ತಿಲಕ್ ವರ್ಮಾ ಏಕಾಂಗಿ ಹೋರಾಟ; ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಗೆದ್ದ ಭಾರತ, ಸರಣಿಯಲ್ಲಿ ಮುನ್ನಡೆ
ಡೆತ್ ಓವರ್‌ಗಳಲ್ಲಿ ರವಿ ಬಿಷ್ಣೋಯ್ ಆಟ ಆಕರ್ಷಕವಾಗಿತ್ತು. ತಿಲಕ್ ವರ್ಮಾಗೆ ಸಾಥ್ ನೀಡುವ ಜೊತೆಗೆ ಎರಡು ಬೌಂಡರಿ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಸದ್ಯ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿಯೂ ಭಾರತ ಕ್ರಿಕೆಟ್ ತಂಡ ರೋಚಕ ಜಯ ಸಾಧಿಸಿದೆ. ತಿಲಕ್ ವರ್ಮಾ ಏಕಾಂಗಿ ಹೋರಾಟಕ್ಕೆ ಫಲ ಸಿಕ್ಕಿದ್ದು, ಕೊನೆಯ ಓವರ್‌ನಲ್ಲಿ ಗೆಲುವಿನ ನಗಾರಿ ಬಾರಿಸಿದ್ದಾರೆ. 2 ವಿಕೆಟ್‌ಗಳಿಂದ ಗೆದ್ದ ಟೀಮ್ ಇಂಡಿಯಾ, ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಚೆನ್ನೈನ ಎಂ. ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 165 ರನ್ ಪೇರಿಸಿತು. ಭಾರತವು 19.2 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ ಪಂದ್ಯ ಗೆದ್ದಿತು.
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ, ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೆ, ವೇಗದ ಆಟಕ್ಕೆ ಮಣೆ ಹಾಕಿ ವಿಕೆಟ್ ಕಳೆದುಕೊಳ್ಳದೆ ಆಡಿದ ತಿಲಕ್ ವರ್ಮಾ ತಂಡವನ್ನು ಗೆಲುವಿನ ದಡ ಸೇರಿಸಿದರು.
ಚೆಪಾಕ್ ಅಂಗಳದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು. ವೇಗದ ಚೇಸಿಂಗ್‌ಗೆ ಮುಂದಾದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅಲ್ಪ ಮೊತ್ತಕ್ಕೆ ಔಟಾದರು. ವುಡ್ ಮತ್ತು ಆರ್ಚರ್ ವೇಗದ ದಾಳಿಗೆ ಆರಂಭಿಕರು ಬೇಗನೆ ವಿಕೆಟ್ ಒಪ್ಪಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (12)ಪಿಚ್‌ಗೆ ಬರುತ್ತಿದ್ದಂತೆಯೇ ಬೌಂಡರಿ ಬಾರಿಸಲು ಶುರು ಮಾಡಿದರು. ಆದರೆ ಅಷ್ಟೇ ವೇಗವಾಗಿ ವಿಕೆಟ್ ಕೈಚೆಲ್ಲಿದರು. ಒಂದು ಬದಿಯಲ್ಲಿ ತಂಡ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಆದರೆ ತಿಲಕ್ ವರ್ಮಾ ಮಾತ್ರ ಅಬ್ಬರ ಮುಂದುವರೆಸಿದರು.
ರವಿ ಬಿಷ್ಣೋಯ್ ಆಕರ್ಷಕ ಆಟ
ಒಂದು ಹಂತದಲ್ಲಿ ವಾಷಿಂಗ್ಟನ್ ಸುಂದರ್ 26 ರನ್ ಗಳಿಸಿ ತಿಲಕ್‌ಗೆ ಉತ್ತಮ ಸಾಥ್ ನೀಡಿದರು. ಉಳಿದಂತೆ ಧ್ರುವ್ ಜುರೆಲ್ 4 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 7 ರನ್ ಗಳಿಸಿ ಔಟಾದರು. ಡೆತ್ ಓವರ್‌ಗಳಲ್ಲಿ ರವಿ ಬಿಷ್ಣೋಯ್ ಆಟ ಆಕರ್ಷಕವಾಗಿತ್ತು. ತಿಲಕ್‌ಗ್ ಸಾಥ್ ನೀಡುವ ಜೊತೆಗೆ ಎರಡು ಬೌಂಡರಿ ಸಿಡಿಸಿ ಚೆನ್ನೈ ಅಭಿಮಾನಿಗಳನ್ನು ರಂಜಿಸಿದರು. ಕೊನೆಗೆ ತಂಡವನ್ನು ಇಬ್ಬರು ಸೇರಿ ಗೆಲ್ಲಿಸಿದರು.
ಜೋಫ್ರಾ ಆರ್ಚರ್ ದುಬಾರಿ
ಇಂಗ್ಲೆಂಡ್ ಪಾಲಿಗೆ ಜೋಫ್ರಾ ಆರ್ಚರ್ ದುಬಾರಿಯಾದರು. ನಾಲ್ಕು ಓವರ್‌ಗಳಲ್ಲಿ 15.00ರ ಎಕಾನಮಿಯಲ್ಲಿ 60 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಬ್ರೈಡನ್ ಕಾರ್ಸೆ 3 ವಿಕೆಟ್ ಪಡೆದು ಮಿಂಚಿದರು.
ಮೊದಲು ಬ್ಯಾಟಿಂಗ್ ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ 45 ರನ್ ಗಳಿಸಿದರು. ಬ್ರೈಡನ್ ಕಾರ್ಸೆ 31 ರನ್ ಗಳಿಸಿ ರನೌಟ್ ಆದರು. ಭಾರತದ ಪರ ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿತ್ತು. ನಿತೀಶ್ ರೆಡ್ಡಿ ಹಾಗೂ ರಿಂಕು ಸಿಂಗ್ ಬದಲಿಗೆ ವಾಷಿಂಗ್ಟನ್ ಸುಂದರ್ ಹಾಗೂ ಧ್ರುವ್ ಜುರೆಲ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಲಾಗಿತ್ತು.
ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷರ್ದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ದುಬೆ, ರಮಣ್‌ದೀಪ್ ಸಿಂಗ್.
