ವಿರಾಟ್ ಕೊಹ್ಲಿ ಸತತ ವೈಫಲ್ಯ; ರಾಜ ಸತ್ತಿದ್ದಾನೆ ಎಂದು ಟೀಕಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ
Simon Katich: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ ಮತ್ತೆ ರನ್ ಗಳಿಸಲು ವಿಫಲನಾದ ವಿರಾಟ್ ಕೊಹ್ಲಿ ಕಟು ಟೀಕೆಗೆ ಒಳಗಾಗಿದ್ದಾರೆ. ರಾಜ ಸತ್ತಿದ್ದಾನೆ ಎಂದು ಸೈಮನ್ ಕ್ಯಾಟಿಚ್ ಟೀಕಿಸಿ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಅಂದರೆ ಎದುರಾಳಿ ತಂಡಗಳು ರೂಪಿಸುವ ತಂತ್ರಗಳು ಒಂದಲ್ಲ, ಎರಡು. ಒಂದು ಇಡೀ ತಂಡಕ್ಕೆ, ಇನ್ನೊಂದು ವಿರಾಟ್ ಕೊಹ್ಲಿಗೆ. ಇದು ಆಸ್ಟ್ರೇಲಿಯಾ ಸರಣಿಗಲ್ಲ, ಪ್ರತಿ ಸರಣಿಗಳಲ್ಲೂ ನಡೆಯುತ್ತದೆ. ಎದುರಾಳಿ ತಂಡಗಳ ಕೋಚ್ಗಳು, ನಾಯಕರು ಈ ಬಗ್ಗೆ ಹಲವು ಬಾರಿ ಹೇಳಿದ್ದುಂಟು. ಏಕೆಂದರೆ ಅಷ್ಟರಮಟ್ಟಿಗಿತ್ತು ಕಿಂಗ್ ಕೊಹ್ಲಿಯ ವಿರಾಟ ರೂಪ. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ, ಕೊಹ್ಲಿ ಎಂದರೆ ಭಯಪಡುತ್ತಿದ್ದವರೆ, ಇಂದು ನಾಲಿಗೆ ಹರಿಯಬಿಡುತ್ತಿದ್ದಾರೆ. ವಿರಾಟ್ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ ಎಂಬ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ. ಅಂತಹವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈ ಸಾಲಿಗೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸೇರ್ಪಡೆಯಾಗಿದ್ದಾರೆ, ಅವರೇ ಆಸ್ಟ್ರೇಲಿಯಾದ ಸೈಮನ್ ಕ್ಯಾಟಿಚ್.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ ಮತ್ತೆ ರನ್ ಗಳಿಸಲು ವಿಫಲನಾಗಿರುವ ವಿರಾಟ್ ಕೊಹ್ಲಿ ಕಟು ಟೀಕೆಗೆ ಗುರಿಯಾಗಿದ್ದಾರೆ. 4ನೇ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ 36 ಮತ್ತು ದ್ವಿತೀಯ ಇನ್ನಿಂಗ್ಸ್ 5 ರನ್ಗೆ ಸುಸ್ತಾದ ವಿರಾಟ್ ಅವರನ್ನು ರಾಜ ಸತ್ತಿದ್ದಾನೆ ಎಂದು ಸೈಮನ್ ಕ್ಯಾಟಿಚ್ ಟೀಕಿಸುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಭಿಮಾನಿಗಳು ಕೊಹ್ಲಿ ಅವರನ್ನು ಪ್ರೀತಿಯಿಂದ ಕಿಂಗ್ ಎಂದು ಕರೆಯುತ್ತಾರೆ. ಆದರೆ ಇದಕ್ಕೆ ಕೌಂಟರ್ ಕೊಟ್ಟಿರುವ ಕ್ಯಾಟಿಚ್, ನಿಮ್ಮ ರಾಜ ಸತ್ತಿದ್ದಾನೆ ಎಂದೇಳಿ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ಹೇಳಿಕೆ ನೀಡುವ ಮುನ್ನ ಎಚ್ಚರ ಇರಲಿ ಎಂದು ಫ್ಯಾನ್ಸ್ ವಾರ್ನ್ ಮಾಡಿದ್ದಾರೆ.
ರಾಜ ಸತ್ತಿದ್ದಾನೆ ಎಂದ ಸೈಮನ್ ಕ್ಯಾಟಿಚ್
ಸೆನ್ ಕ್ರಿಕೆಟ್ಗಾಗಿ ರೇಡಿಯೋ ವೀಕ್ಷಕ ವಿವರಣೆ ಮಾಡುತ್ತಿದ್ದ ಕ್ಯಾಟಿಚ್ ಅವರು ಕೊಹ್ಲಿ ಔಟಾಗುತ್ತಿದ್ದಂತೆ ಕಿಂಗ್ ಈಸ್ ಡೆಡ್ ಎಂದಿದ್ದಾರೆ. 'ರಾಜ ಸತ್ತಿದ್ದಾನೆ. ಕಿಂಗ್ ಪಟ್ಟವನ್ನು ಬುಮ್ರಾ ಅಲಂಕರಿಸಿಕೊಂಡಿದ್ದಾರೆ. ಕೊಹ್ಲಿ ಸ್ವತಃ ತನ್ನ ಬಗ್ಗೆಯೇ ನಿರುತ್ಸಾಹಗೊಂಡಂತೆ ತೋರುತ್ತಿದ್ದಾರೆ. ಅದು ಅವರಿಗೆ ದೊಡ್ಡ ಹೊಡೆತವಾದಂತಿದೆ. ಅವರು ಕಡಿಮೆ ಸ್ಕೋರ್ಗೆ ಔಟಾಗಿ ಲಯ ಕಳೆದುಕೊಂಡಿದ್ದೇನೆ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ಕೊಹ್ಲಿ ಲಯಕ್ಕೆ ಮರಳದಿರುವುದು ಆಸ್ಟ್ರೇಲಿಯಾಗೆ ತುಂಬಾ ಲಾಭವಾಗುತ್ತಿದೆ. ಒಳಗೊಳಗೆ ತುಂಬಾ ಸಂತೋಷವನ್ನೂ ಪಡುತ್ತಿದೆ ಎಂದು ಎರಡೂ ತಂಡಗಳು ಊಟದ ವಿರಾಮಕ್ಕೆ ತೆರಳುವಾಗ ಕ್ಯಾಟಿಚ್ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಕೊಹ್ಲಿ ನಿರಾಸೆ ಮೇಲೆ ನಿರಾಸೆ
ವಿರಾಟ್ ಕೊಹ್ಲಿ ತೀವ್ರ ನಿರಾಸೆ ಮೂಡಿಸುತ್ತಿದ್ದಾರೆ. ವರ್ಷಪೂರ್ತಿ ಅವರು ಕಳಪೆ ಪ್ರದರ್ಶನ ನೀಡಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ನ 5ನೇ ದಿನದಂದು ಕೊಹ್ಲಿ ಆಫ್ಸ್ಟಂಪ್ ಔಟ್ ಸೈಡ್ ಹೊರಗಿನ ಎಸೆತಕ್ಕೆ ಔಟಾದರು. ಇದು ಕೊಹ್ಲಿಯ ದೌರ್ಬಲ್ಯವಾಗಿದೆ. 2ನೇ ಇನ್ನಿಂಗ್ಸ್ನಲ್ಲಿ 29 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ರನ್ ಗಳಿಸಿ ಔಟಾದರು. ಮೊದಲ ಇನ್ನಿಂಗ್ಸ್ನಲ್ಲಿ 36 ರನ್ ಗಳಿಸಿದ್ದರು. ಈ ಸರಣಿಯಲ್ಲಿ 7 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು, ಗಳಿಸಿರೋದು 167 ರನ್ ಮಾತ್ರ. ಕೊಹ್ಲಿ ಈ ವರ್ಷ 24.52 ಸರಾಸರಿಯಲ್ಲಿ 417 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹೇಳಿಕೊಳ್ಳುವಂತಹ ಪ್ರದರ್ಶನ ಅವರಿಂದ ಬಂದಿಲ್ಲ ಎಂಬುದನ್ನು ಈ ಅಂಕಿ-ಅಂಶಗಳೇ ಸಾಬೀತುಪಡಿಸುತ್ತಿವೆ.
ಭಾರತಕ್ಕೆ ಮತ್ತೊಂದು ಸೋಲು, ಸರಣಿ ಹಿನ್ನಡೆ
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಮತ್ತೊಂದು ಸೋಲು ಕಂಡಿದೆ. ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 340 ರನ್ಗಳ ಬೃಹತ್ ಬೆನ್ನಟ್ಟಲಾಗದೆ 184 ರನ್ಗಳ ಅಂತರದಿಂದ ಸೋಲಿಗೆ ಶರಣಾಗಿದೆ. ಹೀಗಾಗಿ ಭಾರತ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಅನುಭವಿಸಿದೆ. ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ, ಇದೀಗ ಎರಡು ಸೋಲು ಅನುಭವಿಸಿದೆ. ಒಂದು ಪಂದ್ಯ ಡ್ರಾ ಸಾಧಿಸಿದೆ. ಇದೀಗ ಕೊನೆಯ ಟೆಸ್ಟ್ ಮಾತ್ರ ಉಳಿದಿದ್ದು, ರೋಹಿತ್ ಪಡೆ ಜಯಿಸುವುದು ಅನಿವಾರ್ಯವಾಗಿದೆ. ಗೆದ್ದರೆ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope