ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟಿಗ ಮೊಹಮ್ಮದ್ ಶಮಿ ಮದುವೆಯಾಗುತ್ತಾರಾ? ಮೂಗುತಿ ಸುಂದರಿ ತಂದೆಯಿಂದ ಸ್ಪಷ್ಟನೆ
ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಒಬ್ಬರಿಗೊಬ್ಬರು ಭೇಟಿಯಾಗಿಯೇ ಇಲ್ಲ. ಇದೇಲ್ಲಾ ಸುಳ್ಳು ಸುದ್ದಿ ಎಂದು ಟೆನಿಸ್ ಆಟಗಾರ್ತಿ ಸಾನಿಯಾ ತಂದೆ ಸ್ಪಷ್ಟಪಡಿಸಿದ್ದಾರೆ.
ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಈ ವರ್ಷದ ಆರಂಭದಲ್ಲಿ ತಮ್ಮ ಪತಿ ಹಾಗೂ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ಬೇರ್ಪಟ್ಟರು. ಅದಾದ ಬಳಿಕ ಹೈದರಾಬಾದ್ ಮೂಲದ ಆಟಗಾರ್ತಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಸುದ್ದಿಯಲ್ಲಿದ್ದರು. ಇದೀಗ ಮತ್ತೊಮ್ಮೆ ಸಾನಿಯಾ ಸುದ್ದಿಯಲ್ಲಿದ್ದಾರೆ. ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರೊಂದಿಗೆ ಸಾನಿಯಾ ಮದುವೆಯಾಗಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ. ಹೀಗಾಗಿ ಭಾರತದ ಟೆನಿಸ್ ಆಟಗಾರ್ತಿ ಈಗ ಮತ್ತೆ ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದ್ದಾರೆ. ಈ ನಡುವೆ ಸಾನಿಯಾ ಹಾಗೂ ಶಮಿ ಮದುವೆ ವದಂತಿ ಕುರಿತು ಮೂಗುತಿ ಸುಂದರಿಯ ತಂದೆ ಇಮ್ರಾನ್ ಮಿರ್ಜಾ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಸಾನಿಯಾ ಅವರು ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರಿಂದ ವರ್ಷದ ಆರಂಭದಲ್ಲಿ ವಿಚ್ಛೇದನ ಪಡೆದರು. ಅದಾದ ಬಳಿಕ ಅವರು ತಮ್ಮ ತವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಅತ್ತ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ ಕೂಡ ತಮ್ಮ ಪತ್ನಿ ಹಸಿನ್ ಜಹಾನ್ ಅವರಿಂದ ಬೇರ್ಪಟ್ಟಿದ್ದಾರೆ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ಹೆಸರು ಮುನ್ನೆಲೆಗೆ ಬಂದಿದೆ. ಆದರೆ ಮದುವೆ ವದಂತಿಗಳನ್ನು ಸಾನಿಯಾ ತಂದೆ ಅಲ್ಲಗಳೆದಿದ್ದಾರೆ.
ಮದುವೆ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. “ಇದೆಲ್ಲವೂ ಸುಳ್ಳು. ಸಾನಿಯಾ ಶಮಿ ಅವರನ್ನು ಭೇಟಿಯೇ ಮಾಡಿಲ್ಲ,” ಎಂದು ಇಮ್ರಾನ್ ಮಿರ್ಜಾ ಸುದ್ದಿಸಂಸ್ಥೆ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರ ಪ್ರದರ್ಶನವು ಭಾರತ ತಂಡವು ಫೈನಲ್‌ಗೆ ಲಗ್ಗೆ ಇಡಲು ನೆರವಾಗಿತ್ತು. ಹೀಗಾಗಿ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮದುವೆ ಕುರಿತಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕಥೆ ಹೆಣೆದಿದ್ದಾರೆ. ಇದು ಊಹೆಯಲ್ಲದೆ ಬೇರೇನೂ ಅಲ್ಲ ಎಂದು ಸಾನಿಯಾ ಮಿರ್ಜಾ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಸಾನಿಯಾ, ಒಂದು ವರ್ಷದ ಹಿಂದೆ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದರು. ಇತ್ತೀಚೆಗೆ ಹಜ್ ಯಾತ್ರೆ ಕೈಗೊಂಡಿರುವ ಕುರಿತು ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.
ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ ವೈರಲ್ ಫೋಟೋ
ಮದುವೆಯ ಉಡುಗೆಯಲ್ಲಿ ಶಮಿ ಮತ್ತು ಮಿರ್ಜಾ ಅವರ ಫೋಟೋ ವೈರಲ್ ಆಗಿದ್ದೇ ಮದುವೆ ವದಂತಿಗಳಿಗೆ ಕಾರಣವಾಯ್ತು. ಆದರೆ ಆ ಚಿತ್ರ ಅಸಲಿಯಲ್ಲ. ನಕಲಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಬ್ಬರ ಬಗ್ಗೆ ಮದುವೆ ವದಂತಿ ಅಂತರ್ಜಾಲದಲ್ಲಿ ಜ್ವಾಲೆಯಂತೆ ಹರಡಿದವು. ಈ ಫೋಟೋ 2010ರಲ್ಲಿ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟಿಗ ಶೋಯೆಬ್ ಮಲಿಕ್ ವಿವಾಹವಾದ ಫೋಟೋವಾಗಿದೆ. ಆದರೆ, ಮಲಿಕ್ ಅವರ ಫೋಟೋ ಬದಲಿಗೆ ಶಮಿ ಅವರನ್ನು ಎಡಿಟ್ ಮಾಡಿ ಹಾಕಲಾಗಿದೆ. ಇದು ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಗೌತಮ್ ಗಂಭೀರ್ ಅಲ್ಲ, ಜಿಂಬಾಬ್ವೆ ಪ್ರವಾಸಕ್ಕೆ ಭಾರತದ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ ಸಾಧ್ಯತೆ