ಸತತ 6 ಎಸೆತಗಳಿಗೆ 6 ವಿಕೆಟ್ ಪಡೆಯುವುದಲ್ಲ; ಡಬಲ್ ಹ್ಯಾಟ್ರಿಕ್‌ನಲ್ಲಿ ಎಷ್ಟು ವಿಕೆಟ್‌ಗಳು ಇರುತ್ತವೆ? ಇಲ್ಲಿದೆ ಸರಿಯಾದ ಉತ್ತರ
ಸತತ 6 ಎಸೆತಗಳಿಗೆ 6 ವಿಕೆಟ್ ಪಡೆಯುವುದನ್ನು ಡಬಲ್ ಹ್ಯಾಟ್ರಿಕ್ ವಿಕೆಟ್ ಎನ್ನುವುದಿಲ್ಲ. ಹಾಗಿದ್ದರೆ ಡಬಲ್ ಹ್ಯಾಟ್ರಿಕ್‌ನಲ್ಲಿ ಎಷ್ಟು ವಿಕೆಟ್‌ಗಳು ಇರುತ್ತವೆ? ಇಲ್ಲಿದೆ ಸರಿಯಾದ ಉತ್ತರ.

ಭಾರತದಲ್ಲಿ ಕ್ರಿಕೆಟ್ ಅತ್ಯಧಿಕ ಜನಪ್ರಿಯತೆ ಹೊಂದಿರುವ ಕ್ರೀಡೆ. ಗಲ್ಲಿಯಿಂದ ಹಿಡಿದು ದಿಲ್ಲಿ ತನಕ, ಕಿರಿಯರಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ನೆಚ್ಚಿನ ಆಟವಾಗಿದೆ. ಅದು ಭಾರತದ ಪಂದ್ಯಗಳೇ ಇರಲಿ ಅಥವಾ ಐಪಿಎಲ್ ಇರಲಿ, ಅಭಿಮಾನಿಗಳ ಕ್ರೇಜ್ ಅಷ್ಟಿಷ್ಟಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಅಥವಾ ಆಟಗಾರನ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಸಾಕಷ್ಟು ಉತ್ಸುಕತೆ ತೋರುತ್ತಾರೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಈ ಆಟದ ಪ್ರತಿಯೊಂದು ಕ್ಷಣವೂ ರೋಮಾಂಚನದಿಂದ ಕೂಡಿರುತ್ತದೆ. ಆದರೆ ಈ ಆಟಕ್ಕೆ ಸಂಬಂಧಿಸಿದ ಹಲವು ನಿಗೂಢ ಒಗಟುಗಳಿವೆ, ಅದರ ಬಗ್ಗೆ ಕೆಲವೇ ಅಭಿಮಾನಿಗಳಿಗೆ ತಿಳಿದಿದೆ. ಅಂತಹ ಒಂದು ಒಗಟು ಡಬಲ್ ಹ್ಯಾಟ್ರಿಕ್ನದ್ದು.
ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳನ್ನು ಹ್ಯಾಟ್ರಿಕ್ ಎಂದರೇನು ಎಂದು ಕೇಳಿದರೆ, ಅವರು ಸತತ 3 ಎಸೆತಗಳಲ್ಲಿ ವಿಕೆಟ್ ಪಡೆಯುವುದನ್ನು ಹ್ಯಾಟ್ರಿಕ್ ಎಂದು ಕರೆಯುತ್ತಾರೆ ಎಂದು ಉತ್ತರಿಸುತ್ತಾರೆ. ಹೀಗಾಗಿ, ಡಬಲ್ ಹ್ಯಾಟ್ರಿಕ್ ವಿಷಯಕ್ಕೆ ಬಂದಾಗ ಮನಸ್ಸಿಗೆ ಬರುವುದು ಓವರ್‌ನ ಎಲ್ಲಾ 6 ಎಸೆತಗಳಲ್ಲಿ 6 ವಿಕೆಟ್‌ಗಳು. ಆದರೆ ಇದು ತಪ್ಪು ಉತ್ತರ. ಸತತ 6 ವಿಕೆಟ್‌ಗಳನ್ನು ಪಡೆಯುವುದು ಡಬಲ್ ಹ್ಯಾಟ್ರಿಕ್ ಎಂದು ನೀವು ಭಾವಿಸಿದರೆ ಅದು ತಪ್ಪು. ಹಾಗಿದ್ದರೆ ಮತ್ತೇನು, ಇದನ್ಹೇಗೆ ಲೆಕ್ಕ ಮಾಡುತ್ತಾರೆ? ಸರಿಯಾದ ಉತ್ತರ ಇಲ್ಲಿದೆ.
ಕ್ರಿಕೆಟ್‌ನಲ್ಲಿ ಡಬಲ್ ಹ್ಯಾಟ್ರಿಕ್ ಎಂದರೇನು?
ಕ್ರಿಕೆಟ್‌ನಲ್ಲಿ ಡಬಲ್ ಹ್ಯಾಟ್ರಿಕ್ ಎಂದರೆ ಸತತ 3 ವಿಕೆಟ್‌ಗಳಿಗಿಂತ ಹೆಚ್ಚು, ಅಂದರೆ ಒಬ್ಬ ಬೌಲರ್ ಸತತ 4 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಪಡೆದರೆ ಅದನ್ನು ಡಬಲ್ ಹ್ಯಾಟ್ರಿಕ್ ಎಂದು ಕರೆಯಲಾಗುತ್ತದೆ . ಕ್ರಿಕೆಟ್ ಇತಿಹಾಸದಲ್ಲಿ ಡಬಲ್ ಹ್ಯಾಟ್ರಿಕ್ ಪಡೆಯುವ ಸಾಧನೆ ಮಾಡಿದ ಬೌಲರ್‌ಗಳು ಬಹಳ ಕಡಿಮೆ. ಏಕೆಂದರೆ ಯಾವುದೇ ಬೌಲರ್‌ಗೆ, ಯಾವುದೇ ವೈಡ್ ಅಥವಾ ನೋ ಬಾಲ್ ಇಲ್ಲದೆ ತನ್ನ ಓವರ್‌ನಲ್ಲಿ ಸತತ ನಾಲ್ಕು ವಿಕೆಟ್‌ಗಳನ್ನು ಪಡೆಯುವುದು ದೊಡ್ಡ ಸಾಧನೆಯಾಗಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಡಬಲ್ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿಗೆ ಶ್ರೀಲಂಕಾದ ಶ್ರೇಷ್ಠ ವೇಗಿ ಲಸಿತ್ ಮಾಲಿಂಗ ಪಾತ್ರರಾಗಿದ್ದಾರೆ. 2007ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಾಲಿಂಗ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದಲ್ಲದೆ, ಬಾಂಗ್ಲಾದೇಶದ ಅಲ್ ಅಮೀನ್ ಹುಸೇನ್ ದೇಶೀಯ ಲೀಗ್ ಪಂದ್ಯದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇದರ ಹೊರತಾಗಿ ಯಾವೊಬ್ಬ ಬೌಲರ್ ಸಹ ಈ ಸಾಧನೆ ಮಾಡಿಲ್ಲ.
ಹ್ಯಾಟ್ರಿಕ್ ವಿಕೆಟ್ ಎಂದರೇನು?
ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಎಂದರೆ ಬೌಲರ್ ಸತತ ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದು, ಮೂರು ವಿಭಿನ್ನ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವುದು. ಇದು ಏಕದಿನ ಅಂತಾರಾಷ್ಟ್ರೀಯ (ODI) ಕ್ರಿಕೆಟ್‌ನಲ್ಲಿ ತುಲನಾತ್ಮಕವಾಗಿ ಅಪರೂಪದ ಘಟನೆಯಾಗಿದೆ. 1971ರ ಜನವರಿ 5 ರಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಿಂದ ಇಲ್ಲಿಯ ತನಕ ಅಂದರೆ 4546 ಏಕದಿನ ಪಂದ್ಯಗಳಲ್ಲಿ ಕೇವಲ 50 ಬಾರಿ ಮಾತ್ರ ಸಂಭವಿಸಿದೆ.