ಐಪಿಎಲ್ ಫಾರ್ಮ್ ಮತ್ತು ಫಿಟ್‌ನೆಸ್ ಆಧಾರದಲ್ಲಿ ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆಗೆ ಬಿಸಿಸಿಐ ಚಿಂತನೆ
T20 World Cup 2024: ಐಪಿಎಲ್ ಟೂರ್ನಿ ಆರಂಭವಾದ ಬಳಿಕ ಭಾರತೀಯ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಪ್ರಕಟಿಸಲು ಬಿಸಿಸಿಐ ಚಿಂತನೆ ನಡೆಸಿದೆ.
2024ರಲ್ಲಿ ನಡೆಯಲಿರುವ ಪ್ರಮುಖ ಕ್ರಿಕೆಟ್ ಈವೆಂಟ್ ಎಂದರೆ ಟಿ20 ವಿಶ್ವಕಪ್ (ICC Men’s T20 World Cup). ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಸೋತ ಬಳಿಕ, ಚುಟುಕು ವಿಶ್ವಕಪ್ ಮೇಲೆ ಬಿಸಿಸಿಐ ಚಿತ್ತ ಹರಿಸಿದೆ. ಹೀಗಾಗಿ ತಂಡದ ಆಯ್ಕೆಗೂ ಭಾರಿ ಮಹತ್ವ ನೀಡಿದೆ. ಉತ್ತಮ ತಂಡ ರಚನೆ ಉದ್ದೇಶದಿಂದಾಗಿ 2024ರ ಐಪಿಎಲ್ ಪಂದ್ಯಾವಳಿ ಆರಂಭವಾದ ಬಳಿಕ ಭಾರತೀಯ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಪ್ರಕಟಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಚುಟುಕು ಮಹಾಸಮರಕ್ಕೆ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲವು ತಂತ್ರಗಳನ್ನು ಅನುಸರಿಸುತ್ತಿದೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ 2024ರ ಮಾರ್ಚ್ 22ರಿಂದ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗುವ ನಿರೀಕ್ಷೆಯಿದೆ. ಮೇ 26ರಂದು ಫೈನಲ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಆ ಬಳಿಕ, ಅಂದರೆ ಜೂನ್ 4ರಿಂದ ಜೂನ್ 30ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ.
ಫಿಟ್‌ನೆಸ್ ಗಮನಿಸಿಕೊಂಡು ಮುಂದಿನ ನಿರ್ಧಾರ
ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, ಈ ವರ್ಷ ಕೆಲವೊಂದು ಟಿ20 ಪಂದ್ಯಗಳು ನಡೆಯಲಿವೆ. ವಿಶ್ವಕಪ್ ಆರಂಭವಾಗುವ ಮೊದಲು ಕೊನೆಯ ಟಿ20 ಸರಣಿಯನ್ನು 2024ರ ಜನವರಿಯಲ್ಲಿ ಭಾರತ ಆಡುತ್ತಿದೆ. ಈ ನಡುವೆ ಗಾಯದ ಸಮಸ್ಯೆ ಕೂಡಾ ತಂಡಕ್ಕೆ ಕಾಡುತ್ತಿದೆ. ಹೀಗಾಗಿ ಆಟಗಾರರ ಆಯ್ಕೆಯ ಕುರಿತು ಮುಂಚಿತವಾಗಿ ತೀರ್ಮಾನ ಮಾಡುವ ಬದಲು, ಐಪಿಎಲ್ ಆರಂಭವಾದ ಮೊದಲ ತಿಂಗಳಲ್ಲಿ ಆಟಗಾರರ ಫಾರ್ಮ್ ಮತ್ತು ಫಿಟ್‌ನೆಸ್ ಆಧಾರದಲ್ಲಿ ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡುವುದು ಬಿಸಿಸಿಐ ಚಿಂತನೆಯಾಗಿದೆ.
ಇದನ್ನೂಓದಿ | ಇಂಗ್ಲೆಂಡ್, ಭಾರತ ಎರಡೂ ಅಲ್ಲ; ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಆರಿಸಿದ ಆಂಗ್ಲರ ಮಾಜಿ ಕ್ರಿಕೆಟಿಗ
ಬಿಸಿಸಿಐ ಅಧಿಕಾರಿ ಹೇಳಿದ್ದೇನು?
“ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಸದ್ಯ ಫಿಟ್ ಆಗಿಲ್ಲ. ಅಫ್ಘಾನಿಸ್ತಾನ ಸರಣಿಯ ಆಧಾರದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಐಪಿಎಲ್ ಮೊದಲ ತಿಂಗಳ ಪ್ರದರ್ಶನದ ಆಧಾರದ ಮೇಲೆ ಎಲ್ಲವನ್ನೂ ನಿರ್ಧರಿಸಲಾಗುತ್ತದೆ” ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಗಾಯದಿಂದಾಗಿ ತಂಡದಿಂದ ಹೊರಗಿದ್ದಾರೆ. ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಇವರಿಬ್ಬರೂ ಕಳೆದುಕೊಳ್ಳಲಿದ್ದಾರೆ. ಇದೇ ವೇಳೆ ಪ್ರಸ್ತುತ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಹೆಚ್ಚಿನ ಆಟಗಾರರು ಸ್ವದೇಶಿ ಸರಣಿಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ.