2.27 ಮೀಟರ್ ಜಿಗಿದು ಸಖತ್ ಕ್ಯಾಚ್ ಹಿಡಿದ ಧೋನಿ; 2019ರಲ್ಲಿ ರನೌಟ್ ಬದಲಿಗೆ ಈ ರೀತಿ ಡೈ ಹಾಕಿದ್ರೆ ವಿಶ್ವಕಪ್ ಗೆಲ್ತಿದ್ವಿ ಎಂದ ನೆಟ್ಟಿಗರು
MS Dhoni: ಗುಜರಾತ್ ಟೈಟಾನ್ಸ್ ವಿರುದ್ಧ ಎಂಎಸ್ ಧೋನಿ ಅವರು 2.27 ಮೀಟರ್ ಜಿಗಿದು ಸಖತ್ ಕ್ಯಾಚ್ ಹಿಡಿದಿದ್ದಾರೆ. ಈ ಕ್ಯಾಚ್ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬೆನ್ನಲ್ಲೇ ಒಂದು ವರ್ಗ, ಮಾಹಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರಿಗೀಗ 42 ವರ್ಷ ವಯಸ್ಸು. ಆದರೂ ಯುವಕ ಕ್ರಿಕೆಟಿಗರನ್ನೂ ಮೀರಿಸುವ ಫಿಟ್ನೆಸ್ ಹೊಂದಿರುವ ಮಾಹಿಗೆ 42 ಎಂಬುದು ಕೇವಲ ಅಂಕಿ-ಸಂಖ್ಯೆ ಅಷ್ಟೆ. ಈ ವಯಸ್ಸಲ್ಲೂ ಯುವ ಆಟಗಾರರನ್ನು ನಾಚಿಸುವಂಥ ಡೈವಿಂಗ್ ಕ್ಯಾಚ್ ಹಿಡಿದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಐಪಿಎಲ್ನ 7ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಧೋನಿ ಹಿಡಿದ ಫೆಂಟಾಸ್ಟಿಕ್ ಕ್ಯಾಚ್ ಎಲ್ಲೆಡೆ ವೈರಲ್ ಆಗುತ್ತಿದೆ.
ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಎರಡನೇ ಬ್ಯಾಟಿಂಗ್ ನಡೆಸಿತು. 207 ರನ್ಗಳ ಗುರಿ ಹಿಂಬಾಲಿಸಿದ ಟೈಟಾನ್ಸ್ ತಂಡದ ಪರ ವಿಜಯ್ ಶಂಕರ್ 8ನೇ ಓವರ್ನಲ್ಲಿ ಬ್ಯಾಟ್ ಬೀಸುತ್ತಿದ್ದರು. ಡೇರಿಲ್ ಮಿಚೆಲ್ ಬೌಲಿಂಗ್ನ 7.3ನೇ ಎಸೆತವನ್ನು ಎದುರಿಸದ ವಿಜಯ್ ಶಂಕರ್ ಅವರ ಬ್ಯಾಟ್ಗೆ ತಾಗಿ ಚೆಂಡು ಮೊದಲ ಸ್ಲಿಪ್ನತ್ತ ಚಿಮ್ಮಿತು. ಆದರೆ ಚಿರತೆಯಂತೆ ಹಾರಿ ಕ್ಷಣಾರ್ಧದಲ್ಲೇ ಚೆಂಡನ್ನು ತಮ್ಮ ಕೈಗಳಲ್ಲಿ ಬಂಧಿಸಿಬಿಟ್ಟರು.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ವಿಜಯ್ ಶಂಕರ್ 11 ಬಾಲ್ಗಳಲ್ಲಿ 12 ರನ್ ಗಳಿಸಿ ಔಟಾದರು. ಧೋನಿ ಹಿಡಿದ ಡೈವಿಂಗ್ ಕ್ಯಾಚ್ಗೆ ನೋಡಿ, ಒಂದು ಕ್ಷಣ ದಂಗಾಗಿ ಹೋದರು. 2.27 ಮೀಟರ್ ಜಿಗಿದು ಅದ್ಭುತ ಕ್ಯಾಚ್ ಪಡೆದ ಧೋನಿ, ಕೇವಲ 0.6 ಸೆಕೆಂಡ್‌ನಲ್ಲಿ ಚೆಂಡು ಪಡೆದಿದ್ದಾರೆ. ಸಿಎಸ್ಕೆ ಮಾಜಿ ನಾಯಕನ ಸ್ಟಾಮಿನಾಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳು ಸಂತಸದಲ್ಲಿ ಮುಳುಗಿದ್ದಾರೆ.
ಆದರೆ, ಎಂಎಸ್ ಧೋನಿ ಈ ಕ್ಯಾಚ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬೆನ್ನಲ್ಲೇ ಒಂದು ವರ್ಗ, ಮಾಹಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಈ ಕ್ಯಾಚ್ಗೂ ಮತ್ತು 2019ರ ವಿಶ್ವಕಪ್ಗೂ ಹೋಲಿಕೆ ಮಾಡಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಬಲಕ್ಕೆ ಫುಲ್ ಲೆಂಗ್ತ್ ಡೈವ್ ಮಾಡಿ, ಅದ್ಭುತವಾಗಿ ಕ್ಯಾಚ್ ಪಡೆದ ಧೋನಿ, 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಯಾಕೆ ರನೌಟ್ ಆಗಿದ್ದು ಎಂದು ಪ್ರಶ್ನಿಸಿದ್ದಾರೆ.
ಅಂದು ಏಕೆ ಜಿಗಿಯಲಿಲ್ಲ ಎಂದ ನೆಟ್ಟಿಗರು
ಕ್ಯಾಚ್ ಪಡೆಯಲು 2.27 ಮೀಟರ್ ಜಿಗಿದ ಎಂಎಸ್ ಧೋನಿ ಅವರು 2019ರಲ್ಲಿ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯಲ್ಲಿ ಇಂಚುಗಳ ಅಂತರದಲ್ಲಿ ರನೌಟ್ ಆದರು. ಆದರೆ ಧೋನಿ ಅವರು ಡೈವ್ ಮಾಡಿರಲಿಲ್ಲ. ಚೆನ್ನೈ ಪರ ಕ್ಯಾಚ್ ಹಿಡಿಯಲು ಡೈವ್ ಹೊಡೆದ ರೀತಿ ಭಾರತದ ಪರ ರನೌಟ್ ಆಗದಂತೆ ಡೈವ್ ಮಾಡಿದ್ದರೆ ಇಂದು ವಿಶ್ವಕಪ್ ಗೆಲ್ಲುತ್ತಿದ್ದೆವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಅಂದು ಫಲಿತಾಂಶ ಏನಾಗಿತ್ತು?
ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಸತತ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅದರಲ್ಲೂ ಅಂತಿಮ ಎರಡು ಓವರ್ಗಳಲ್ಲಿ ಗೆಲ್ಲಲು 32 ರನ್ ಬೇಕಿತ್ತು. ಆಗ ಕ್ರೀಸ್ನಲ್ಲಿದ್ದ ಧೋನಿ, ಹೋರಾಡುತ್ತಿದ್ದರು. ಆದರೆ, 48.3ನೇ ಓವರ್ನಲ್ಲಿ ಎರಡು ರನ್ ಕದಿಯಲು ಯತ್ನಿಸಿದ ಮಾಹಿ, ಮಾರ್ಟಿನ್ ಗಪ್ಟಿಲ್ ಡೈರೆಕ್ಟ್ ಹಿಟ್ ಮಾಡಿ ರನೌಟ್ ಮಾಡಿದರು.
ಧೋನಿ ಡೈವ್ ಮಾಡಿದ್ದರೆ ರನೌಟ್ ಆಗುತ್ತಿರಲಿಲ್ಲ ಎಂದು ಅಂದು ಸಹ ಚರ್ಚೆ ನಡೆದಿತ್ತು. ಇದೀಗ ಸಿಎಸ್ಕೆ ಪರ ಜಿಗಿದು ಕ್ಯಾಚ್ ಹಿಡಿದ ಬೆನ್ನಲ್ಲೇ ಅದಕ್ಕೆ ಹೋಲಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಂದು ರನೌಟ್ ಆಗಬಾರದೆಂದು ಜಿಗಿದಿದ್ದರೆ ವಿಶ್ವಕಪ್ ಗೆಲ್ಲುತ್ತಿದ್ದೆವು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಂದಿನ ರನೌಟ್ಗೂ ಇಂದಿನ ಡೈವ್ ಕ್ಯಾಚ್ಗೂ ಹೋಲಿಕೆ ಮಾಡುವುದು ಎಷ್ಟು ಸರಿ? ಧೋನಿ ಅಂದು ಉದ್ದೇಶ ಪೂರ್ವಕವಾಗಿ ರನೌಟ್ ಆಗಿಲ್ಲ, ಇವತ್ತು ದುಡ್ಡಿಗಾಗಿ ಡೈವ್ ಮಾಡಿದ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಪ್ರಬುದ್ಧತೆ ನಮ್ಮಲಿರಬೇಕು.
ಸಿಎಸ್ಕೆ vs ಗುಜರಾತ್ ಫಲಿತಾಂಶ
ಚೆಪಾಕ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಶಿವಂ ದುಬೆ (51) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ರನ್ ಗಳಿಸಲು ಪರದಾಟ ನಡೆಸಿತು. 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಸಿಎಸ್ಕೆ ಸತತ ಎರಡನೇ ಗೆಲುವು ದಾಖಲಿಸಿದರೆ, ಗುಜರಾತ್ ಮೊದಲು ಸೋಲು ಕಂಡಿತು.