ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೂ ಭಾರತಕ್ಕೆ ದಕ್ಕಲಿಲ್ಲ ಜಯ; ಸೌತ್ ಆಫ್ರಿಕಾಗೆ 3 ವಿಕೆಟ್ಗಳ ರೋಚಕ ಗೆಲುವು
South Africa vs India 2nd T20I: ಟೀಮ್ ಇಂಡಿಯಾ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಸೌತ್ ಆಫ್ರಿಕಾ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿತು.
ಸೌತ್ ಆಫ್ರಿಕಾ: ಮೊದಲ ಟಿ20ಐನಲ್ಲಿ 61 ರನ್ಗಳಿಂದ ಭರ್ಜರಿ ಗೆಲುವು ಕಂಡಿದ್ದ ಭಾರತ ತಂಡ, ಎರಡನೇ ಪಂದ್ಯದಲ್ಲಿ ಮೂರು ವಿಕೆಟ್ಗಳಿಂದ ಮುಗ್ಗರಿಸಿದೆ. ವರುಣ್ ಚಕ್ರವರ್ತಿ ಭರ್ಜರಿ ಬೌಲಿಂಗ್ ನಡುವೆಯೂ ಮಿಂಚಿದ ಟ್ರಿಸ್ಟಾನ್ ಸ್ಟಬ್ಸ್, ಸೋಲಿನ ಸುಳಿಗೆ ಸಿಲುಕಿದ್ದ ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು ತಂದುಕೊಟ್ಟರು. ಗ್ಕೆಬರ್ಹಾದ ಸೇಂಟ್ ಜಾರ್ಜ್ನಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವಿನೊಂದಿಗೆ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಭಾರತ ತನ್ನ ನಿಗದಿತ ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ 19 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
125 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡವು, ವರುಣ್ ಚಕ್ರವರ್ತಿ ಸ್ಪಿನ್ ದಾಳಿಗೆ ಅಕ್ಷರಶಃ ನಲುಗಿತು. ಘಟಾನುಘಟಿ ಆಟಗಾರರೇ ತವರಿನ ಪಿಚ್ನಲ್ಲಿ ರನ್ ಗಳಿಸಿದ್ದು ಅಚ್ಚರಿ ಎನಿಸಿತು. ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ 11 ರನ್ ಗಳಿಸಿ ಅರ್ಷದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಐವರು ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಪೆವಿಲಿಯನ್ ಸೇರಿದರು. ರೀಜಾ ಹೆಂಡ್ರಿಕ್ಸ್ 24 ರನ್ ಗಳಿಸಿದರೆ, ನಾಯಕ ಏಡನ್ ಮಾರ್ಕ್ರಮ್ 3, ಮಾರ್ಕೋ ಜಾನ್ಸನ್ 7, ಹೆನ್ರಿಚ್ ಕ್ಲಾಸೆನ್ 2, ಡೇವಿಡ್ ಮಿಲ್ಲರ್ ಶೂನ್ಯಕ್ಕೆ ಔಟಾದರು. ಇದರೊಂದಿಗೆ ಸೌತ್ ಆಫ್ರಿಕಾ ಸೋಲಿನ ಭೀತಿಗೆ ಸಿಲುಕಿತು. 66ಕ್ಕೆ 6 ಮಂದಿ ಔಟಾದರು. ಇದರ ನಡುವೆ ರವಿ ಬಿಷ್ಣೋಯ್ ದಾಳಿ ನಡೆಸಿ 7 ರನ್ ಸಿಡಿಸಿದ್ದ ಆಂಡಿಲೆ ಸಿಮೆಲೆನ್ ಅವರನ್ನು ಹೊರದಬ್ಬಿದರು.
ಆದರೂ ಟ್ರಿಸ್ಟಾನ್ ಸ್ಟಬ್ಸ್ ಅವರು ಏಕಾಂಗಿ ಹೋರಾಟ ನಡೆಸಿದರು. ಸತತ ವಿಕೆಟ್ಗಳ ನಡುವೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಬ್ಸ್, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜೆರಾಲ್ಡ್ ಕೊಯೆಟ್ಜಿ ಈ ವೇಳೆ ಸಖತ್ ಸಾಥ್ ಕೊಟ್ಟರು. ಕೊನೆಯಲ್ಲಿ ಜೆರಾಲ್ಡ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 18 ರನ್ ಚಚ್ಚಿದರು. ಆದರೆ ಕೊನೆಯಲ್ಲಿ ಬೌಲರ್ಗಳು ತಂಡಕ್ಕೆ ನೆರವಾಗಲಿಲ್ಲ. ಕೊನೆಯ 4 ಓವರ್ಗಳಲ್ಲಿ 37 ರನ್ ಬೇಕಿತ್ತು. ಆದರೆ ಸ್ಟಬ್ಸ್-ಜೆರಾಲ್ಡ್ ಸ್ಫೋಟಕ ಬ್ಯಾಟಿಂಗ್ ನಡೆಸಿ 1 ಓವರ್ ಬಾಕಿ ಉಳಿಸಿ ಆಫ್ರಿಕಾಗೆ ಜಯ ತಂದುಕೊಟ್ಟರು. 41 ಎಸೆತಗಳಲ್ಲಿ 7 ಬೌಂಡರಿ ಸಹಿತ 47 ರನ್ ಬಾರಿಸಿ ಅಜೇಯರಾದರು.
ಕೈಕೊಟ್ಟ ಬ್ಯಾಟರ್ಸ್, ಕೊನೆಯಲ್ಲಿ ಹಾರ್ದಿಕ್ ಆಸರೆ
ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್, 2ನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ (4) ಮತ್ತು ಸೂರ್ಯಕುಮಾರ್ ಯಾದವ್ ಸಹ (4) ಮತ್ತೆ ಕೈಕೊಟ್ಟರು. ಅಗ್ರ ಕ್ರಮಾಂಕದ ಟಾಪ್-3 ಬ್ಯಾಟರ್ಸ್ 15 ರನ್ಗಳಿಗೆ ಔಟಾದರು. ಬಳಿಕ ತಿಲಕ್ ವರ್ಮಾ ಚೇತರಿಕೆ ನೀಡಲು ಯತ್ನಿಸಿದರು. ಆದರೆ, 20 ರನ್ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಗಿತ್ತು. ಆದರೆ ಈ ವೇಳೆ ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಆಸರೆಯಾದರು.
ಟೈಟ್ ಬೌಲಿಂಗ್ ನಡುವೆಯೂ ಅಕ್ಷರ್ 21 ಎಸೆತಗಳಲ್ಲಿ 27 ರನ್ ಚಚ್ಚಿದರು. ಹಾರ್ದಿಕ್ 45 ಎಸೆತಗಳಲ್ಲಿ 39 ರನ್ ಬಾರಿಸಿದರು. ಇದು ಸ್ಲೋ ಇನ್ನಿಂಗ್ಸ್ ಆದರೂ ತಂಡದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿದರು. ರಿಂಕು ಸಿಂಗ್ 9 ಮತ್ತು ಅರ್ಷದೀಪ್ 7 ರನ್ ಕಲೆ ಹಾಕಿದರು. ಕಳೆದ ಪಂದ್ಯದಲ್ಲಿ 200ರ ಗಡಿ ದಾಟಿದ್ದ ಭಾರತ ತಂಡ, ಎರಡನೇ ಪಂದ್ಯದಲ್ಲಿ ಬೌಲಿಂಗ್ ಪಿಚ್ನಲ್ಲಿ 100ರ ಗಡಿ ದಾಟಲು ತಿಣುಕಾಡಿದರು. ರನ್ ಗಳಿಸಲು ಪರದಾಡಿದರು. ಮತ್ತೊಂದೆಡೆ ಸೌತ್ ಆಫ್ರಿಕಾ ಬೌಲರ್ಸ್ ಮಾರಕ ಬೌಲಿಂಗ್ ಪ್ರದರ್ಶಿಸಿ ಟೀಮ್ ಇಂಡಿಯಾವನ್ನು 124 ರನ್ಗಳಿಗೆ ಕಟ್ಟಿ ಹಾಕಿದರು.