ನಾಯಕ ರೋಹಿತ್​ ಶರ್ಮಾ ಗುಡುಗು; ಪಾಕಿಸ್ತಾನ ವಿರುದ್ಧ ಭಾರತ ಅಜೇಯ ಗೆಲುವಿನ ಓಟ
ಕನ್ನಡ ಸುದ್ದಿ  /  ಕ್ರಿಕೆಟ್  /  ನಾಯಕ ರೋಹಿತ್​ ಶರ್ಮಾ ಗುಡುಗು; ಪಾಕಿಸ್ತಾನ ವಿರುದ್ಧ ಭಾರತ ಅಜೇಯ ಗೆಲುವಿನ ಓಟ

ನಾಯಕ ರೋಹಿತ್​ ಶರ್ಮಾ ಗುಡುಗು; ಪಾಕಿಸ್ತಾನ ವಿರುದ್ಧ ಭಾರತ ಅಜೇಯ ಗೆಲುವಿನ ಓಟ

India vs Pakistan, ICC Cricket World Cup 2023: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ದಿಗ್ವಿಜಯ ಸಾಧಿಸಿದೆ. ಸತತ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಪರಾಕ್ರಮ ಮೆರೆದಿದೆ.

ಅರ್ಧಶತಕ ಸಿಡಿಸಿ ಸಂಭ್ರಮಿಸಿದ ರೋಹಿತ್​ ಶರ್ಮಾ.
ಅರ್ಧಶತಕ ಸಿಡಿಸಿ ಸಂಭ್ರಮಿಸಿದ ರೋಹಿತ್​ ಶರ್ಮಾ.

ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ತಂಡ ಮಣಿಸಿದೆ. ಆ ಮೂಲಕ ಸತತ ಮೂರನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಹಾಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕ್ ಎದುರು ಅಜೇಯ ಗೆಲುವಿನ ಓಟ ಮುಂದುವರೆಸಿದೆ. 1992ರಿಂದ ಇಲ್ಲಿಯವರೆಗೂ ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಸತತ 8ನೇ ಗೆಲುವು ದಾಖಲಿಸಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್​​-ಬೌಲಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಪಡೆ 7 ವಿಕೆಟ್​​ಗಳ ದಿಗ್ವಿಜಯ ಸಾಧಿಸಿತು.

ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ಭಾರತೀಯ ಬೌಲರ್​ಗಳ ಆರ್ಭಟಕ್ಕೆ ತತ್ತರಿಸಿತು. ಬಾಬರ್ ಅಜಮ್ (50), ಮೊಹಮ್ಮದ್ ರಿಜ್ವಾನ್ (49) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಪಾಕ್ 42.5 ಓವರ್​​ಗಳಲ್ಲಿ 191 ರನ್​ಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ, ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಗೆ ಬೀರಿತು. ನಾಯಕ ರೋಹಿತ್​ ಶರ್ಮಾ, ಮತ್ತೊಂದು ಆಕ್ರಮಣಕಾರಿ ಇನ್ನಿಂಗ್ಸ್​​ ಆಡುವ ಮೂಲಕ ಗಮನ ಸೆಳೆದರು. ಅವರ ಅದ್ಭುತ ಆಟದ ಹಿನ್ನೆಲೆಯಲ್ಲಿ ಭಾರತ 30.3 ಓವರ್​​ಗಳಲ್ಲಿ ಗೆಲುವಿನ ನಗೆ ಬೀರಿತು.

ರೋಹಿತ್ ಶರ್ಮಾ ಮತ್ತೆ ಅಬ್ಬರ

192 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಡೆಂಗ್ಯು ಜ್ವರದ ಹಿನ್ನೆಲೆ ಕಳೆದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಶುಭ್ಮನ್ ಗಿಲ್, ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯದಲ್ಲಿ 16 ರನ್ ಗಳಿಸಿ ಔಟಾದರು. ಬಳಿಕ ವಿರಾಟ್ ಕೊಹ್ಲಿ ಸಹ 16 ರನ್​ ಗಳಿಸಿ ನಿರಾಸೆ ಮೂಡಿಸಿದರು. ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿ ತಲಾ ಒಂದೊಂದು ವಿಕೆಟ್ ಪಡೆದರು. ಆದರೆ ಆರಂಭದಿಂದಲೂ ಬೌಂಡರಿ-ಸಿಕ್ಸರ್​​ಗಳಿಂದಲೇ ಬೌಲರ್​​ಗಳನ್ನು ಡೀಲ್ ಮಾಡುತ್ತಿದ್ದ ರೋಹಿತ್​, ಸ್ಫೋಟಕ ಅರ್ಧಶತಕ ಸಿಡಿಸಿದರು. ಅಲ್ಲದೆ ಕೊಹ್ಲಿಯೊಂದಿಗೆ ಸೇರಿ 2ನೇ ಅರ್ಧಶತಕದ ಜೊತೆಯಾಟವಾಡಿದರು.

ಶ್ರೇಯಸ್ ಅಯ್ಯರ್ ಅರ್ಧಶತಕ

ಅರ್ಧಶತಕದ ಬಳಿಕವೂ ಬೌಲರ್​​ಗಳಿಗೆ ಚಿಂದಿ ಉಡಾಯಿಸಿದ ರೋಹಿತ್​ ಶರ್ಮಾ ಶತಕದ ಅಂಚಿನಲ್ಲಿ ಶಾಹೀನ್ ಅಫ್ರಿದಿ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. 63 ಎಸೆತಗಳಲ್ಲಿ 86 ರನ್ ಚಚ್ಚಿದರು. ಅವರ ಸ್ಪೋಟಕ ಇನ್ನಿಂಗ್ಸ್​​​ನಲ್ಲಿ 6 ಬೌಂಡರಿ, 6 ಸಿಕ್ಸರ್​​​ಗಳಿವೆ. ರೋಹಿತ್ ಔಟಾದ ಸಂದರ್ಭದಲ್ಲಿ ಭಾರತ ಗೆಲುವಿಗೆ 36 ರನ್​ಗಳ ಅಗತ್ಯ ಇತ್ತು. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಚೊಚ್ಚಲ ಏಕದಿನ ವಿಶ್ವಕಪ್ ಅರ್ಧಶತಕ ಸಿಡಿಸಿ ಮಿಂಚಿದರು. 62 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. ಅಲ್ಲದೆ, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಎಲ್ ರಾಹುಲ್ ಅಜೇಯ 19 ರನ್ ಗಳಿಸಿದರು.

ಪಾಕಿಸ್ತಾನ 191ಕ್ಕೆ ಸರ್ವಪತನ

ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಬೃಹತ್ ಗುರಿ ಕಲೆ ಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಭಾರತೀಯ ಬೌಲರ್​​ಗಳು ಅದಕ್ಕೆ ಅವಕಾಶ ನೀಡಲಿಲ್ಲ. ನಾಯಕ ಬಾಬರ್​ ಅಜಮ್ ಅರ್ಧಶತಕ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 49 ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು. ಅಬ್ದುಲ್ಲಾ ಶಫೀಕ್ (20), ಇಮಾಮ್ ಉಲ್ ಹಕ್ (36), ಸೌದ್ ಶಕೀಲ್ (6), ಇಫ್ತಿಕಾರ್ ಅಹ್ಮದ್ (4), ಶಾದಾಬ್ ಖಾನ್ (2), ಮೊಹಮ್ಮದ್ ನವಾಜ್ (4), ಹಸನ್ ಅಲಿ (12), ಹ್ಯಾರಿಸ್ ರೌಫ್ (2) ನಿರಾಸೆ ಮೂಡಿಸಿದರು. ಭಾರತದ ಪರ ಬುಮ್ರಾ, ಜಡೇಜಾ, ಸಿರಾಜ್, ಕುಲ್ದೀಪ್, ಹಾರ್ದಿಕ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಪರಿಣಾಮ ಪಾಕ್ 191 ರನ್​ಗಳಿಗೆ ಸರ್ವಪತನ ಕಂಡಿತು.

Whats_app_banner