IML T20: ಭುಜಕ್ಕೆ ಭುಜ ಕೊಟ್ಟು ಯುವರಾಜ್ ಸಿಂಗ್ - ಟಿನೊ ಬೆಸ್ಟ್ ವಾಗ್ವಾದ; ಕಿತ್ತಾಟದ ವಿಡಿಯೋ ವೈರಲ್
ರಾಯ್ಪುರದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಫೈನಲ್ನಲ್ಲಿ ಯುವರಾಜ್ ಸಿಂಗ್ ಮತ್ತು ಟಿನೊ ಬೆಸ್ಟ್ ನಡುವೆ ನಡೆದ ವಾಗ್ವಾದದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರಾಯಪುರದಲ್ಲಿ ಭಾನುವಾರ (ಮಾರ್ಚ್ 16) ಮುಕ್ತಾಯಗೊಂಡ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025ರ ಫೈನಲ್ನಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿದ ಇಂಡಿಯಾ ಮಾಸ್ಟರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಂದ್ಯವನ್ನು ಗೆದ್ದಿದ್ದರ ಹೊರತಾಗಿ ಹೆಚ್ಚು ಸದ್ದು ಮಾಡಿದ್ದು ಯುವರಾಜ್ ಸಿಂಗ್ ಮತ್ತು ಟಿನೊ ಬೆಸ್ಟ್ ನಡುವಿನ ಜಗಳ. ಇವರಿಬ್ಬರ ನಡುವಿನ ಜೋರು ಕಿತ್ತಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಮೊದಲು ಬ್ಯಾಟಿಂಗ್ ನಡೆಸಿತು. ಲೆಂಡ್ಲ್ ಸಿಮನ್ಸ್ (57) ಅವರ ಅರ್ಧಶತಕ ಮತ್ತು ಡ್ವೇನ್ ಸ್ಮಿತ್ (45) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಇಂಡಿಯಾ ಮಾಸ್ಟರ್ಸ್ ಪರ ವಿನಯ್ ಕುಮಾರ್ 3 ವಿಕೆಟ್ ಕಿತ್ತರೆ, ಶಹಬಾಜ್ ನದೀಮ್ 2 ವಿಕೆಟ್ ಪಡೆದರು. ಪರಿಣಾಮ ಎದುರಾಳಿಯನ್ನು ಕಟ್ಟಿಹಾಕಲು ನೆರವಾಯಿತು.
ಈ ಗುರಿ ಬೆನ್ನಟ್ಟಿದ ಭಾರತ ಅಂಬಾಟಿ ರಾಯುಡು ಅವರ 74 ರನ್ಗಳ ಸಹಾಯದಿಂದ ಭಾರತ 17 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಫೈನಲ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 25 ರನ್ ಗಳಿಸಿದ್ದಾರೆ. ಯುವರಾಜ್ 13 ರನ್, ಸ್ಟುವರ್ಟ್ ಬಿನ್ನಿ 16 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ಇಂಡಿಯಾ ಮಾಸ್ಟರ್ಸ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು.
ಯುವಿ ಮತ್ತು ಟಿನೊ ನಡುವೆ ವಾಕ್ಸಮರ
ಫೈನಲ್ ಪಂದ್ಯದಲ್ಲಿ ಭಾರತ ಚೇಸಿಂಗ್ ನಡೆಸುವ ಅವಧಿಯಲ್ಲಿ ಯುವರಾಜ್ ಸಿಂಗ್ ಮತ್ತು ಟಿನೊ ಬೆಸ್ಟ್ ಮಧ್ಯೆ ದಿಢೀರ್ ವಾಕ್ಸಮರ ಏರ್ಪಟ್ಟಿತು. ಮಾತಿಗೆ ಮಾತು ಬೆಳೆಸಿದ ಇಬ್ಬರ ನಡುವೆ ನೋಡ ನೋಡುತ್ತಿದ್ದಂತೆ ವಾಗ್ವಾದ ತಾರಕಕ್ಕೇರಿತು. ವೆಸ್ಟ್ ಇಂಡೀಸ್ ಮಾಸ್ಟರ್ಸ್ ನಾಯಕ ಬ್ರಿಯಾನ್ ಲಾರಾ ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಮಾಡಿದರು. ಬಳಿಕ ಅಂಬಾಟಿ ರಾಯುಡು ಕೂಡ ಪರಿಸ್ಥಿತಿ ತಿಳಿಗೊಳಿಸಿದರು. ವಾಗ್ದಾದ ನಿಲ್ಲಿಸುವಂತೆ ಟಿನೊ ಬೆಸ್ಟ್ಗೆ ಮನವಿ ಮಾಡಿದರು.
ಈ ಘಟನೆ ನಡೆದಿದ್ದು 14ನೇ ಓವರ್ನಲ್ಲಿ. ಟಿನೊ ಬೆಸ್ಟ್ ತನ್ನ ಓವರ್ ಅನ್ನು ಪೂರ್ಣಗೊಳಿಸಿದ ನಂತರ 14ನೇ ಓವರ್ ಅನ್ನು ಆಶ್ಲೇ ನರ್ಸ್ ಬೌಲಿಂಗ್ ಮಾಡಲು ಬಂದರು. ಮೊದಲ ಎಸೆತದಲ್ಲೇ ಅಂಬಟಿ ರಾಯುಡು ಭರ್ಜರಿ ಸಿಕ್ಸ್ ಸಿಡಿಸಿದರು. ಈ ವೇಳೆ ಥರ್ಟಿ ಯಾರ್ಡ್ ಸರ್ಕಲ್ನಲ್ಲಿದ್ದ ಟಿನೊ, ಯುವಿ ಮುಖವನ್ನು ನೋಡುತ್ತಾ ಗೊಣಗಿದಂತೆ ಕಂಡರು. ಆದರೆ, ಇದು ಯುವರಾಜ್ಗೆ ಸರಿ ಎನಿಸಲಿಲ್ಲ. ಹಿಂದೆ ಮುಂದೆ ಮಾತನಾಡದೆ ಸಮರಕ್ಕೆ ಇಳಿದೇ ಬಿಟ್ಟರು.
ಇಬ್ಬರು ಭುಜಕ್ಕೆ ಭುಜ ನೀಡುವ ಮೂಲಕ ವಾಕ್ಸಮರ ನಡೆಸಿದರು. ಇನ್ನೇನು ಪರಿಸ್ಥಿತಿ ಕೈ ಮೀರುತ್ತದೆ ಎನ್ನುವಷ್ಟರಲ್ಲಿ ಸಹ ಆಟಗಾರರು ಮತ್ತು ಅಂಪೈರ್ಗಳು ಮಧ್ಯ ಪ್ರವೇಶಿಸಿ ಶಾಂತಗೊಳಿಸುವಲ್ಲಿ ಯಶಸ್ವಿಯಾದರು. ಪಂದ್ಯದಲ್ಲಿ ಬೌಂಡರಿ ಸಿಡಿಸಿದ ಬಳಿಕ ಟಿನೊ ಕಡೆಗೆ ಯುವಿ ಬ್ಯಾಟ್ ತೋರಿಸಿದ್ದರು. ಇದು 2007ರ ಟಿ20 ವಿಶ್ವಕಪ್ ನೆನಪಿಸಿತು. ಅಂದು ಆಂಡ್ರ್ಯೂ ಫ್ಲಿಂಟಾಫ್ ಅವರೊಂದಿಗೆ ಜಗಳವಾಡಿದ ನಂತರ ಸ್ಟುವರ್ಟ್ ಬ್ರಾಡ್ಗೆ ಸತತ 6 ಸಿಕ್ಸರ್ ಬಾರಿಸಿ ಬ್ಯಾಟ್ ತೋರಿಸಿದ್ದರು.
ಕೊನೆಗೆ ತಮಾಷೆ ಮಾಡಿದ ಯುವರಾಜ್
ಇದಾದ ಕೆಲವೇ ಕ್ಷಣಗಳಲ್ಲಿ ಯುವರಾಜ್ ಮತ್ತು ಟಿನೊ ಬೆಸ್ಟ್ ನಗುತ್ತಾ ಮಾತನಾಡಿದ್ದು ಕಂಡು ಬಂತು. ಟೈಮ್-ಔಟ್ನಲ್ಲಿ ಯುವರಾಜ್ ತಮಾಷೆಯಾಗಿ ಟಿನೊ ಬೆಸ್ಟ್ ಅವರ ಬೆನ್ನನ್ನು ತಟ್ಟುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಕೂಡ ವೈರಲ್ ಆಗಿದೆ.