ಅಭಿಷೇಕ್ ಶರ್ಮಾ ಚೀಟಿ ಸಂಭ್ರಮ ರಹಸ್ಯ ಕೊನೆಗೂ ಬಹಿರಂಗ; ಅದು ಇವತ್ತಿನ ಸ್ಲಿಪ್ ಅಲ್ಲ ಎಂದ ಟ್ರಾವಿಸ್ ಹೆಡ್
Travis Head: ಪಂಜಾಬ್ ಕಿಂಗ್ಸ್ ವಿರುದ್ಧ ಶತಕ ಸಿಡಿಸಿದ ಬಳಿಕ ಚೀಟಿ ತೆಗೆದು ವಿಶಿಷ್ಟವಾಗಿ ಸಂಭ್ರಮಿಸುವ ಮೂಲಕ ಅಭಿಷೇಕ್ ಶರ್ಮಾ ಎಲ್ಲರ ಗಮನ ಸೆಳೆದಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಐಪಿಎಲ್ ಶತಕ ಸಿಡಿಸಿದ ಬೆನ್ನಲ್ಲೇ ಪ್ಯಾಂಟ್ ಜೇಬ್ನಿಂದ ಚೀಟಿ ತೆಗೆದು ಸಂಭ್ರಮಿಸಿದ್ದು ಎಲ್ಲರ ಗಮನ ಸೆಳೆದಿದೆ. ಅದಕ್ಕೆ ಕಾರಣ ಏನೆಂದು ಸಹ ಆಟಗಾರ ಟ್ರಾವಿಸ್ ಹೆಡ್ ವಿವರಿಸಿದ್ದಾರೆ. ಐಪಿಎಲ್ನ 27ನೇ ಪಂದ್ಯದಲ್ಲಿ ಕಿಂಗ್ಸ್ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿ ಹಲವು ದಾಖಲೆ ಬರೆದ ಎಡಗೈ ಆಟಗಾರ, ಇದು ಆರೆಂಜ್ ಆರ್ಮಿಗಾಗಿ ಎಂದು ಚೀಟಿಯಲ್ಲಿ ಬರೆದುಕೊಂಡಿದ್ದರು. ಇದರ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು. ಶ್ರೇಯಸ್ ಅಯ್ಯರ್ 82 ರನ್ ಸಿಡಿಸಿ ಮಿಂಚಿದರು. ಬೃಹತ್ ಗುರಿ ಬೆನ್ನಟ್ಟಿದ ಎಸ್ಆರ್ಹೆಚ್, 18.3 ಓವರ್ಗಳಲ್ಲೇ 247 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. 40 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್ ಶರ್ಮಾ ಒಟ್ಟಾರೆ 55 ಎಸೆತಗಳಲ್ಲಿ 14 ಬೌಂಡರಿ, 10 ಬೌಂಡರಿ ಸಹಿತ 141 ರನ್ ಗಳಿಸಿ ಗಳಿಸಿ ದಾಖಲೆ ನಿರ್ಮಿಸಿದರು. ಹೆಡ್ ಮತ್ತು ಅಭಿಷೇಕ್ ಆರಂಭಿಕ ವಿಕೆಟ್ಗೆ 171 ರನ್ಗಳ ಜೊತೆಯಾಟವಾಡಿ ದಾಖಲೆಯೂ ಬರೆದರು.
ಇದನ್ನೂ ಓದಿ: ಐಪಿಎಲ್ ಬೆಟ್ಟಿಂಗ್, ಮೂವರ ಬಂಧನ
40 ಎಸೆತಗಳಲ್ಲಿ ನೂರರ ಗಡಿ ದಾಟುತ್ತಿದ್ದಂತೆ ಅಭಿಷೇಕ್, ಜೇಬ್ನಿಂದ ಚೀಟಿ ತೆಗೆದು ವಿಶಿಷ್ಟವಾಗಿ ಸಂಭ್ರಮಿಸಿದರು. ಇದು ಎಲ್ಲರ ಗಮನ ಸೆಳೆಯಿತು. ಈ ಸಂಭ್ರಮಾಚರಣೆ ಹಿಂದಿರುವ ರಹಸ್ಯ ಏನೆಂದು ಟ್ರಾವಿಸ್ ಹೆಡ್ ಬಹಿರಂಗಪಡಿಸಿದ್ದಾರೆ. ಈ ಚೀಟಿ ಪಂದ್ಯಕ್ಕೆ ಜೇಬ್ನಲ್ಲಿ ಇಟ್ಟುಕೊಂಡವರಲ್ಲವಂತೆ! ಕಳೆದ 6 ಪಂದ್ಯಗಳಿಂದಲೂ ಈ ಚೀಟಿಯನ್ನು ಜೇಬ್ನಲ್ಲೇ ಇಟ್ಟುಕೊಂಡು ಆಡುತ್ತಿದ್ದರಂತೆ! ಹೀಗಂತ ಟ್ರಾವಿಸ್ ಹೆಡ್ ಸ್ಲಿಪ್ ಹಿಂದಿರುವ ಗುಟ್ಟು ರಟ್ಟು ಮಾಡಿದ್ದಾರೆ.
ಚೀಟಿ ಗುಟ್ಟು ಬಿಟ್ಟುಕೊಟ್ಟ ಹೆಡ್
ಪಂದ್ಯದ ನಂತರ ಮಾತನಾಡಿದ ಟ್ರಾವಿಸ್ ಹೆಡ್, ‘ಈ ಸ್ಲಿಪ್ ಅನ್ನು ಋತುವಿನ ಆರಂಭದ ಪಂದ್ಯದಿಂದಲೂ ಅಭಿಷೇಕ್ ಜೇಬಿನಲ್ಲಿ ಇಟ್ಟುಕೊಂಡೇ ಆಡುತ್ತಿದ್ದಾರೆ. ಆದರೆ ಆರನೇ ಪಂದ್ಯದಲ್ಲಿ ಮಾತ್ರ ಅದನ್ನು ಹೊರತೆಗೆದು ಪ್ರದರ್ಶಿಸಲು ಅವಕಾಶ ಸಿಕ್ಕಿದೆ’ ಎಂದು ಹೇಳಿದ್ದಾರೆ. ಈ ಸ್ಲಿಪ್ ಅನ್ನು ಕೊನೆಗೂ ಹೊರತೆಗೆದಿದ್ದಕ್ಕೆ ನನಗೆ ಸಂತಸವಾಗಿದೆ. ಈವರೆಗೆ ಮೌನವಾಗಿದ್ದ ಅಭಿಷೇಕ್ ಬ್ಯಾಟ್ ಘರ್ಜಿಸಿದೆ. ಮುಂದಿನ ಪಂದ್ಯಗಳಲ್ಲೂ ಇದೇ ಫಾರ್ಮ್ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಸ್ಆರ್ಹೆಚ್ ದಾಖಲೆಯ ಚೇಸಿಂಗ್; ಹಲವು ದಾಖಲೆಗಳ ವಿವರ
ಇನ್ನಿಂಗ್ಸ್ ಕುರಿತು ಅಭಿಷೇಕ್ ಮಾತು
ತಮ್ಮ ಬಿರುಗಾಳಿಯ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಅಭಿಷೇಕ್, ‘ಈ ಪಂದ್ಯವು ತುಂಬಾ ವಿಶೇಷವಾಗಿದೆ. ಏಕೆಂದರೆ ತಂಡದ ಸೋಲಿನ ಸರಣಿ ಮುರಿಯಲು ಬಯಸಿದ್ದೆ. ಸತತ 4 ಪಂದ್ಯಗನ್ನು ಸೋತಿದ್ದನ್ನು ಅರಗಿಸಿಕೊಳ್ಳುವುದು ಕಠಿಣವಾಗಿತ್ತು. ಆದರೆ ಈ ಬಗ್ಗೆ ಎಂದೂ ಮಾತನಾಡಲಿಲ್ಲ’ ಎಂದು ಹೇಳಿದ್ದಾರೆ. ಇನ್ನು ತನಗೆ ಬೆಂಬಲ ನೀಡಿದವರನ್ನು ಇದೇ ವೇಳೆ ನೆನೆದರು. ‘ಯುವಿ ಪಾಜಿ (ಯುವರಾಜ್ ಸಿಂಗ್) ಮತ್ತು ಸೂರ್ಯಕುಮಾರ್ (ಯಾದವ್) ಅವರು ನನ್ನೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಬೆಂಬಲ ನೀಡುತ್ತಿದ್ದರು’ ಎಂದು ಅಭಿಷೇಕ್ ಕೃತಜ್ಞತೆ ಸಲ್ಲಿಸಿದ್ದಾರೆ.
ಹೈದರಾಬಾದ್ಗೆ ಎರಡನೇ ಗೆಲುವು
ಸನ್ರೈಸರ್ಸ್ ಹೈದಾರಾಬಾದ್ ಸತತ 4 ಸೋಲುಗಳ ನಂತರ ಹಳಿಗೆ ಮರಳಿದೆ. ಆರಂಭಿಕ ಪಂದ್ಯದಲ್ಲಿ 286 ರನ್ ಸಿಡಿಸಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಬೀಗಿದ್ದ ಎಸ್ಆರ್ಹೆಚ್ ತದನಂತರ ಸತತ 4 ಪಂದ್ಯಗಳಲ್ಲಿ ಸೋಲಿನೊಂದಿಗೆ ಟೀಕೆಗೆ ಗುರಿಯಾಗಿತ್ತು. ಇದೀಗ ಕೊನೆಗೂ ಗೆದ್ದು ಗೆಲುವಿನ ಟ್ರ್ಯಾಕ್ಗೆ ಬಂದಿದ್ದು, ಅದೇ ಲಯ ಮುಂದುವರೆಸುವ ವಿಶ್ವಾಸದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು, 4 ಸೋಲಿನೊಂದಿಗೆ 4 ಅಂಕ ಕಲೆ ಹಾಕಿದೆ. ನೆಟ್ ರನ್ ರೇಟ್ -1.245 ಹೊಂದಿದೆ.
