ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ ಬಳಿಕ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ; 4 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ ಪ್ರಕಟ
ಕನ್ನಡ ಸುದ್ದಿ  /  ಕ್ರಿಕೆಟ್  /  ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ ಬಳಿಕ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ; 4 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ ಪ್ರಕಟ

ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ ಬಳಿಕ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ; 4 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ ಪ್ರಕಟ

South Africa vs India: ನವೆಂಬರ್‌ ತಿಂಗಳಲ್ಲಿ ನಾಲ್ಕು ಪಂದ್ಯಗಳ ಟಿ20 ಸರಣಿಗಾಗಿ ಭಾರತೀಯ ಕ್ರಿಕೆಟ್‌ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿ ಮುಗಿದ ನಂತರವೂ ಟೀಮ್‌ ಇಂಡಿಯಾ ವಿವಿಧ ಸರಣಿಗಳಲ್ಲಿ ಆಡಲಿದೆ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ; 4 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ ಪ್ರಕಟ
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ; 4 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ ಪ್ರಕಟ (File)

ಟಿ20 ವಿಶ್ವಕಪ್‌ ಪಂದ್ಯಾವಳಿ ಅಂತ್ಯವಾದ ಬಳಿಕವೂ, ಭಾರತ ಕ್ರಿಕೆಟ್‌ ತಂಡವು ಮೇಲಿಂದ ಮೇಲೆ ವಿವಿಧ ಸರಣಿಗಳಲ್ಲಿ ಆಡಲಿದೆ. ವಿಶ್ವಕಪ್‌ ಮುಗಿದ ಬೆನ್ನಲ್ಲೇ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡವು, ಆ ಬಳಿಕ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಹಾಗೂ ಟಿ20 ಸರಣಿಯಲ್ಲಿ ಆಡಲಿದೆ. ಅದಾದ ಬೆನ್ನಲ್ಲೇ ನ್ಯೂಜಿಲ್ಯಾಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇದಾದ ನಂತರ ನವೆಂಬರ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾ (South Africa vs India) ಪ್ರವಾಸ ಕೈಗೊಳ್ಳಲಿದ್ದು, ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬಿಸಿಸಿಐ ಘೋಷಿಸಿದೆ.

2023-24ರ ಋತುವಿನಲ್ಲಿ ಎಲ್ಲಾ ಮೂರು ಸ್ವರೂಪಗಳ ಪಂದ್ಯಗಳಿಗೆ ಹರಿಣಗಳ ನಾಡಿಗೆ ಪ್ರವಾಸ ಮಾಡಿದ್ದ ಭಾರತವು, ಇದೀಗ ಈ ಬಾರಿ ಮತ್ತೊಮ್ಮೆ ಸತತ ಎರಡನೇ ಬಾರಿಗೆ ಭೇಟಿ ನೀಡಲಿದೆ. ಸರಣಿಯು ನವೆಂಬರ್ 8ರಂದು ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ಮೊದಲ ಟಿ20 ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ನವೆಂಬರ್ 10ರಂದು ಎರಡನೇ ಪಂದ್ಯ ನಡೆಯಲಿದ್ದು, ನವೆಂಬರ್ 13ರಂದು ಸೆಂಚೂರಿಯನ್ ಹಾಗೂ ನವೆಂಬರ್ 15ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಂತರದ ಪಂದ್ಯಗಳು ನಡೆಯಲಿವೆ.‌

ದಕ್ಷಿಣ ಆಫ್ರಿಕಾ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

  • ನವೆಂಬರ್ 8: ಮೊದಲ ಟಿ20 ಪಂದ್ಯ, ಕಿಂಗ್ಸ್‌ಮೀಡ್ ಕ್ರೀಡಾಂಗಣ, ಡರ್ಬನ್‌.
  • ನವೆಂಬರ್ 10: 2ನೇ ಟಿ20 ಪಂದ್ಯ, ಸೇಂಟ್ ಜಾರ್ಜ್ಸ್ ಪಾರ್ಕ್, ಗ್ಕೆಬರ್ಹಾ.
  • ನವೆಂಬರ್ 13: 3ನೇ ಟಿ20 ಪಂದ್ಯ, ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್.
  • ನವೆಂಬರ್ 15: 4ನೇ ಟಿ20 ಪಂದ್ಯ, ದಿ ವಾಂಡರರ್ಸ್ ಸ್ಟೇಡಿಯಂ, ಜೊಹಾನ್ಸ್‌ಬರ್ಗ್‌.

ಕಳೆದ ವರ್ಷ ಉಭಯ ತಂಡಗಳ ನಡುವೆ ಮೂರೂ ಮಾದರಿಯ ಸರಣಿ ನಡೆದಿತ್ತು. ಟಿ20 ಸರಣಿಯು 1-1 ಅಂತರದಿಂದ ಡ್ರಾದಲ್ಲಿ ಕೊನೆಗೊಂಡಿತು. ಏಕೆಂದರೆ ಡರ್ಬನ್‌ನಲ್ಲಿ ನಡೆಯಬೇಕಿದ್ದ ಪಂದ್ಯವೊಂದು ಮಳೆಯಿಂದಾಗಿ ರದ್ದಾಗಿತ್ತು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತವು ರೋಚಕವಾಗಿ 2-1 ಅಂತರದಿಂದ ಸೋಲಿಸಿತ್ತು. ಕೇಪ್‌ಟೌನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಜಯ ಸಾಧಿಸುವುದರೊಂದಿಗೆ ಟೆಸ್ಟ್ ಸರಣಿಯನ್ನು ಕೂಡಾ ಭಾರತ 1-1 ಅಂತರದಿಂದ ಡ್ರಾ ಸಾಧಿಸಿತ್ತು.

2023ರ ಏಕದಿನ ವಿಶ್ವಕಪ್ ಬಳಿಕ ನಡೆದ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಸರಣಿಯಿಂದ ಹೊರಗುಳಿದಿದ್ದರು.

ಈ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಮರಳಲಿರುವ ಭಾರತ ಆ ಬಳಿಕ ಮಹತ್ವದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದೆ.

Whats_app_banner