ಆರ್ಸಿಬಿ ಸ್ಪಿನ್ನರ್ಸ್ ವಿಕೆಟ್ ಪಡೆದಿಲ್ವಾ? ಅಜಿಂಕ್ಯ ರಹಾನೆ ಬೇಡಿಕೆ ತಳ್ಳಿಹಾಕಿದ ಕ್ಯುರೇಟರ್
Sujan Mukherjee: ಕೆಕೆಆರ್ ನಾಯಕ ಆಜಿಂಕ್ಯ ರಹಾನೆ ಅವರು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಅವರೊಂದಿಗೆ ವಾದಕ್ಕೆ ಇಳಿದಿದ್ದು, ಪಿಚ್ ಬದಲಾವಣೆ ಕುರಿತು ಬದಲಾಯಿಸಲು ನಿರಾಕರಿಸಿದ್ದಾರೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಅವರ ಮನವಿಯೊಂದನ್ನು ನಿರಾಕರಿಸಿದ್ದಾರೆ. ಈಡನ್ ಪಿಚ್ ಅನ್ನು ಸ್ಪಿನ್‌ಗೆ ನೆರವಾಗುವಂತೆ ಸಿದ್ಧಪಡಿಸುವಂತೆ ರಹಾನೆ ಕೋರಿದ ಮನವಿಯನ್ನು ತಿರಸ್ಕರಿಸಿದ್ದಾರೆ. ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 7 ವಿಕೆಟ್‌ಗಳ ಭಾರೀ ಸೋಲಿನ ನಂತರ, ರಹಾನೆ ತಮ್ಮ ತಂಡಕ್ಕೆ ಹೆಚ್ಚು ಬೆಂಬಲ ನೀಡುವ ಪಿಚ್‌ಗಾಗಿ ಕೇಳಿಕೊಂಡಿದ್ದರು.
ಆದಾಗ್ಯೂ, ದಶಕದಿಂದ ಈಡನ್ ಗಾರ್ಡನ್ಸ್ ಟರ್ಫ್ ಮತ್ತು ಪಿಚ್ ನಿರ್ವಹಿಸುತ್ತಿರುವ ಮುಖರ್ಜಿ ಅವರು, ರಹಾನೆ ವಿನಂತಿಗೆ ಮಣಿಯಲು ನಿರಾಕರಿಸಿದ್ದಾರೆ. ರೆವ್‌ಸ್ಪೋರ್ಟ್ಸ್‌ಗೆ ಮಾತನಾಡುತ್ತಾ, ಕೆಕೆಆರ್ ಅವಶ್ಯಕತೆಗಳಿಗೆ ತಕ್ಕಂತೆ ಪಿಚ್‌ನ ಸ್ವಭಾವ ಬದಲಾಯಿಸುವ ಯಾವುದೇ ಸಾಧ್ಯತೆಗಳನ್ನು ಮುಖರ್ಜಿ ತಕ್ಷಣವೇ ತಳ್ಳಿಹಾಕಿದ್ದಾರೆ. ನಾನು ಇಲ್ಲಿ ಇರುವ ತನಕ ಈಡನ್ ಪಿಚ್ ಬದಲಾವಣೆ ಅಸಾಧ್ಯ ಎಂದು ದೃಢವಾಗಿ ಹೇಳಿದ್ದಾರೆ.
2015ರ ಅಕ್ಟೋಬರ್‌ನಲ್ಲಿ ಆಗಿನ ಸಿಎಬಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮುಖ್ಯ ಕ್ಯುರೇಟರ್ ಹುದ್ದೆಗೆ ನೇಮಿಸಿದಾಗಿನಿಂದ ಈಡನ್ ಗಾರ್ಡನ್ಸ್ ಪಿಚ್ ಅನ್ನು ಮುಖರ್ಜಿ ನಿರ್ವಹಿಸುತ್ತಿದ್ದಾರೆ. ಐಪಿಎಲ್ ನಿಯಮ ಮತ್ತು ನಿಯಮಾವಳಿಗಳ ಪ್ರಕಾರ, ಫ್ರಾಂಚೈಸ್ಗಳಿಗೆ ಪಿಚ್ ವಿಚಾರಕ್ಕೆ ಸಂಬಂಧಿಸಿ ಯಾವುದೇ ಹಕ್ಕಿಲ್ಲ. ನಾನು ಹುದ್ದೆ ವಹಿಸಿಕೊಂಡ ಕ್ಷಣದಿಂದ ಇಲ್ಲಿನ ಪಿಚ್‌ಗಳು ಹೀಗೆಯೇ ಇವೆ, ಈಗಲೂ ಹಾಗೆಯೇ ಇದೆ ಎಂದಿದ್ದಾರೆ. ಭವಿಷ್ಯದಲ್ಲಿಯೂ ಇದನ್ನು ಬದಲಾಯಿಸಲಾಗುವುದಿಲ್ಲ ಎಂಬುದು ಅವರ ಮಾತು.
ನಿಮ್ಮ ಸ್ಪಿನ್ನರ್ಸ್ ಏನು ಮಾಡ್ತಿದ್ರು ಎಂದ ಮುಖರ್ಜಿ
ಕೆಕೆಆರ್‌ನ ಆರಂಭಿಕ ಸೋಲಿನ ನಂತರ ಮ್ಯಾಚ್ ಪ್ರಸ್ತುತಿಯಲ್ಲಿ ಮಾತನಾಡಿದ ಹೊಸ ನಾಯಕ ರಹಾನೆ, 'ಸ್ಪಿನ್ ಬೌಲರ್‌ಗಳಿಗೆ ನೆರವಾಗುವ ಪಿಚ್ ಇದ್ದರೆ ಉತ್ತಮ. ಆದರೆ ಈ ವಿಕೆಟ್ ಅನ್ನು ಕಳೆದ ಒಂದೂವರೆ ದಿನದಿಂದ ಮುಚ್ಚಲಾಗಿತ್ತು ಎಂದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪಿಚ್ ಕ್ಯುರೇಟರ್, ನಿಮ್ಮ ಸ್ಪಿನ್ನರ್‌ಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ಸುನಿಲ್ ನರೈನ್, ವರುಣ್ ಚಕ್ರವರ್ತಿ ಅವರನ್ನು ಟೀಕಿಸಿದ್ದಾರೆ.
ನಿಮ್ಮವರು ವಿಕೆಟ್ ಪಡೆಯಲಿಲ್ಲ ಎನ್ನುವುದಾದರೆ, ಆರ್ಸಿಬಿ ಸ್ಪಿನ್ನರ್‌ಗಳು 4 ವಿಕೆಟ್ ಪಡೆಯಲಿಲ್ಲವೇ? ಪಿಚ್ ಸ್ಪಿನ್ನರ್ಗಳಿಗೂ ಅವಕಾಶ ನೀಡಿದೆ. ಆದರೆ ಕೆಕೆಆರ್ ಸ್ಪಿನ್ನರ್‌ಗಳು ಏನು ಮಾಡಿದರು? ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದರು. ಸುಯಾಶ್ ಶರ್ಮಾ ಆಂಡ್ರೆ ರಸೆಲ್ ಅವರನ್ನು ಔಟ್ ಮಾಡಿದರು ಎಂಬುದು ಮುಖರ್ಜಿ ಟೀಕೆ.
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ರಹಾನೆ ಅವರು, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ಜೋಡಿ ನಮ್ಮ ಶಕ್ತಿ ಎಂದು ಹೇಳಿದ್ದರು. ನಮ್ಮಲ್ಲಿರುವ ಇಬ್ಬರೂ ಸ್ಪಿನ್ನರ್‌ಗಳು ಅವರ ಗುಣಮಟ್ಟ, ಅವರು ಯಾವುದೇ ರೀತಿಯ ವಿಕೆಟ್‌ನಲ್ಲಿ ಬೌಲಿಂಗ್ ಮಾಡಬಹುದು. ಅವರು ವಿಶ್ವಾಸ ಹೊಂದಿದ್ದಾರೆ ಎಂದು ನನಗೆ ಖಚಿತವಾಗಿದೆ ಎಂದು ರಹಾನೆ ವಿವರಿಸಿದ್ದರು. ಆದರೆ ಸೋಲು ಅನುಭವಿಸುತ್ತಿದ್ದಂತೆ ಪಿಚ್ ನೆರವಾಗಲಿಲ್ಲ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.
ಕೆಕೆಆರ್ ವಿರುದ್ಧ ಆರ್ಸಿಬಿಗೆ ಗೆಲುವು
ಮಾರ್ಚ್ 22ರಂದು ನಡೆದ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ 7 ವಿಕೆಟ್ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ್ದ ಕೋಲ್ಕತ್ತಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ, ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು.
