ಆಸ್ಟ್ರೇಲಿಯಾ ಸಂಸತ್ತಿನಲ್ಲಿ ರೋಹಿತ್ ಶರ್ಮಾ ಭಾಷಣ; ಪರ್ತ್ ಟೆಸ್ಟ್ ಗೆಲುವು ಸ್ಮರಿಸಿದ ಹಿಟ್‌ಮ್ಯಾನ್, ಆಸಿಸ್ ಆತಿಥ್ಯಕ್ಕೆ ಶ್ಲಾಘನೆ
ಪ್ರೈಮ್ ಮಿನಿಸ್ಟರ್ಸ್ Xi ವಿರುದ್ಧದ ಪಿಂಕ್ ಬಾಲ್ ಅಭ್ಯಾಸ ಪಂದ್ಯಕ್ಕಾಗಿ ಕ್ಯಾನ್ಬೆರಾ ತಲುಪಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 06ರಂದು ನಡೆಯಲಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma), ಗುರುವಾರ (ನವೆಂಬರ್ 28) ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಭಾಷಣ ಮಾಡಿದ್ದಾರೆ. ಭಾರತ ಕ್ರಿಕೆಟ್ ಪಾಲಿಗೆ ಇದು ಐತಿಹಾಸಿಕ ಕ್ಷಣವಾಗಿದೆ. ಕ್ರಿಕೆಟ್ ಮೈದಾನ ಹಾಗೂ ಮೈದಾನದ ಹೊರಗೆ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವಿನ ಬೇರೂರಿರುವ ಆಳವಾದ ಸಂಬಂಧಗಳ ಬಗ್ಗೆ ಆಸೀಸ್ ಪಾರ್ಲಿಮೆಂಟ್‌ನಲ್ಲಿ ಹಿಟ್‌ಮ್ಯಾನ್ ಮಾತನಾಡಿದರು. ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದ ರೋಹಿತ್, ಆಸೀಸ್ ಕ್ರಿಕೆಟ್‌ನ ಸ್ಪರ್ಧಾತ್ಮಕ ಮನೋಭಾವ ಮತ್ತು ದೇಶದ ಆದರಾತಿಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾರ್ಡರ್-ಗವಾಸ್ಕರ್ ಟ್ರೋಫಿಯಂತಹ ಸರಣಿಯ ಸಂದರ್ಭದಲ್ಲಿ ತಂಡಗಳ ನಡುವೆ ತೀವ್ರ ಪೈಪೋಟಿಯು ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಸುತ್ತದೆ. ಪರಸ್ಪರ ಗೌರವ ಮತ್ತು ಸೌಹಾರ್ದತೆಯ ವಾತಾವರಣ ಸೃಷ್ಟಿಸುತ್ತದೆ ಎಂಬುದನ್ನು ಅವರು ಒಪ್ಪಿಕೊಂಡರು.
“ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವೆ ಕ್ರೀಡೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸುದೀರ್ಘ ಸಂಬಂಧವಿದೆ. ನಾವು ಈ ನೆಲದಲ್ಲಿ ಕ್ರಿಕೆಟ್ ಆಡುವುದನ್ನು ಆನಂದಿಸಿದ್ದೇವೆ. ಅಭಿಮಾನಿಗಳ ಉತ್ಸಾಹ ಮತ್ತು ಆಟಗಾರರ ಸ್ಪರ್ಧಾತ್ಮಕ ಸ್ವಭಾವದಿಂದಾಗಿ ಆಸ್ಟ್ರೇಲಿಯಾ ಸವಾಲಿನ ತಂಡವಾಗಿದೆ. ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದರ ವಿರುದ್ಧ ಸೆಣಸುತ್ತಿರುವುದು ಸಂತೋಷದ ಸಂಗತಿ,” ಎಂದು ಆಸೀಸ್ ಪಾರ್ಲಿಮೆಂಟ್‌ನಲ್ಲಿ ರೋಹಿತ್ ಶರ್ಮಾ ಉದ್ಘರಿಸಿದ್ದಾರೆ.
ಆಸ್ಟ್ರೇಲಿಯಾಗೆ ಬರುವುದನ್ನು ಭಾರತ ಎಂದಿಗೂ ಆನಂದಿಸುತ್ತದೆ
ಆಸ್ಟ್ರೇಲಿಯಾ ದೇಶದ ನಗರಗಳು ಮತ್ತು ಸಂಸ್ಕೃತಿಯು ರೋಮಾಂಚಕ ಎಂದು ಟೀಮ್ ಇಂಡಿಯಾ ನಾಯಕ ಬಣ್ಣಿಸಿದರು. ಕ್ರಿಕೆಟ್ ಸಂಬಂಧವಾಗಿ ದೇಶಕ್ಕೆ ಪ್ರಯಾಣಿಸುವುದನ್ನು ತಮ್ಮ ತಂಡವು ತುಂಬಾ ಆನಂದಿಸುತ್ತದೆ ಎಂಬುದನ್ನು ಭಾರತದ ನಾಯಕ ಎತ್ತಿ ತೋರಿಸಿದರು. ಭಾವೋದ್ರಿಕ್ತ ಪ್ರೇಕ್ಷಕರು ಮತ್ತು ಪ್ರತಿ ಸರಣಿಯನ್ನು ಸ್ಮರಣೀಯವಾಗಿಸುವ ಸವಾಲಿನ ಆಟದ ಪರಿಸ್ಥಿತಿಗಳನ್ನು ನೆನಪಿಸಿದರು.
“ನಾವು ಆಸ್ಟ್ರೇಲಿಯಾದಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ. ಇತ್ತೀಚೆಗೆ ಟೆಸ್ಟ್ ಪಂದ್ಯವನ್ನು ಗೆದ್ದಿದ್ದೇವೆ. ನಾವು ಆ ವೇಗವನ್ನು ಮುಂದೆ ಕೊಂಡೊಯ್ಯಲು ಬಯಸುತ್ತೇವೆ. ನಾವು ಸಂಸ್ಕೃತಿಯನ್ನು ಆನಂದಿಸಲು ಬಯಸುತ್ತೇವೆ. ಉಳಿದ ಪಂದ್ಯಗಳಲ್ಲಿ ನಾವು ಆಸ್ಟ್ರೇಲಿಯಾ ಮತ್ತು ಭಾರತೀಯ ಅಭಿಮಾನಿಗಳನ್ನು ರಂಜಿಸುತ್ತೇವೆ ಎಂಬ ಭರವಸೆ ಇದೆ. ನಾವು ಉತ್ತಮ ಕ್ರಿಕೆಟ್ ಆಡಲು ಎದುರು ನೋಡುತ್ತೇವೆ ಮತ್ತು ಅದೇ ಸಮಯದಲ್ಲಿ, ಈ ದೇಶವನ್ನು ಆನಂದಿಸುತ್ತೇವೆ. ಇದು ಅದ್ಭುತ ಸ್ಥಳವಾಗಿದೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ನಾವು ಉತ್ತಮ ಕ್ರಿಕೆಟ್ ಆಡುತ್ತೇವೆ ಎಂದು ಆಶಿಸುತ್ತೇವೆ. ಇಲ್ಲಿಗೆ ಬಂದಿರುವುದು ಸಂತೋಷದ ಸಂಗತಿ. ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ರೋಹಿತ್ ಹೇಳಿದರು.
ಪರ್ತ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮುಂದೆ ಟೀಮ್ ಇಂಡಿಯಾ ನವೆಂಬರ್ 6ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಹಗಲು/ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಡಲಿದೆ. ಅದಕ್ಕೂ ಮೊದಲು ಪಿಂಕ್ ಬಾಲ್ ಟೆಸ್ಟ್‌ಗೆ ತಯಾರಿ ನಡೆಸಲು ತಂಡವು ಕ್ಯಾನ್ಬೆರಾದಲ್ಲಿ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಭಾರತ ಎ ಹಾಗೂ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ನಡುವೆ ಪಂದ್ಯ ಇರಲಿದೆ.
ಇತ್ತೀಚೆಗಷ್ಟೇ ಎರಡನೇ ಮಗುವಿನ ತಂದೆಯಾದ ರೋಹಿತ್, ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ಮುಂದೆ ಅಡಿಲೇಡ್‌ನಲ್ಲಿ ಪುನರಾಗಮನ ಮಾಡಲಿದ್ದಾರೆ.