ವಿರಾಟ್ ಆಟ ಕಂಡು ಅವರಿಗೆ ಅಸೂಯೆ ಹುಟ್ಟಿದೆ; ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಲಾರಾ ಖಡಕ್ ಉತ್ತರ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಆಟ ಕಂಡು ಅವರಿಗೆ ಅಸೂಯೆ ಹುಟ್ಟಿದೆ; ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಲಾರಾ ಖಡಕ್ ಉತ್ತರ

ವಿರಾಟ್ ಆಟ ಕಂಡು ಅವರಿಗೆ ಅಸೂಯೆ ಹುಟ್ಟಿದೆ; ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಲಾರಾ ಖಡಕ್ ಉತ್ತರ

Brian Lara: ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದ ಮಾಜಿ ಕ್ರಿಕೆಟರ್​​ಗಳಿಗೆ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಖಡಕ್ ಉತ್ತರ ಕೊಟ್ಟಿದ್ದಾರೆ.

ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಲಾರಾ ಖಡಕ್ ಉತ್ತರ.
ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಲಾರಾ ಖಡಕ್ ಉತ್ತರ.

2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ (ODI World Cup 2023) ವಿರಾಟ್ ಕೊಹ್ಲಿ (Virat Kohli) ಅವರ ಅದ್ಭುತ ಆಟವನ್ನು ಸ್ವಾರ್ಥಿ ಎಂದು ಟೀಕಿಸಿದವರ ವಿರುದ್ಧ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ (Brian Lara) ಕಿಡಿಕಾರಿದ್ದಾರೆ. ವಿಶ್ವಕಪ್ ಇತಿಹಾಸದ ಆವೃತ್ತಿಯೊಂದರಲ್ಲಿ ಅಧಿಕ ರನ್ ಗಳಿಸಿದ ದಾಖಲೆ ಬರೆದ ಕೊಹ್ಲಿ11 ಪಂದ್ಯಗಳಲ್ಲಿ 3 ಶತಕ, 6 ಅರ್ಧಶತಕ ಸೇರಿ 765 ರನ್ ಸಿಡಿಸಿದರು. ಆದರೆ, ಕೊಹ್ಲಿ ಆಟವನ್ನು ಕೆಲವರು ಸ್ವಾರ್ಥಿ ಎಂದು ಜರಿದ್ದರು.

ಸ್ವಾರ್ಥಿ ಎಂದು ಮೊದಲು ಬಳಸಿದ್ದು ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ದೇಶಕ ಮತ್ತು ಹಂಗಾಮಿ ಕೋಚ್ ಮೊಹಮ್ಮದ್ ಹಫೀಜ್ (Mohammad Hafeez). ಅವರು ಟಿವಿ ಚಾನೆಲ್‌ನಲ್ಲಿ ಕೊಹ್ಲಿಯದ್ದು ಸ್ವಾರ್ಥದ ಆಟ ಎಂದು ಟೀಕಿಸಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಕೆಲ ಮಾಜಿ ಕ್ರಿಕೆಟಿಗರು ಪದೆಪದೇ ಆ ಪದವನ್ನು ಬಳಸಿದ್ದರು. ಇದೀಗ ಲಾರಾ, ಟೀಕಿಸಿದವರಿಗೆ ಸರಿಯಾದ ಉತ್ತರ ನೀಡಿದ್ದಾರೆ.

‘ಅಸೂಯೆ ಪಟ್ಟವರೇ ಹಾಗೆ ಮಾತನಾಡುತ್ತಾರೆ’

ಕೊಹ್ಲಿಯ ಸಾಧನೆಗಳ ಬಗ್ಗೆ ಅಸೂಯೆ ಪಟ್ಟ ಜನರೇ ಇಂತಹ ಕಾಮೆಂಟ್ ಮಾಡುತ್ತಾರೆ ಎಂದು ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ ಹೇಳಿದ್ದಾರೆ. ಸ್ವಾರ್ಥಿ ಎಂದು ಯಾರೆಲ್ಲಾ ಹೇಳುತ್ತಿದ್ದಾರೋ ಅವರಿಗೆಲ್ಲಾ ಆತನ ಸಾಧನೆಯ ಬಗ್ಗೆ ಅಸೂಯೆ ಇದೆ. ಅವರು ಗಳಿಸಿದ ರನ್​ಗಳ ಬಗ್ಗೆ ಅಸೂಯೆ ಪಡುತ್ತಾರೆ. ನನ್ನ ವೃತ್ತಿಜೀವನದಲ್ಲಿ ನಾನು ಸಹ ಎದುರಿಸಿದ್ದೇನೆ ಎಂದು ಲಾರಾ ಆನಂದಬಜಾರ್ ಪತ್ರಿಕಾಗೆ ತಿಳಿಸಿದ್ದಾರೆ.

‘ಕೊಹ್ಲಿ 100 ಶತಕ ಸಿಡಿಸುವುದು ಅಸಾಧ್ಯ’

ಕೊಹ್ಲಿಯನ್ನು ಹೊಗಳಿದ್ದರ ನಡುವೆಯೂ ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯುತ್ತಾರೆ ಎಂದು ನಿರೀಕ್ಷಿಸುವುದು ತರ್ಕಬದ್ಧವಲ್ಲ ಎಂದು ಲಾರಾ ಹೇಳಿದ್ದಾರೆ. ವಿಶ್ವಕಪ್ ಸಮಯದಲ್ಲಿ ಕೊಹ್ಲಿ ಅತಿ ಹೆಚ್ಚು ಏಕದಿನ ಶತಕಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು. 50 ಏಕದಿನ ಶತಕ ಬಾರಿಸಿದ ಮೊದಲಿಗ ಎನಿಸಿದರು.

ವಿರಾಟ್​​ಗೆ ಈಗ 35 ವರ್ಷ. ಸದ್ಯ 80 ಶತಕ ಸಿಡಿಸಿದ್ದಾರೆ. 100 ಶತಕ ಸಿಡಿಸಲು ಇನ್ನೂ 20 ಸೆಂಚುರಿ ಬೇಕಿದೆ. ವಿರಾಟ್ ಪ್ರತಿ ವರ್ಷ 5 ಶತಕ ಗಳಿಸಿದರೆ ತೆಂಡೂಲ್ಕರ್​​ರನ್ನು ಸರಿಗಟ್ಟಲು ಇನ್ನೂ 4 ವರ್ಷಗಳು ಬೇಕಾಗುತ್ತವೆ. ಆಗ ಕೊಹ್ಲಿಗೆ 39 ವರ್ಷಗಳು. ಕಠಿಣ ಕೆಲಸ, ತುಂಬಾ ಕಠಿಣ ಕೆಲಸ. ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಯಾರಿಂದಲೂ ಸಾಧ್ಯವಿಲ್ಲ ಎಂದು ಲಾರಾ ಹೇಳಿದ್ದಾರೆ.

ಅತ್ಯಂತ ಕಷ್ಟಕರ ಎಂದ ಲಾರಾ

ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರೆ ಎಂದು ಹೇಳುವವರು ಕ್ರಿಕೆಟ್ ತರ್ಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. 20 ಶತಕಗಳು ಇನ್ನೂ ಬಹಳ ದೂರದಲ್ಲಿವೆ. ವಯಸ್ಸು ಯಾರಿಗೂ ನಿಲ್ಲುವುದಿಲ್ಲ. ಕೊಹ್ಲಿ ಇನ್ನೂ ಅನೇಕ ದಾಖಲೆಗಳನ್ನು ಮುರಿಯುತ್ತಾರೆ. ಆದರೆ 100 ಶತಕಗಳು ಅತ್ಯಂತ ಕಷ್ಟಕರವೆಂದು ತೋರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 50 ಏಕದಿನ ಶತಕ, 29 ಟೆಸ್ಟ್ ಶತಕ, ಒಂದು ಟಿ20 ಶತಕ ಸಿಡಿಸಿದ್ದಾರೆ.

Whats_app_banner