ತುಮಕೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; 25 ಎಕರೆಯಲ್ಲಿ ತಲೆ ಎತ್ತಲಿರುವ ಮೈದಾನ ಚಿನ್ನಸ್ವಾಮಿಗೆ ಪರ್ಯಾಯವೇ?
Tumkur News: ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡಿಸುವ ಮತ್ತೊಂದು ಕ್ರಿಕೆಟ್ ಮೈದಾನ ಇಲ್ಲ. ಈಗ ಬೆಂಗಳೂರಿಗೆ ಹೊಂದಿಕೊಂಡಿರುವ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ಕರ್ನಾಟಕದಲ್ಲಿ ಹಲವು ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂಗಳು ತಲೆ ಎತ್ತಿವೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕ್ರಿಕೆಟ್ ಮೈದಾನಗಳಿದ್ದು, ಯುವ ಪ್ರತಿಭೆಗಳಿಗೆ ನೆರವಾಗುತ್ತಿವೆ. ಇದೀಗ ತುಮಕೂರು ಜಿಲ್ಲೆಯಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಒಂದು ವೇಳೆ ಕಾಮಗಾರಿ ಪೂರ್ಣಗೊಂಡರೆ ಇದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನಕ್ಕೆ ಪರ್ಯಾಯ ಎಂದು ಹೇಳಲಾಗುತ್ತಿದೆ.
ತುಮಕೂರು ಜಿಲ್ಲಾ ಕೇಂದ್ರದಿಂದ ಹೊರವಲಯದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣದ ಜೊತೆಗೆ ಅಕಾಡೆಮಿ ನಿರ್ಮಿಸುವ ವಿಚಾರವನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ ಅವರು ಇತ್ತೀಚೆಗೆ ಪ್ರಸ್ತಾಪಿಸಿದ್ದರು. ಹಾಗಾಗಿ, ವಸಂತನರಸಾಪುರ ಪ್ರದೇಶದ 4ನೇ ಕೈಗಾರಿಕಾ ಹಂತದ ಗೊಲ್ಲಹಳ್ಳಿ ಭಾಗದಲ್ಲಿ 20 ರಿಂದ 25 ಎಕರೆಯನ್ನು ಇಂಟರ್ನ್ಯಾಷನಲ್ ಸ್ಟೇಡಿಯಂ ಕಟ್ಟಲು ಜಾಗವನ್ನು ಗುರುತಿಸಲಾಗಿದೆ.
ಅಧಿಕಾರಿಗಳ ಜೊತೆಗೆ ಸಚಿವ ಪರಮೇಶ್ವರ ಅವರು ಜಾಗವನ್ನು ಪರಿಶೀಲಿಸಿದ್ದರು. ಸದ್ಯ ಜಾಗವನ್ನೇನೋ ಗುರುತಿಸಲಾಗಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಒಪ್ಪಿಗೆ ನೀಡುವುದು ಮಾತ್ರ ಬಾಕಿ ಇದೆ. ಕೆಎಸ್ಸಿಎ ನಿಯಮದ ಪ್ರಕಾರ, ನಗರದಿಂದ ಕೂಗಳತೆಯ ದೂರದಲ್ಲಿದ್ದರೆ ಮಾತ್ರ ಅನುಮತಿ ಸಿಗಲಿದೆ. ಕೆಎಸ್ಸಿಎ ಒಪ್ಪಿಗೆ ನೀಡಿದರೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈಗಾಗಲೇ ನೀಲಿ ನಕ್ಷೆಯನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಇದನ್ನೂ ಓದಿ | ಗಾಯಗೊಂಡು ಎನ್‌ಸಿಎ ತಲುಪಿದ ರವೀಂದ್ರ ಜಡೇಜಾ; ಇಂಗ್ಲೆಂಡ್ ಸರಣಿಯ ಉಳಿದ ಪಂದ್ಯಗಳಿಗೆ ಮರಳೋದು ಡೌಟ್
ಕರ್ನಾಟಕದಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಮೈದಾನ ಹೊರತುಪಡಿಸಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡಿಸುವ ಮತ್ತೊಂದು ಕ್ರಿಕೆಟ್ ಮೈದಾನ ಇಲ್ಲ. ಈ ನಡುವೆ ಬೆಂಗಳೂರಿಗೆ ಹೊಂದಿಕೊಂಡಿರುವ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಸಿದ್ಧತೆಗಳು ನಡೆಯುತ್ತಿವೆ. ಹಾಗಾಗಿ ಇದೆಲ್ಲ ಸಾಧ್ಯವಾದರೆ, ತುಮಕೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಅಲ್ಲದೆ, ಪ್ರತಿಭಾವಂತ ಕ್ರಿಕೆಟಿಗರಿಗೆ ಸೂಕ್ತ ತರಬೇತಿ ಸಿಗುವುದರ ಜೊತೆ ಉದ್ಯೋಗ ಸೃಷ್ಟಿಯೂ ಆಗಲಿದೆ.
ಹಾಗೊಂದು ವೇಳೆ ಕೆಎಸ್ಸಿಎ ಒಪ್ಪಿಗೆ ಕೊಟ್ಟರೆ, ಭೂಮಿ ಹಸ್ತಾಂತರಕ್ಕೆ ಬೇಕಾದ ಕ್ರಮಗಳನ್ನು ಜರುಗಿಸುವಂತೆ ಸಚಿವ ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀರೇಹಳ್ಳಿ ಮತ್ತು ಗೊಲ್ಲಹಳ್ಳಿ ಎರಡೂ ಗ್ರಾಮಗಳ ಭೂಮಿ ಕುರಿತ ಅಗತ್ಯ ದಾಖಲೆಗಳನ್ನು ರೆಡಿಮಾಡಿಕೊಳ್ಳಿ. ಕೆಎಸ್ಸಿಎ ಅಧಿಕಾರಿಗಳು ಭೇಟಿ ನೀಡಿದ ಪರಿಶೀಲನೆ ನಡೆಸಿದಾಗ ಅವರಿಗೆ ಈ ದಾಖಲೆ ಒದಗಿಸಿ. ಭೂಮಿಯನ್ನು ಡಿನೋಟಿಫಿಕೇಶನ್ ಪಡೆಯಲು ಪೊಲೀಸರ ನೆರವು ಪಡೆಯಿರಿ ಎಂದು ಪರಮೇಶ್ವರ ಈ ಹಿಂದೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದನ್ನೂ ಓದಿ | ವಾಷಿಂಗ್ಟನ್ ಸುಂದರ್ ಇನ್, ರಜತ್ ಪಾಟೀದಾರ್ ಪದಾರ್ಪಣೆ; ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ಬೆಳ್ಳಾವಿ ಹೋಬಳಿಗೆ ಸೇರುವ ಗೊಲ್ಲಹಳ್ಳಿ ಗ್ರಾಮದ 8 ಮತ್ತು 9ನೇ ಸರ್ವೆ ನಂಬರ್ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಭೂ ಸ್ವಾಧೀನವಾಗಿದೆ. ಸುಮಾರು 24 ಎಕರೆ ಭೂಮಿ ಇದೆ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಪರಿಶೀಲನೆ ವೇಳೆ ಸಚಿವರಿಗೆ ಮಾಹಿತಿ ನೀಡಿದ್ದರು. ಆಗ ಈ ಸ್ಥಳಕ್ಕೆ ಒಪ್ಪಿಗೆ ಸಿಕ್ಕರೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದ ನಂತರವೇ ಕಂದಾಯ ಇಲಾಖೆಗೆ ಹಸ್ತಾಂತರವಾಗಲಿದೆ. ಆ ಬಳಿಕವೇ ಕೆಎಸ್ಸಿಎಗೆ ಭೂಮಿ ನೀಡಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದರು.
ಇದನ್ನೂ ಓದಿ | ಅಂಡರ್ 19 ವಿಶ್ವಕಪ್‌ನಲ್ಲಿ 2ನೇ ಶತಕ ಸಿಡಿಸಿದ ಮುಶೀರ್ ಖಾನ್; ಧವನ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ
ಪರಿಹಾರ ನೀಡಿ ಕೆಲಸ ಆರಂಭಿಸಿ
ಪರಿಶೀಲನೆ ವೇಳೆಯ ರೈತರಿಗೆ ತಕ್ಷಣ ಪರಿಹಾರ ಕೊಡಿಸಿ. ರಸ್ತೆ ಕಾಮಗಾರಿ ಆರಂಭಿಸಿ. ಭೂಮಿ ಸ್ವಾಧೀನವಾದ ನಂತರ ಅಲ್ಲಿ ರೈತರು ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಅರಿವು ಮೂಡಿಸಿ. ಒಂದು ವೇಳೆ ಪರಿಹಾರ ಹೆಚ್ಚು ಬೇಕೆಂದರೆ ಮತ್ತು ಇತರೆ ಬೇಡಿಕೆಗಳಿದ್ದರೆ, ಸೂಕ್ತ ಕ್ರಮ ಕೈಗೊಂಡು ಬಗೆಹರಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದರು.
(This copy first appeared in Hindustan Times Kannada website. To read more like this please logon to kannada.hindustantime.com)