ಸಿಎಸ್‌ಕೆ vs ಆರ್‌ಸಿಬಿ ಐಪಿಎಲ್‌ ಹಣಾಹಣಿ; ಮುಖಾಮುಖಿ ದಾಖಲೆ, ಅಂಕಿ ಅಂಶ ಸೇರಿದಂತೆ 10 ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್‌ಕೆ Vs ಆರ್‌ಸಿಬಿ ಐಪಿಎಲ್‌ ಹಣಾಹಣಿ; ಮುಖಾಮುಖಿ ದಾಖಲೆ, ಅಂಕಿ ಅಂಶ ಸೇರಿದಂತೆ 10 ಪ್ರಮುಖ ಅಂಶಗಳು

ಸಿಎಸ್‌ಕೆ vs ಆರ್‌ಸಿಬಿ ಐಪಿಎಲ್‌ ಹಣಾಹಣಿ; ಮುಖಾಮುಖಿ ದಾಖಲೆ, ಅಂಕಿ ಅಂಶ ಸೇರಿದಂತೆ 10 ಪ್ರಮುಖ ಅಂಶಗಳು

ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಕೂಡಾ ಐಪಿಎಲ್‌ 2025ರಲ್ಲಿ ಆಡಿದ ಮೊದಲ ಪಂದ್ಯಗಳಲ್ಲಿ ಗೆದ್ದಿವೆ. ಕೆಕೆಆರ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ ಗೆದ್ದು ಬೀಗಿದೆ. ಇದೀಗ ಐಪಿಎಲ್‌ನಲ್ಲಿ ನಾಳಿನ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಎದುರಾಗುತ್ತಿದ್ದು ಮಹತ್ವದ ಪಂದ್ಯದ 10 ಮುಖ್ಯ ಅಂಶಗಳನ್ನು ನೋಡೋಣ.

ಸಿಎಸ್‌ಕೆ vs ಆರ್‌ಸಿಬಿ ಐಪಿಎಲ್‌ ಹಣಾಹಣಿ; ಮುಖಾಮುಖಿ ದಾಖಲೆ ಸೇರಿದಂತೆ 10 ಪ್ರಮುಖ ಅಂಶಗಳು
ಸಿಎಸ್‌ಕೆ vs ಆರ್‌ಸಿಬಿ ಐಪಿಎಲ್‌ ಹಣಾಹಣಿ; ಮುಖಾಮುಖಿ ದಾಖಲೆ ಸೇರಿದಂತೆ 10 ಪ್ರಮುಖ ಅಂಶಗಳು

ಐಪಿಎಲ್‌ 2025ರ ಆವೃತ್ತಿಯಲ್ಲಿ ಮಾರ್ಚ್‌ 28ರ ಗುರುವಾರ ರೋಚಕ ಪಂದ್ಯ ನಡೆಯಲಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಸಿಎಸ್‌ಕೆ ತವರು ಮೈದಾನ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಸಿಎಸ್‌ಕೆ ತಂಡವು ತವರಿನಲ್ಲಿ ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ. ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯವು ಯಾವತ್ತಿಗೂ ರೋಚಕ. ಈ ಬಾರಿಯೂ ರೋಚಕ ಹಣಾಹಣಿಯನ್ನು ನಿರೀಕ್ಷಿಸಲಾಗುತ್ತಿದೆ.

ಉಭಯ ತಂಡಗಳು ಕೂಡಾ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯಗಳಲ್ಲಿ ಗೆದ್ದಿವೆ. ಕೆಕೆಆರ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಸಿಎಸ್‌ಕೆ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದು ಬೀಗಿದೆ. ಇದೀಗ ಐಪಿಎಲ್‌ನಲ್ಲಿ ನಾಳಿನ ಮಹತ್ವದ ಪಂದ್ಯದ 10 ಮುಖ್ಯ ಅಂಶಗಳನ್ನು ನೋಡೋಣ.

  1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯವು ಮಾರ್ಚ್‌ 28ರ ಶುಕ್ರವಾರ ಸಂಜೆ 07:30ಕ್ಕೆ ಪ್ರಾರಂಭವಾಗಲಿದೆ. ಪಂದ್ಯದ ನೇರ ಪ್ರಸಾರವು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
  2. ಆರ್‌ಸಿಬಿ ಖರೀದಿಸಿರುವ ಪ್ರಮುಖ ವೇಗದ ಬೌಲರ್‌, ಸ್ವಿಂಗ್‌ ಕಿಂಗ್ ಭುವನೇಶ್ವರ್ ಕುಮಾರ್ ಕೆಕೆಆರ್‌ ವಿರುದ್ಧದ ಪಂದ್ಯ ಆಡಿರಲಿಲ್ಲ. ಅವರು ಫಿಟ್ ಆದರೆ ಸಿಎಸ್‌ಕೆ ವಿರುದ್ಧ ಆಡಬಹುದು. ಆದರೆ ಇದು ಇನ್ನೂ ಖಚಿತವಾಗಿಲ್ಲ. ಚೆನ್ನೈ ಪಿಚ್ ಸ್ಪಿನ್‌ಗೆ ಹೆಚ್ಚು ಅನುಕೂಲಕರವಾಗಿರುವುದರಿಂದ ಲೆಗ್‌ಸ್ಪಿನ್ ಆಲ್‌ರೌಂಡರ್ ಮೋಹಿತ್ ರಾಥಿ ಅಥವಾ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ತಂಡ ಸೇರಿಕೊಳ್ಳಬಹುದು.
  3. ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಆರ್‌ಸಿಬಿ ತಂಡಗಳ ನಡುವಿನ ಮುಖಾಮುಖಿಯಲ್ಲಿ ಸಿಎಸ್‌ಕೆ ಮೇಲುಗೈ ಸಾಧಿಸಿದೆ. ಆರ್‌ಸಿಬಿ ತಂಡ ಕೇವಲ 11 ಪಂದ್ಯಗಳನ್ನು ಗೆದ್ದರೆ, ಚೆನ್ನೈ 22 ಪಂದ್ಯಗಳಲ್ಲಿ ಗೆದ್ದಿದೆ.
  4. ಚೆನ್ನೈನಲ್ಲಿ ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಆರ್‌ಸಿಬಿ ಈವರೆಗೆ ಗೆದ್ದಿದ್ದು 1 ಪಂದ್ಯ ಮಾತ್ರ. ಅದು ಕೂಡಾ 2008ರಲ್ಲಿ ನಡೆದ ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿ. ಚೆಪಾಕ್‌ನಲ್ಲಿ ಸಿಎಸ್‌ಕೆ ತಂಡವು ಆರ್‌ಸಿಬಿ ವಿರುದ್ಧ ಸತತ ದಾಖಲೆಯ 8 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
  5. ಚೆಪಾಕ್‌ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ನಿಧಾನಗತಿಯ ಬೌಲರ್‌ಗಳಿಗೆ ಪಿಚ್‌ ನೆರವಾಗುವ ನಿರೀಕ್ಷೆ ಇದೆ. ನೂರ್‌ ಅಹ್ಮದ್, ಆರ್‌ ಅಶ್ವಿನ್, ರವೀಂದ್ರ ಜಡೇಜಾ ಸಿಎಸ್‌ಕೆ ತಂಡದ ಪ್ರಮುಖ ಅಸ್ತ್ರಗಳು. ಆರ್‌ಸಿಬಿ ಪಾಲಿಗೆ ಕೃನಾಲ್‌ ಪಾಂಡ್ಯ ಮತ್ತು ಸುಯಶ್‌ ಶರ್ಮಾ ಪ್ರಮುಖ ಬಲ.
  6. ಚೆನ್ನೈನಲ್ಲಿ ನಡೆಯಲಿರುವ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ನಡುವಿನ ಪಂದ್ಯಕ್ಕೆ ಮಳೆಯ ಆತಂಕ ಇಲ್ಲ. ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನವು ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದೆ.
  7. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸಿಎಸ್‌ಕೆ ವಿರುದ್ಧ ಆಡಿದ 32 ಇನ್ನಿಂಗ್ಸ್‌ಗಳಿಂದ 37.60ರ ಸರಾಸರಿಯಲ್ಲಿ 1,053 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್ 126.25. ಚೆಪಾಕ್‌ನಲ್ಲಿ ಕೊಹ್ಲಿ 29.46ರ ಸರಾಸರಿಯಲ್ಲಿ ಒಟ್ಟು 383 ರನ್‌ ಗಳಿಸಿದ್ದಾರೆ.
  8. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ದೇವದತ್ ಪಡಿಕ್ಕಲ್/ಮೋಹಿತ್ ರಥಿ, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಾಸಿಖ್‌ ಸಲಾಬ್/ಭುವನೇಶ್ವರ್‌ ಕುಮಾರ್/ ಸ್ವಪ್ನಿಲ್‌ ಸಿಂಗ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.
  9. ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ರಚಿನ್ ರವೀಂದ್ರ, ರುತುರಾಜ್ ಗಾಯಕ್‌ವಾಡ್ (ನಾಯಕ), ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶಿವಂ ದುಬೆ, ಸ್ಯಾಮ್ ಕರಾನ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ ಕೀಪರ್), ಆರ್ ಅಶ್ವಿನ್, ನಾಥನ್ ಎಲ್ಲಿಸ್, ನೂರ್ ಅಹ್ಮದ್ , ಖಲೀಲ್‌ ಅಹ್ಮದ್.
  10. ಉಭಯ ತಂಡಗಳ ನಡುವಿನ ಕೊನೆಯ ಪಂದ್ಯ 2024ರಲ್ಲಿ ನಡೆದಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 27 ರನ್‌ಗಳಿಂದ ರೋಚಕವಾಗಿ ಗೆದ್ದು ಬೀಗಿತ್ತು. ಆ ಪಂದ್ಯವು ಆರ್‌ಸಿಬಿ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸಿದ್ದು ಮಾತ್ರವಲ್ಲದೆ, ಸಿಎಸ್‌ಕೆ ತಂಡವನ್ನು ಟೂರ್ನಿಯಿಂದ ಹೊರಹಾಕಲು ನೆರವಾಗಿತ್ತು.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್‌ ಪಂದ್ಯ; ಚೆಪಾಕ್‌ನಲ್ಲಿ ಸ್ಪಿನ್ನರ್‌ಗಳು ಆಡಿದ್ದೇ ಆಟ, ಚೆನ್ನೈ ಪಿಚ್ ಹಾಗೂ ಹವಾಮಾನ ವರದಿ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner