ಕನ್ನಡ ಸುದ್ದಿ  /  Cricket  /  Tendulkar Ganguly Dravid Played Under Ms Dhoni Ashwin Colossal Remark On Brutal Hardik Pandya Trolling Rohit Sharma Prs

ಧೋನಿ ನಾಯಕತ್ವದಲ್ಲಿ ಸಚಿನ್, ಗಂಗೂಲಿ, ದ್ರಾವಿಡ್ ಆಡಿಲ್ಲವೇ; ನಿಮ್ಮದು ಹುಚ್ಚುತನ ಎಂದು ಹಾರ್ದಿಕ್ ಟ್ರೋಲಿಗರಿಗೆ ಅಶ್ವಿನ್ ತರಾಟೆ

Ravichandran Ashwin: ಹಾರ್ದಿಕ್ ಪಾಂಡ್ಯ ವಿರುದ್ಧ ತೀವ್ರ ಟ್ರೋಲ್ ಮಾಡುತ್ತಿರುವವರಿಗೆ ತರಾಟೆ ತೆಗೆದುಕೊಂಡಿರುವ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎಂಐ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.

ಹಾರ್ದಿಕ್ ಪಾಂಡ್ಯ ವಿರುದ್ಧ ಟ್ರೋಲ್ ಮಾಡುತ್ತಿರುವವರಿಗೆ ರವಿಚಂದ್ರನ್ ಅಶ್ವಿನ್ ತರಾಟೆ.
ಹಾರ್ದಿಕ್ ಪಾಂಡ್ಯ ವಿರುದ್ಧ ಟ್ರೋಲ್ ಮಾಡುತ್ತಿರುವವರಿಗೆ ರವಿಚಂದ್ರನ್ ಅಶ್ವಿನ್ ತರಾಟೆ.

2024ರ ಐಪಿಎಲ್​ ಹಾರ್ದಿಕ್ ಪಾಂಡ್ಯಗೆ (Hardik Pandya) ಕಠಿಣ ಆರಂಭವಾಗಿದೆ. ಐದು ಬಾರಿ ಟ್ರೋಫಿ ವಿಜೇತರಾದ ರೋಹಿತ್ ಶರ್ಮಾ (Rohit Sharma) ಅವರನ್ನು ಕೆಳಗಿಳಿಸಿದ ನಂತರ ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್​ ಮೂಲಕ ಫ್ರಾಂಚೈಸಿ ಸೇರಿರುವ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬೈ ಇಂಡಿಯನ್ಸ್ (Mumbai Indians) ನಾಯಕತ್ವ ವಹಿಸಲಾಯಿತು. ಆದರೆ ಹಾರ್ದಿಕ್​ರನ್ನು ಹಿಟ್​ಮ್ಯಾನ್ ಅಭಿಮಾನಿಗಳು ಕ್ರೂರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಕಣಕ್ಕಿಳಿದ ಪಂದ್ಯದಲ್ಲಿ ಹಾರ್ದಿಕ್​ಗೆ ಮುಖಭಂಗಕ್ಕೆ ಒಳಗಾಗುವಂತೆ ಮಾಡಿದ್ದರು. ಮೈದಾನದ ತುಂಬೆಲ್ಲಾ ರೋಹಿತ್.. ರೋಹಿತ್ ಎಂದು ಕೂಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ನಟ ಸೂನ್ ಸೂದ್ ಬಳಿಕ ಆರ್​ಆರ್​ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾರ್ದಿಕ್​ ಬೆಂಬಲಕ್ಕೆ ನಿಂತಿದ್ದಾರೆ.

ವಿಚಿತ್ರವಾದ ನಾಯಕತ್ವದ ತಂತ್ರಗಳಿಗಾಗಿ ಹಾರ್ದಿಕ್​ರನ್ನು ತಜ್ಞರು ಸಹ ಟೀಕಿಸಿದ್ದಾರೆ. ಜಿಟಿ ವಿರುದ್ಧದ ಆಟದಲ್ಲಿ ಟಿಮ್ ಡೇವಿಡ್​ಗೆ ಬಡ್ತಿ ನೀಡಿದ್ದ ಕಾರಣ ಮುಂಬೈ ಸೋತಿತ್ತು ಎಂದು ಕ್ರಿಕೆಟ್ ಪಂಡಿತರು ಟೀಕಿಸಿದ್ದರು. ಅದೇ ರೀತಿ, ಎಸ್‌ಆರ್‌ಎಚ್ ಬ್ಯಾಟರ್‌ಗಳು ಮುಂಬೈ ದಾಳಿಗೆ ಬೆಂಡೆತ್ತುವಾಗ ಜಸ್ಪ್ರೀತ್ ಬುಮ್ರಾಗೆ ಬೌಲಿಂಗ್​ ನೀಡದ ಹಾರ್ದಿಕ್ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಹಾರ್ದಿಕ್ ಬೆಂಬಲಕ್ಕೆ ನಿಂತ ಅಶ್ವಿನ್

ಹಾರ್ದಿಕ್ ವಿರುದ್ಧ ತೀವ್ರ ಟ್ರೋಲ್ ಮಾಡುತ್ತಿರುವವರಿಗೆ ತರಾಟೆ ತೆಗೆದುಕೊಂಡಿರುವ ಭಾರತದ ಸ್ಪಿನ್ನರ್ ಆರ್ ಅಶ್ವಿನ್, ಎಂಐ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲಾ ಆಟಗಾರರು ಒಂದೇ ದೇಶದ ಭಾರತದಿಂದ ಬಂದವರು ಎಂದು ನೆನಪಿಸಿದ್ದಾರೆ. ದಿಗ್ಗಜ ಆಟಗಾರರು ಅಂದು ಯುವ ಆಟಗಾರನಾಗಿದ್ದ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿದ್ದ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅಭಿಮಾನಿಗಳ ನಡುವೆ ಹಲವು ಬಾರಿ ಘರ್ಷಣೆ ಉಂಟಾಗುತ್ತಿರುತ್ತದೆ. ಈ ಲೆಜೆಂಡರಿ ಆಟಗಾರರು ಎಲ್ಲಿಂದ ಬಂದರು? ಅವರೆಲ್ಲರೂ ಭಾರತ ತಂಡದ ದಿಗ್ಗಜರು ತಾನೆ. ಬೇರೆ ಯಾವುದೇ ದೇಶದ ಅಭಿಮಾನಿಗಳು ಈ ರೀತಿ ಹೊಡೆದಾಡುವುದನ್ನು ನೀವು ನೋಡಿದ್ದೀರಾ? ಇದು ಹುಚ್ಚುತನ. ಇದು ಕ್ರಿಕೆಟ್. ನಾನು ಅದನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ ಎಂದಿದ್ದಾರೆ ಅಶ್ವಿನ್.

ಅಭಿಮಾನಿಗಳ ವರ್ತನೆ ಸಂಪೂರ್ಣ ಸಿನಿಮಾ ಸಂಸ್ಕೃತಿಯಾಗಿದೆ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿರುವ ಅಶ್ವಿನ್, ಪ್ರಸ್ತುತ ಅಭಿಮಾನಿಗಳ ನಡುವಿನ ಘರ್ಷಣೆ ತುಂಬಾ ಕೊಳಕು ಮಟ್ಟದ್ದು. ಒಬ್ಬ ಕ್ರಿಕೆಟಿಗನ ವಿರುದ್ಧ ಏಕೆ ಬೊಬ್ಬೆ ಹೊಡೆಯಬೇಕು? ಇದು ನಿಜವಾಗಲೂ ನನಗೆ ಅರ್ಥವಾಗುತ್ತಿಲ್ಲ. ನೀವು ಆಟಗಾರನನ್ನು ಇಷ್ಟಪಡದಿದ್ದರೆ, ಅದರ ಕುರಿತು ತಂಡವು ಏಕೆ ವಿವರಿಸಬೇಕು ಎಂದು ಹಾರ್ದಿಕ್ ಪಾಂಡ್ಯ ಹೆಸರು ಉಲ್ಲೇಖಿಸದೆ ಅವರನ್ನು ಬೆಂಬಲಿಸಿದ್ದಾರೆ.

ಧೋನಿ ನಾಯಕತ್ವದಲ್ಲಿ ದಿಗ್ಗಜರು ಆಡಲಿಲ್ಲವೇ ಎಂದ ಅಶ್ವಿನ್

ಈ ಹಿಂದೆಯೂ ನಾಯಕತ್ವ ಬದಲಾವಣೆ ಸಂಭವಿಸಿದೆಯಲ್ಲವೇ? ಸೌರವ್ ಗಂಗೂಲಿ ಅವರು ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಆಡಿದ್ದಾರೆ. ಈ ಇಬ್ಬರು ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಆಡಿದ್ದಾರೆ. ಈ ಮೂವರು ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಆಡಿದ್ದಾರೆ. ಇವರೆಲ್ಲರೂ ಎಂಎಸ್ ಧೋನಿ ಅಡಿಯಲ್ಲಿ ಆಡಿದ್ದಾರೆ. ಧೋನಿ ಅಡಿಯಲ್ಲಿದ್ದಾಗ, ಈ ಆಟಗಾರರು ಕ್ರಿಕೆಟ್ ದಿಗ್ಗಜರಾಗಿದ್ದರು. ಆದರೆ ನೀವ್ಯಾಕೆ ಇಂತಹ ವರ್ತನೆ ತೋರುತ್ತೀರಿ. ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅಭಿಮಾನಿಗಳಿಗೆ ಸಮಾಧಾನ ಮಾಡಿದ್ದಾರೆ.