲಿ ನಡೆಯುತ್ತಿದೆ. ಸರಣಿ ಸಮಬಲ ಆಗಿರುವುದರಿಂದ ಗಬ್ಬಾ ಟೆಸ್ಟ್‌ಗೆ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ತಂಡ ಯೋಜಿಸುತ್ತಿದೆ. ಭಾರತ ಸಂಭಾವ್ಯ ತಂಡ ಹೀಗಿರಲಿದೆ. ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಆರಂಭಿಕರಾಗಿ ಆಡಲಿದ್ದಾರೆ.
ಅಡಿಲೇಡ್ ಓವಲ್‌ನಲ್ಲಿ ನಡೆದ ಹಗಲು-ರಾತ್ರಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡಿತು. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಜಯಗಳಿಸಿದ್ದ ಭಾರತ, ಎರಡನೇ ಟೆಸ್ಟ್‌ನಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ಬಳಗವು 10 ವಿಕೆಟ್‌ಗಳಿಂದ ಮುಗ್ಗರಿಸಿತು. ಸದ್ಯ ಸರಣಿ ಗೆಲುವು ಹಾಗೂ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯವಿದೆ.
ಮೂರನೇ ಟೆಸ್ಟ್ ಪಂದ್ಯವು ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತಿದೆ. ಈ ಮೈದಾನದಲ್ಲಿ ಭಾರತಕ್ಕೆ ಐತಿಹಾಸಿಕ ನೆನಪುಗಳಿವೆ. 2021ರಲ್ಲಿ ಬ್ರಿಸ್ಬೇನ್‌ನಲ್ಲಿ ಕೊನೆಯ ಬಾರಿ ಆಡಿದ್ದಾಗ, ಭಾರತ ತಂಡ ಇತಿಹಾಸ ನಿರ್ಮಾಣ ಮಾಡಿತ್ತು. ಹೀಗಾಗಿ ಟೀಮ್ ಇಂಡಿಯಾಗೆ ಗಬ್ಬಾದಲ್ಲಿ ಗೆಲುವು ಒಲಿಯುವ ನಿರೀಕ್ಷೆ ಇದೆ.
ಅಡಿಲೇಡ್ ಸೋಲಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಮುಂದೆ ಗೆಲುವು ಅನಿವಾರ್ಯ. ಇನ್ನೊಂದು ಸೋಲು ಕೂಡಾ ತಂಡವನ್ನು ಫೈನಲ್ ರೇಸ್‌ನಿಂದ ಹೊರಗಿಡಬಹುದು. ಹೀಗಾಗಿ ಸರಣಿಯಲ್ಲಿ ಪುಟಿದೇಳಲು ಬ್ರಿಸ್ಬೇನ್ ಟೆಸ್ಟ್‌ಗೆ ಬಲಿಷ್ಠ ಪ್ಲೇಯಿಂಗ್ ರೂಪಿಸುವ ಬಳಗ್ಗೆ ಮ್ಯಾನೇಜ್‌ಮೆಂಟ್ ಚಿಂತಿಸುತ್ತಿದೆ.
ಅಗ್ರ ಕ್ರಮಾಂಕದಲ್ಲಿ ರೋಹಿತ್ ಅಥವಾ ರಾಹುಲ್?
ಗಬ್ಬಾ ಟೆಸ್ಟ್ ಗೆಲುವಿಗಾಗಿ ತಂಡದಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಕಳೆದ ಎರಡೂ ಪಂದ್ಯಗಳಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಮತ್ತೆ ಅಗ್ರ ಕ್ರಮಾಂಕದಲ್ಲಿ ಮುಂದುವರೆಯುತ್ತಾರಾ ಎಂಬುದು ಸದ್ಯದ ಪ್ರಶ್ನೆ. ರೋಹಿತ್ ಶರ್ಮಾ ಅಗ್ರಸ್ಥಾನಕ್ಕೆ ಮರಳಬೇಕು ಎಂದು ಕೆಲವು ಮಾಜಿ ಕ್ರಿಕೆಟಿಗರು ಕೂಡಾ ಸಲಹೆ ನೀಡಿದ್ದರು. ಆದರೆ, ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ಧ ಕನ್ನಡಿಗನ್ನು ಅಗ್ರಕ್ರಮಾಂಕದಿಂದ ಕೆಳಗಿಳಿಸಲ್ಲ ಎಂದು ನಾಯಕ ರೋಹಿತ್ ಹೇಳಿದ್ದಾರೆ. ಹೀಗಾಗಿ ಟಾಪ್ ಆರ್ಡರ್ ಹಾಗೆಯೇ ಮುಂದುವರೆಯಬಹುದು.
ಅಡಿಲೇಡ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ 64 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ, ಮತ್ತೊಮ್ಮೆ ಉತ್ತಮ ಆರಂಭದ ಸೂಚನೆ ನೀಡಿದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 7 ರನ್‌ಗಳಿಗೆ ಅಗ್ಗವಾಗಿ ಔಟಾದರು. ರೋಹಿತ್ ಶರ್ಮಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದರು. ಹೀಗಾಗಿ ಅವರು ಮತ್ತೆ ಓಪನರ್ ಪಾತ್ರಕ್ಕೆ ಮರಳಿದರೂ ಅಚ್ಚರಿಯಿಲ್ಲ. ಆದರೆ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಅಗ್ರಸ್ಥಾನದಲ್ಲಿ ಆಡಿಯೂ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್, ಇಂಥಾ ಧೈರ್ಯ ಮಾಡುವ ಸಾಧ್ಯತೆ ಇಲ್ಲ. ಓಪನರ್ ಆಗಿ ರಾಹುಲ್ ನೀಡಿರುವ ಪ್ರಭಾವಶಾಲಿ ಪ್ರದರ್ಶನಗಳನ್ನು ಪ್ರಕಾರ, ಅವರೇ ಅಗ್ರಸ್ಥಾನದಲ್ಲಿ ಮುಂದುವರಿಯುವುದು ಬಹುತೇಕ ಖಚಿತ. ಯಶಸ್ವಿ ಜೈಸ್ವಾಲ್ ಇವರ ಜೊತೆಗಾರನಾಗಲಿದ್ದಾರೆ.
ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಮೂರರಿಂದ ಐದನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಕೆಳ-ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಜೊತೆಗೆ ಆಡಲಿದ್ದಾರೆ.
ಆರ್ ಅಶ್ವಿನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್; ಮೂವರಲ್ಲಿ ಯಾರು?
ಗಬ್ಬಾ ಟೆಸ್ಟ್‌ನಲ್ಲಿ ಆರ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ ಅಥವಾ ವಾಷಿಂಗ್ಟನ್ ಸುಂದರ್ ಆಡಿಸುವ ಸಾಧ್ಯತೆ ಇದೆ. ಅಡಿಲೇಡ್‌ನಲ್ಲಿ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಗಬ್ಬಾದಲ್ಲಿ ಹೆಚ್ಚುವರಿ ಬ್ಯಾಟಿಂಗ್ ಬಲದ ನಿರೀಕ್ಷೆಯಲ್ಲಿರುವ ತಂಡವು, ಜಡೇಜಾ ಅಥವಾ ಸುಂದರ್ ಇಬ್ಬರಲ್ಲಿ ಒಬ್ಬರನ್ನು ಆಡಿಸಬಹುದು.
ಪ್ರಸಿದ್ಧ್ ಕೃಷ್ಣ - ಆಕಾಶ್ ದೀಪ್‌ಗೆ ಚಾನ್ಸ್
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹರ್ಷಿತ್ ರಾಣಾ ಉತ್ತಮ ಪ್ರದರ್ಶನ ನೀಡಿದರು. ಆದರೆ, ಅಡಿಲೇಡ್‌ನಲ್ಲಿ ಅದು ಸಾಧ್ಯವಾಗಲಿಲ್ಲ. ಗಬ್ಬಾ ಪಿಚ್ ವೇಗ, ಚಲನೆ ಮತ್ತು ಬೌನ್ಸ್ ಕೂಡಾ ಹೊಂದಿರವುದರಿಂದ ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ಆಯ್ಕೆಗೆ ಒಲವು ಹೆಚ್ಚಿದೆ.
ಗಬ್ಬಾ ಟೆಸ್ಟ್‌ಗೆ ಭಾರತ ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರೋಹಿತ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ/ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್/ ಪ್ರಸಿದ್ಧ್ ಕೃಷ್ಣ.