ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಮೊಹಮ್ಮದ್‌ ಶಮಿ ಕಂಬ್ಯಾಕ್‌
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಮೊಹಮ್ಮದ್‌ ಶಮಿ ಕಂಬ್ಯಾಕ್‌

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಮೊಹಮ್ಮದ್‌ ಶಮಿ ಕಂಬ್ಯಾಕ್‌

India vs England T20I: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ.‌ ಎಂದಿನಂತೆ ಸೂರ್ಯಕುಮಾರ್ ಯಾದವ್‌ ನಾಯಕತ್ವದಲ್ಲಿ ತಂಡ ಆಡಲಿದ್ದು, ಮೊಹಮ್ಮದ್‌ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಮೊಹಮ್ಮದ್‌ ಶಮಿ ಕಂಬ್ಯಾಕ್‌
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಮೊಹಮ್ಮದ್‌ ಶಮಿ ಕಂಬ್ಯಾಕ್‌ (REUTERS)

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮೊಹಮ್ಮದ್‌ ಶಮಿ ಟೀಮ್‌ ಇಂಡಿಯಾಗೆ ಕಂಬ್ಯಾಕ್‌ ಮಾಡಿದ್ದಾರೆ. ಜನವರಿ 22ರಿಂದ ಕೋಲ್ಕತ್ತಾದಲ್ಲಿ ಸರಣಿ ಆರಂಭವಾಗಲಿದ್ದು, ಐದು ಪಂದ್ಯಗಳ ಚುಟುಕು ಸರಣಿಗೆ ಪುರುಷರ ಆಯ್ಕೆ ಸಮಿತಿ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಸೂರ್ಯಕುಮಾರ್‌ ಯಾದವ್‌ ನೇತೃತ್ವದಲ್ಲಿ ತಂಡ ಆಡಲಿದ್ದು, ಅಕ್ಷರ್‌ ಪಟೇಲ್‌ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. 

ಮೊಹಮ್ಮದ್‌ ಶಮಿ ತಂಡಕ್ಕೆ ಆಯ್ಕೆಯಾಗುವ ಮೂಲಕ ವರ್ಷದ ಬಳಿಕ ಟೀಮ್‌ ಇಂಡಿಯಾಗೆ ಮತ್ತೆ ಮರಳಿದ್ದಾರೆ. 2023ರ ನವೆಂಬರ್ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭಾರತದ ಪರ ಕೊನೆಯ ಬಾರಿಗೆ ಆಡಿದ್ದರು. ಆ ನಂತರ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಗಿ, ಇತ್ತೀಚೆಗಷ್ಟೇ ವೃತ್ತಿಪರ ಕ್ರಿಕೆಟ್‌ ಆಡಲು ಆರಂಭಿಸಿದರು.

2024ರ ಟಿ20 ವಿಶ್ವಕಪ್‌ ಮತ್ತು ಕಳೆದ ವರ್ಷ ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತದ ಆದ್ಯತೆಯ ವಿಕೆಟ್ ಕೀಪರ್ ಆಗಿದ್ದ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿಲ್ಲ. ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಅವರನ್ನು ವಿಕೆಟ್ ಕೀಪರ್‌ಗಳಾಗಿ ಆಯ್ಕೆ ಮಾಡಲಾಗಿದೆ.

ಹಲವರಿಗೆ ಕೊಕ್‌; ನಿತೀಶ್, ಹರ್ಷಿತ್, ಜುರೆಲ್‌ಗೆ ಸ್ಥಾನ

ಇದೇ ವೇಳೆ, ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ 3-1 ಅಂತರದಲ್ಲಿ ಟಿ20 ಸರಣಿ ಗೆದ್ದ ತಂಡದಲ್ಲಿ ಸ್ಥಾನ ಪಡೆದಿದ್ದ ರಮಣದೀಪ್ ಸಿಂಗ್, ಜಿತೇಶ್ ಶರ್ಮಾ, ಆವೇಶ್ ಖಾನ್, ಯಶ್ ದಯಾಳ್ ಮತ್ತು ವಿಜಯಕುಮಾರ್ ವೈಶಾಕ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಯುವ ಆಲ್‌ರೌಂಡರ್‌ ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಧ್ರುವ್ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ.

ಸದ್ಯ ಟಿ20 ತಂಡವನ್ನು ಮಾತ್ರವೇ ಆಯ್ಕೆ ಮಾಡಲಾಗಿದೆ. ಫೆಬ್ರುವರಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗಾಗಿ ತಾತ್ಕಾಲಿಕ 15 ಮಂದಿಯ ತಂಡವನ್ನು ಇನ್ನೂ ಪ್ರಕಟಿಸಿಲ್ಲ.

ಇಂಗ್ಲೆಂಡ್‌ ವಿರುದ್ಧದ ವೈಟ್‌ಬಾಲ್‌ ಸರಣಿ

ಜನವರಿ 22ರಿಂದ ಫೆಬ್ರುವರಿ 2ರವರೆಗೆ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿದೆ. ಆ ನಂತರ ಚೆನ್ನೈ, ರಾಜ್‌ಕೋಟ್, ಪುಣೆ ಮತ್ತು ಮುಂಬೈನಲ್ಲಿ ನಂತರದ ಟಿ20 ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ನಾಗ್ಪುರ (ಫೆಬ್ರುವರಿ 6), ಕಟಕ್ (ಫೆಬ್ರುವರಿ 9) ಮತ್ತು ಅಹಮದಾಬಾದ್ (ಫೆಬ್ರುವರಿ 12)ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್‌ ಕೀಪರ್).

Whats_app_banner